ಮಂಡ್ಯ : ಹಣಕಾಸಿನ ಕೊರತೆಯ ನೆಪವೊಡ್ಡಿ ವಿಶ್ವ ವಿದ್ಯಾಲಯಗಳನ್ನು ಮುಚ್ಚುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ಸರ್ಕಾರ ಆರ್ಥಿಕ ದಿವಾಳಿಯಾರುವ ಸಂಕೇತವೇ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಮಂಡ್ಯ ವಿಶ್ವವಿದ್ಯಾಲಯ ಮುಚ್ಚುತ್ತಿರುವುದನ್ನು ವಿರೋಧಿಸಿ ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಕಾನೂನಾತ್ಮಕವಾಗಿ ಮಂಡ್ಯ ವಿವಿ ಮುಚ್ಚಲು ಸಾಧ್ಯವಿಲ್ಲ. ಗೊಂದಲಕಾರಿ ಸ್ಥಿತಿ ನಿರ್ಮಾಣ ಮಾಡಿ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತಿದ್ದಾರೆ. ಮಕ್ಕಳ ಶೈಕ್ಷಣಿಕ ಭವಿಷ್ಯ ಉಜ್ವಲಗೊಳಿಸಲು ನಾವು ಹೋರಾಟ ನಡೆಸುತ್ತೇವೆ. ಯೋಗ್ಯವಾದ ಶಿಕ್ಷಣ ಕಲಿತಾಗ ಮಾತ್ರ ಸಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ಮಂಡ್ಯಕ್ಕೊಂದು ವಿವಿ ಬೇಕು ಎಂದು ಗುರುತಿಸಿದ್ದು ಕೇಂದ್ರ ಸರ್ಕಾರ. ೨೦೧೩ರಲ್ಲಿ ಇಡೀ ದೇಶದಲ್ಲಿ ನಾಲ್ಕು ಕಾಲೇಜುಗಳನ್ನು ಆಯ್ಕೆ ಮಾಡಿದ್ದರು. ಅದರಲ್ಲಿ ಮಂಡ್ಯ ಕಾಲೇಜು ಕೂಡ ಒಂದು. ಹೀಗಾಗಿ ಮಂಡ್ಯ ಸ್ವಾಯತ್ತ ಮಹಾ ವಿದ್ಯಾಲಯವನ್ನು ವಿಶ್ವವಿದ್ಯಾಲಯವಾಗಿ ಪರಿವರ್ತಿಸಲಾಯಿತು. ಕಾನೂನು ಪ್ರಕಾರವಾಗಿಯೇ ಮಂಡ್ಯ ವಿವಿಯನ್ನು ರಚಿಸಲಾಗಿದೆ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಸರ್ಕಾರಕ್ಕೆ ಬೇಕಿರೋದು ಕಮಿಷನ್ ಮಾತ್ರ. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕೆಂಬ ಇಚ್ಛಾಶಕ್ತಿಯೇ ಇಲ್ಲ. ಮಂಡ್ಯ ವಿವಿ ಉತ್ತಮವಾಗಿ ಮುನ್ನಡೆಯುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. ಹಲವು ಉಪನ್ಯಾಸಕರಿಗೆ ಕೆಲಸ ದೊರಕಿದೆ. ಸಮೃದ್ಧಿಯಾಗಿದ್ದ ಮಂಡ್ಯ ಜಿಲ್ಲೆಯನ್ನು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಕಾಂಗ್ರೆಸ್‌ನವರು ದೂಡಿದ್ದಾರೆ. ಬಡತನ ಹೆಚ್ಚುತ್ತಿರುವ ಜಿಲ್ಲೆ ಮಂಡ್ಯ ಆಗಿದೆ ಎಂದರು.
ಮಂಡ್ಯಗೆ ಕೃಷಿ ವಿವಿ ತರುತ್ತಿರುವುದನ್ನು ನಾವೂ ಸ್ವಾಗತಿಸುತ್ತೇವೆ. ಆದರೆ, ಮಂಡ್ಯ ವಿವಿ ಮುಚ್ಚುತ್ತಿರುವುದನ್ನು ನಾವು ಒಪ್ಪುವುದಿಲ್ಲ. ಅದರ ಉಳಿವಿಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಪುನರುಚ್ಚರಿಸಿದರು.
