ಬಳ್ಳಾರಿ: ಇಲ್ಲಿನ ಜನಾರ್ದನ ರೆಡ್ಡಿ ಮನೆಯ ಮುಂಭಾಗ ಗುರುವಾರ ರಾತ್ರಿ ಜರುಗಿದ ಬ್ಯಾನರ್ ಗಲಾಟೆ ಪ್ರಕರಣದ ಸತ್ಯಾಸತ್ಯತೆಯನ್ನು ಅವಲೋಕಿಸಲು ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ನೇತೃತ್ವದ ನಿಯೋಗ ಬಳ್ಳಾರಿಗೆ ಶನಿವಾರ ಭೇಟಿ ನೀಡಿತು.
ಬೆಳಿಗ್ಗೆ 11 ಗಂಟೆಗೆ ಶುರುವಾದ ಸಭೆ ಸಂಜೆ 4 ಗಂಟೆವರೆಗೆ ಜರುಗಿತು. ಬಳಿಕ ಘಟನಾ ಸ್ಥಳಕ್ಕೆ ತೆರಳಿದ ನಿಯೋಗ, ವೀಕ್ಷಣೆ ಮಾಡಿತು. ಅಲ್ಲಿಂದ ಹುಸೇನ್ ನಗರಕ್ಕೆ ತೆರಳಿದ ನಿಯೋಗದ ಸದಸ್ಯರು ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟ ರಾಜಶೇಖರ ರೆಡ್ಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ನಿಯೋಗ ಭೇಟಿ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಎಚ್.ಎಂ. ರೇವಣ್ಣ, ಬಳ್ಳಾರಿಯಲ್ಲಿ ಗುರುವಾರ ರಾತ್ರಿ ಜರುಗಿದ ಬ್ಯಾನರ್ ಗಲಭೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ಹಿನ್ನೆಲೆಯಲ್ಲಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದೇವೆ. ಚುನಾಯಿತ ಪ್ರತಿನಿಧಿಗಳು, ಪ್ರತ್ಯಕ್ಷದರ್ಶಿಗಳು ಹಾಗೂ ಅಧಿಕಾರಿಗಳಿಂದ ಘಟನೆ ಕುರಿತು ಮನವರಿಕೆ ಮಾಡಿಕೊಂಡಿದ್ದೇವೆ. ವರದಿಯನ್ನು ಮೂರು ದಿನದೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.ನಿಯೋಗ ವರದಿಯನ್ನು ಮಾಧ್ಯಮಗಳಿಗೆ ಬಹಿರಂಗಗೊಳಿಸಲು ಬರುವುದಿಲ್ಲ. ಸರ್ಕಾರವೇ ಇದನ್ನು ಬಹಿರಂಗಪಡಿಸುತ್ತದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಸರ್ಕಾರ ತೆಗೆದುಕೊಂಡಿರುವ ನಿರ್ಧಾರವಾಗಿದೆ. ಮೃತ ಯುವಕನ ಕುಟುಂಬಕ್ಕೆ ಸರ್ಕಾರ ಹಾಗೂ ಪಕ್ಷ ನೆರವು ನೀಡಲಿದೆ ಎಂದು ತಿಳಿಸಿದರು.