ನಗರದ ಮಂಡಿಪೇಟೆಯಲ್ಲಿರುವ ಆರಾಧ್ಯ ದೇವಿ ಶ್ರೀ ಬನ್ನಿಮಹಂಕಾಳಿ ದೇವತೆ ಕರಗ ಮಹೋತ್ಸವ ಜುಲೈ 28ರಂದು ರಾತ್ರಿ ನೆರವೇರಲಿದ್ದು, ಜುಲೈ 29ರಂದು ಬೆಳಗ್ಗೆ ಅಗ್ನಿಕೊಂಡೋತ್ಸವ ಜರುಗಲಿದೆ.
29ರಂದು ಬೆಳಗ್ಗೆ ಅಗ್ನಿಕೊಂಡೋತ್ಸವ
ಕರಗ ಅದ್ಧೂರಿಯಾಗಿ ನೆರವೇರಿಸಲು ಸಕಲ ಸಿದ್ಧತೆ
ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಮಂಡಿಪೇಟೆಯಲ್ಲಿರುವ ಆರಾಧ್ಯ ದೇವಿ ಶ್ರೀ ಬನ್ನಿಮಹಂಕಾಳಿ ದೇವತೆ ಕರಗ ಮಹೋತ್ಸವ ಜುಲೈ 28ರಂದು ರಾತ್ರಿ ನೆರವೇರಲಿದ್ದು, ಜುಲೈ 29ರಂದು ಬೆಳಗ್ಗೆ ಅಗ್ನಿಕೊಂಡೋತ್ಸವ ಜರುಗಲಿದೆ.
ಶ್ರೀ ಬನ್ನಿಮಹಂಕಾಳಿ ದೇವತೆಯನ್ನು ನಾನೂರು ವರ್ಷಗಳಿಂದ ಭಕ್ತರು ಆರಾಧಿಸುತ್ತಾ ಬಂದಿದ್ದು, ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವಕ್ಕೂ ಮುನ್ನ ಬನ್ನಿಮಹಂಕಾಳಿ ಅಮ್ಮನವರ ಕರಗ ಅದ್ಧೂರಿಯಾಗಿ ನೆರವೇರಿಸಲು ಸಕಲ ಸಿದ್ಧತೆ ಭರದಿಂದ ಸಾಗಿದೆ. ಈ ವರ್ಷವೂ ಆರ್.ಎನ್.ಯೋಗೇಶ್ ಕರಗಧಾರಣೆ ಮಾಡುತ್ತಿದ್ದಾರೆ. ಹಿನ್ನಲೆ ಏನು?:
ನಾನೂರು ವರ್ಷಗಳ ಹಿಂದೆ ಮೈಸೂರು ರಾಜರ ಸಂಸ್ಥಾನದಲ್ಲಿದ್ದ ಭಕ್ಷಿ ಬಾಲಾಜಿ ಅವರು ಕೊಲ್ಲಾಪುರದಿಂದ ಮೈಸೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ರಾತ್ರಿಯ ವೇಳೆಯಲ್ಲಿ ಅವರಿಗೆ ಕನಸೊಂದು ಬಿದ್ದಿತ್ತು. ಅವರ ಕನಸಿನಲ್ಲಿ ದೇವಿಯು ಕಾಣಿಸಿಕೊಂಡು ತನಗೊಂದು ನೆಲೆ ಕಾಣಿಸುವಂತೆ ಭಕ್ಷಿ ಬಾಲಾಜಿ ಅವರಲ್ಲಿ ಕೋರಿದಳು. ಇದರಿಂದ ಸಂತೋಷಗೊಂಡ ಅವರು ಎಲ್ಲಿ ಎಂದು ಕೇಳಲಾಗಿ ದೇವಿಯು ''''''''ನಾನು ನಿನ್ನ ಬಂಡಿಯ ಹಿಂದೆ ಬರುತ್ತೇನೆ. ಎಲ್ಲಿ ನನ್ನ ಗೆಜ್ಜೆಯ ನಾದ ನಿಲ್ಲುತ್ತದೆಯೋ ಅಲ್ಲಿ ನನಗೆ ಗುಡಿಯನ್ನು ಕಟ್ಟಿಸು'''''''' ಎಂದು ತಿಳಿಸಿದಳು.
ಕೊಲ್ಲಾಪುರದಿಂದ ಮೈಸೂರಿಗೆ ಎತ್ತಿನ ಬಂಡಿಯಲ್ಲಿ ಹಿಂದಿರುಗುವಾಗ ಎತ್ತಿನ ಬಂಡಿಯ ಹಿಂದೆ ಬರುತ್ತಿದ್ದ ಗೆಜ್ಜೆಯ ನಾದ ಅಂದಿನ ಕ್ಲೋಸ್ ಪೇಟೆ ಬಳಿಯಲ್ಲಿದ್ದ ಬನ್ನಿ ಮರದ ಕೆಳಗೆ ನಿಂತಿತು. ಈ ಸ್ಥಳದಲ್ಲಿ ತನ್ನನ್ನು ಪ್ರತಿಷ್ಠಾಪನೆ ಮಾಡುವಂತೆ ದೇವಿಯು ಭಕ್ಷಿ ಬಾಲಾಜಿ ಅವರನ್ನು ಕೋರಿದಳು. ಆದ್ದರಿಂದ ಬನ್ನಿ ಮರದ ಕೆಳಗೆ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಅಂದಿನಿಂದ ದೇವಿಯನ್ನು ಬಂಡಿ ಹಿಂದೆ ಬಂದ ಕಾರಣ ''''''''ಬಂಡಿ ಮಹಂಕಾಳಿ'''''''' ಎಂತಲೂ ಮತ್ತು ಬನ್ನಿ ಮರದ ಕೆಳಗೆ ಸ್ಥಾಪಿತವಾಗಿದ್ದರಿಂದ ''''''''ಬನ್ನಿಮಹಂಕಾಳಿ'''''''' ಎಂತಲೂ ಕರೆದು ಪೂಜಿಸುತ್ತಾರೆ.