ಪಕ್ಷ ಸದೃಢ, ಯಾರ ಅವಶ್ಯಕತೆಯೂ ಇಲ್ಲ: ಡಾ.ಅಶ್ವತ್ಥನಾರಾಯಣ
ಮಂಡ್ಯ : ಬಿಜೆಪಿ ಪಕ್ಷ ಸದೃಢವಾಗಿದೆ. ನಮಗೆ ಯಾರ ಅವಶ್ಯಕತೆಯೂ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಪಕ್ಷ ಸೇರಿಸಿಕೊಳ್ಳುವ ಕುರಿತಾದ ಪ್ರಶ್ನೆಗೆ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದರು.
ಡಿ.ಕೆ.ಶಿವಕುಮಾರ್ ದೊಂಬರಾಟದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅದರ ಬಗ್ಗೆ ಮಾತನಾಡಲ್ಲ. ನಮ್ಮ ಪಕ್ಷ ಸದೃಢವಾಗಿದ್ದು, ಯಾರ ಅವಶ್ಯಕತೆಯೂ ಇಲ್ಲ. ಬರಬೇಕಾದವರು ಮುಂದಿನ ಬಾಗಿಲಿನಲ್ಲಿ ಬರುತ್ತಾರೋ, ಹಿಂದಿನ ಬಾಗಿಲಲ್ಲಿ ಬರುತ್ತಾರೋ ನನಗೆ ಗೊತ್ತಿಲ್ಲ. ಇಂತಹದರ ಬಗ್ಗೆ ನಾನು ಮಾತನಾಡುವುದಿಲ್ಲ. ಡಿಕೆಶಿ ಮಾತ್ರ ಕದ ತಟ್ಟಬೇಕು, ಸಿದ್ದರಾಮಯ್ಯ ತಟ್ಟಲ್ಲ ಎಂದೇನಾದರೂ ಇದೆಯಾ. ರಾಜಕೀಯದಲ್ಲಿ ಯಾರು ಬೇಕಾದರೂ ಬರಬಹುದು, ಯಾರು ಬೇಕಾದರೂ ಹೋಗಬಹುದು ಎಂದು ಉತ್ತರಿಸಿದರು.
ಬಿಜೆಪಿ-ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಜಮೀರ್ ಹೇಳಿಕೆಗೆ ವಾಗ್ದಾಳಿ ನಡೆಸಿದ ಅವರು, ನಿನ್ನ ಸಂಪರ್ಕದಲ್ಲಿದ್ದರೆ ಏನು ಬೇಕಾದರೂ ಮಾಡಪ್ಪ. ನಿನಗೆ ಅಡ್ಡ ಬರುತ್ತಿರುವವರು ಯಾರು. ನಿನಗೆ ತಾಕತ್ತಿದ್ದರೆ ಮಾಡಿ ತೋರಿಸಪ್ಪ. ಗಾಜಿನ ಮನೆಯಲ್ಲಿರುವವರೆಲ್ಲ ನಮಗೆ ಸವಾಲು ಹಾಕುತ್ತಾರೆ ಎಂದು ಕುಟುಕಿದರು.
ನಾನು ಯಾರ ಮೇಲೂ ದ್ವೇಷ ಮಾಡುವುದಿಲ್ಲ. ಕಾಂಗ್ರೆಸ್‌ನವರ ರೀತಿ ಕೀಳುಮಟ್ಟದ ರಾಜಕಾರಣ ಮಾಡಲ್ಲ. ಯಾವತ್ತಾದ್ರೂ ನಾವೂ ಈ ಪಕ್ಷದವರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದಿದ್ದೇವೆಯೇ. ಯಾರು ಹೋಗುವವರು ಇದ್ದಾರೋ ಅವರನ್ನು ಕರೆದುಕೊಂಡು ಹೋಗಲಿ ಎಂದು ಜಮೀರ್‌ಗೆ ಸವಾಲೆಸೆದರು.
ಅವರ ಪಕ್ಷದಲ್ಲಿನ ಜಗಳವನ್ನು ಮುಚ್ಚಿಕೊಳ್ಳಲು ನಮ್ಮ ತೋರಿಸುತ್ತಿದ್ದಾರೆ. ನಮ್ಮನ್ನ ತೋರಿಸಿ ಅವರ ಸಿಎಂ ಸ್ಥಾನ ಭದ್ರ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಬ್ಲಾಕ್‌ಮೇಲ್ ತಂತ್ರ ಮಾಡುತ್ತಿದ್ದಾರೆ. ಮುಂದೆ ಚುನಾವಣೆಗೆ ಹೋಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುತ್ತೇವೆ ಎಂದು ವಿಶ್ವಾಸದಿಂದ ನುಡಿದರು.