ಕಂಪ್ಲಿ: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಅವರ ವಿರುದ್ಧ ಕಾನೂನುಬದ್ಧವಾಗಿ ಸೂಕ್ತ ಹಾಗೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಂಸದ ಇ.ತುಕಾರಾಂ ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ವರ್ಷಗಳ ಕಾಲ ಸ್ಥಿರವಾಗಿರಲಿದ್ದು, ಜನರಿಗೆ ನೀಡಿರುವ ಭರವಸೆಯಂತೆ ಆಡಳಿತ ನಡೆಸುತ್ತಿದೆ. ಹೈಕಮಾಂಡ್, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಎಲ್ಲರೂ ಒಟ್ಟಾಗಿ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಂಸದರು ತಿಳಿಸಿದರು.
ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದ ಅವರು, ಸಂಸದರ ಅನುದಾನದಿಂದ ₹5 ಕೋಟಿಯನ್ನು ಎಂಟು ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹80 ಲಕ್ಷದಂತೆ ವಿತರಿಸಲಾಗುವುದು. ಈ ಅನುದಾನದಡಿ ರೈತ ಸಂಪರ್ಕ ಕೇಂದ್ರಗಳಿಗೆ ಪ್ರೊಜೆಕ್ಟರ್, ಏಳು ಪ್ರೌಢಶಾಲೆಗಳಿಗೆ ಡಿಜಿಟಲ್ ಗ್ರಂಥಾಲಯ, ಕ್ರೀಡಾಪಟುಗಳಿಗೆ ₹1 ಲಕ್ಷ ಮೌಲ್ಯದ ಕ್ರೀಡೋಪಕರಣ, ಶ್ರವಣ ಮತ್ತು ವಾಕ್ ಚೇತನರಿಗೆ ಅಗತ್ಯ ಸಹಾಯಕ ಸಾಧನಗಳನ್ನು ಒದಗಿಸಲಾಗುವುದು ಎಂದು ವಿವರಿಸಿದರು.ಹೊಸಪೇಟೆಯಿಂದ ಕರ್ನಾಟಕ ಗಡಿವರೆಗೆ ಐದು ಪ್ಲೈಓವರ್‌ಗಳನ್ನು ಬದಲಿಸುವ ಯೋಜನೆ ರೂಪಿಸಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಯೋಜನೆಗೆ ಹಸಿರು ನಿಶಾನೆ ತೋರಿದ್ದಾರೆ. ಜೊತೆಗೆ ಗಂಗಾವತಿ- ದರೋಜಿ ವಯಾ ಕಂಪ್ಲಿ ಬ್ರಾಡ್ ಗೇಜ್ ರೈಲು ಸಂಪರ್ಕ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನದ ಕುರಿತು ಚರ್ಚೆ ನಡೆಸಬೇಕಿದೆ ಎಂದು ಹೇಳಿದರು.
ಬಡೇಸಾಹೇಬ್ ದರ್ಗಾ ಹಿಂದೂ- ಮುಸ್ಲಿಮರ ಭಾವೈಕ್ಯತೆಯ ಪ್ರತೀಕವಾಗಿದೆ. ಶಾಂತಿ ಮತ್ತು ಸೌಹಾರ್ದದ ಸಂದೇಶವನ್ನು ಸಾರುವ ಕೇಂದ್ರವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಧರ್ಮಗುರು ಸೈಯದ್ ಷಾಹ್ ಅಬುಲ್ ಹಸನ್ ಖಾದ್ರಿ ಉರುಫ್ ಆಜಂಪಾಷಾ ಖಾದ್ರಿ ಸಾಹೇಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಪ್ರಮುಖರಾದ ಎಂ. ಸುಧೀರ್ ಉಪಸ್ಥಿತರಿದ್ದರು.