ಅಂದಿನಿಂದ ಇಂದಿನವರೆಗೂ ಅಮ್ಮನವರನ್ನು ವರ್ಷಕ್ಕೊಮ್ಮೆ ಅದ್ಧೂರಿಯಾಗಿ ಕರಗದ ಮೂಲಕ ಆರಾಧಿಸಲಾಗುತ್ತದೆ. ಪ್ರಾರಂಭದಲ್ಲಿ ಧರ್ಮಲಿಂಗು ಎನ್ನುವವರು ಬೆಟ್ಟದ ಮಲ್ಲಿಗೆ ಮತ್ತು ಬೇವಿನಸೊಪ್ಪಿನ ಕಳಸ ಹೊತ್ತು ಅಗ್ನಿಕೊಂಡ ಪ್ರವೇಶ ಮಾಡುತಿದ್ದರು. ಈಗ ಆರ್.ಎನ್.ಯೋಗೇಶ್ ಕರಗಧಾರಣೆ ಮಾಡುತ್ತಿದ್ದಾರೆ.ರಾಮನಗರದಲ್ಲಿ ಬನ್ನಿಮಹಾಂಕಾಳಿ ಕರಗವೇ ಮೊದಲು ಪ್ರಾರಂಭವಾಗಿದ್ದು, ಈಗ ನಗರದಲ್ಲಿ ಒಂಬತ್ತು ಕರಗಗಳ ಉತ್ಸವ ನಡೆಯುತ್ತದೆ. ಮಂಗಳವಾರ ತಡರಾತ್ರಿ 2 ಗಂಟೆಗೆ ಪ್ರಾರಂಭವಾಗಿ ನಗರದಲ್ಲಿ ಸಂಚರಿಸಿ ಬೆಳಿಗ್ಗೆ 5 ಗಂಟೆ ವೇಳೆಗೆ ಕರಗ ಅಗ್ನಿಕೊಂಡ ಪ್ರವೇಶ ಮಾಡುತಿತ್ತು. ಈಗ ರಾಮನಗರ ನಗರ ವ್ಯಾಪ್ತಿ ಹೆಚ್ಚಾಗಿ ಬೆಳೆಯುತ್ತಿದೆ. ಈಗ ರಾತ್ರಿ 10 ಗಂಟೆಗೆ ಕರಗ ದೇವಾಲಯದಿಂದ ಹೊರಟರೆ ಅಗ್ನಿಕೊಂಡ ಪ್ರವೇಶಿಸುವುದು ಬೆಳಿಗ್ಗೆ 8 ಗಂಟೆಯಾಗುತ್ತದೆ ಎಂದು ದೇವಾಲಯದ ಪ್ರಧಾನ ಅರ್ಚಕ ಎಂ.ಎಸ್. ವಿನಯ್ ಕುಮಾರ್ ಶಾಸ್ತ್ರಿ ತಿಳಿಸಿದರು.ರೋಗರುಜಿನ ಬರುವುದಿಲ್ಲ :
ಬನ್ನಿಮಹಾಂಕಾಳಿ ದೇವಿಯು ಪ್ರತಿಷ್ಠಾಪನೆಗೊಂಡಾಗಿನಿಂದಲೂ ಇದುವರೆಗೆ ಹಳೆ ರಾಮನಗರ ಪ್ರಾಂತ್ಯದ ಭಾಗದಲ್ಲಿ ಯಾವುದೇ ಸಾಮೂಹಿಕ ಕಾಯಿಲೆಗಳಾಗಲಿ ಅಥವಾ ರೋಗ ರುಜಿನಗಳಾಗಲಿ ಬರುವುದಿಲ್ಲ ಎಂಬುದು ಇಲ್ಲಿನ ನಾಗರಿಕರ ನಂಬಿಕೆಯಾಗಿದೆ ಎಂದು ಬನ್ನಿಮಹಂಕಾಳಮ್ಮ ಜೀರ್ಣೋದ್ಧಾರ ಸಮಿತಿ ಸದಸ್ಯ ರವಿಕಿರಣ್ ಪ್ರತಿಕ್ರಿಯೆ ನೀಡಿದರು.
------------------------------
...ಬಾಕ್ಸ್ ....
ರಾಮನಗರದ ಮಂಡಿಪೇಟೆಯಲ್ಲಿರುವ ಶ್ರೀ ಬನ್ನಿ ಮಹಾಂಕಾಳಿ ಅಮ್ಮನವರ ದೇವಸ್ಥಾನ ನೂರಾರು ವರ್ಷಗಳ ಇತಿಹಾಸ, ಅಚಲ ಭಕ್ತಿ, ನಿರಂತರ ಪರಂಪರೆ ಹೊಂದಿದೆ. ಇದು ಕೇವಲ ಒಂದು ದೇವಾಲಯವಲ್ಲ, ಅದು ನಗರದ ಶಕ್ತಿ, ಸಂಸ್ಕೃತಿ ಮತ್ತು ನಂಬಿಕೆಯ ಪ್ರತೀಕ. ಈ ಕರಗೋತ್ಸವವು ಕೇವಲ ಒಂದು ಆಚರಣೆಯಲ್ಲ, ಇದು ಭಕ್ತಿ, ಶಕ್ತಿ ಮತ್ತು ಪರಂಪರೆಯ ಸಂಗಮವಾಗಿದೆ.---------------------------------
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.