ಗ್ರಾಮೀಣ ಭಾಗದಲ್ಲಿ ಗ್ರಾಮೋತ್ಸವ : ಕ್ರೀಡೆ ಮೂಲಕ ಜಾತಿ ತಾರತಮ್ಯ ದೂರ - ಸದ್ಗುರು

KannadaprabhaNewsNetwork | Updated : Dec 23 2024, 09:13 AM IST

ಸಾರಾಂಶ

ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ‌ ಬಳಿಯ ಆದಿಯೋಗಿ ಈಶಾ ಕೇಂದ್ರಕ್ಕೆ ಭಾನುವಾರ ಸದ್ಗುರು ಅವರು ಭೇಟಿ ನೀಡಿದರು.

 ಚಿಕ್ಕಬಳ್ಳಾಪುರ : ತಾಲೂಕಿನ ಆವಲಗುರ್ಕಿ‌ ಬಳಿಯ ಆದಿಯೋಗಿ ಈಶಾ ಕೇಂದ್ರಕ್ಕೆ ಭಾನುವಾರ ಸದ್ಗುರು ಅವರು ಭೇಟಿ ನೀಡಿದರು. ಸದ್ಗುರು ಅವರ ಆಗಮನದ ಹಿನ್ನೆಲೆಯಲ್ಲಿ ಈಶಾ ಸನ್ನಿಧಾನಕ್ಕೆ ಸಹಸ್ರಾರು ಭಕ್ತರು ಆಗಮಿಸಿ, ಅವರ ದರ್ಶನ ಪಡೆದರು.

ಈ ವೇಳೆ, ಸುದ್ದಿಗೋಷ್ಠಿ ನಡೆಸಿದ ಸದ್ಗುರು, ಈಶಾ ಸಂಸ್ಥೆ ವತಿಯಿಂದ ಕಳೆದ 24 ವರ್ಷಗಳಿಂದ ಗ್ರಾಮೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ಚಿಕ್ಕಬಳ್ಳಾಪುರ ಕೇಂದ್ರದಲ್ಲಿ ಎರಡು ವರ್ಷಗಳಿಂದ ನಡೆಸುತ್ತಿದ್ದೇವೆ. ಗ್ರಾಮೀಣ ಭಾಗದ ಜನ ಮದ್ಯವ್ಯಸನಿಗಳಾಗುತ್ತಿದ್ದಾರೆ. ಅವರ ಜೀವನದಲ್ಲಿ ಉತ್ಸಾಹ, ಚೈತನ್ಯ ತುಂಬುವ ಸಲುವಾಗಿ ಗ್ರಾಮೀಣ ಭಾಗದಲ್ಲಿ ಗ್ರಾಮೋತ್ಸವ ಕ್ರೀಡೆಗಳನ್ನು ಆಯೋಜನೆ ಮಾಡುತ್ತಿದ್ದೇವೆ. ಆ ಮೂಲಕ ಅವರನ್ನು ಮದ್ಯವ್ಯಸನ ಮುಕ್ತರನ್ನಾಗಿ ಮಾಡಲು ಶ್ರಮಿಸುತ್ತಿದ್ದೇವೆ. ಕ್ರೀಡೆಗಳ ಮೂಲಕ ಜಾತಿ ತಾರತಮ್ಯ ದೂರ ಮಾಡುತ್ತಿದ್ದೇವೆ ಎಂದರು.

ಈಶಾ ಫೌಡೇಷನ್‌ನಿಂದ ಮೂರು ಜಿಲ್ಲೆಗಳಲ್ಲಿ ರೈತ ಉತ್ಪಾದಕ ಕಂಪನಿಗಳನ್ನು ಆರಂಭ ಮಾಡಿದ್ದು, ರೈತರಿಗೆ ಬೇಕಾದ ಬಿತ್ತನೆ ಬೀಜದಿಂದ ಹಿಡಿದು ಎಲ್ಲವನ್ನು ಸರಿಸುಮಾರು ಶೇ.30ರಷ್ಟು ಕಡಿಮೆ ಬೆಲೆಗೆ ನೀಡಲಾಗುತ್ತಿದೆ. ಬಿತ್ತನೆ ಬೀಜಗಳ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ. ಇದರಿಂದ ರೈತರು 300 ರಿಂದ 500 ಪಟ್ಟು ಹೆಚ್ಚಿನ ಲಾಭಾಂಶವನ್ನು ಕಾಣುತ್ತಿದ್ದಾರೆ. ಸದ್ಯಕ್ಕೆ 10 ಸಾವಿರ ರೈತರಿಗೆ ಈ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಲು ಸನ್ನದ್ಧರಾಗಿದ್ದೇವೆ ಎಂದರು.

ಕಾವೇರಿ ಕೂಗು ಮತ್ತು ಮಣ್ಣು ಉಳಿಸಿ ಅಭಿಯಾನದೊಂದಿಗೆ ಮುಂದೆ ‘ಮಿರಾಕಲ್’ ಎನ್ನುವ ಆ್ಯಪ್‌ ಅನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಮಿರಾಕಲ್ ಆ್ಯಪ್‌ ಮೂಲಕ ಜನತೆಗೆ ಮಾನಸಿಕ ದೃಢತೆಯನ್ನು ಅವರಲ್ಲಿರುವ ಇಂದ್ರಿಯಗಳ ಮೂಲಕ ಚುರುಕುಗೊಳಿಸಿ ಅವರನ್ನು ಒತ್ತಡಮುಕ್ತ ಮಾಡುವುದು ಮುಖ್ಯ ಉದ್ದೇಶ. ಈ ಆ್ಯಪ್‌ನಿಂದ ಪ್ರಪಂಚದಾದ್ಯಂತ 300 ಕೋಟಿ ಜನರಿಗೆ ಏಕಕಾಲದಲ್ಲಿ ಧ್ಯಾನದ ಸಂದೇಶ ನೀಡಬಹುದಾಗಿದೆ ಎಂದರು.

ಪರಿಸರದಲ್ಲಿಂದು ಮರ ಬೆಳೆಯುವಿಕೆಯಿಂದ ರೈತರು ವಿಮುಖರಾಗುತ್ತಿದ್ದಾರೆ. ಇದಕ್ಕೆ ಸರ್ಕಾರದ ನೀತಿಗಳು ಕಾರಣವಾಗಿವೆ. ರೈತ ತಾನೇ ಬೆಳೆದ ಮರವನ್ನು ಕಡಿಯಲು ಸರ್ಕಾರದ ಅನುಮತಿ ಬೇಕಿತ್ತು. ಇದರಿಂದ ಶ್ರೀಗಂಧದ ನಾಡು ಎಂದು ಖ್ಯಾತಿ ಗಳಿಸಿದ್ದ ಕರ್ನಾಟಕ ಈಗ ಆಸ್ಟ್ರೇಲಿಯಾದಿಂದ ಶ್ರೀಗಂಧವನ್ನು ಆಮದು ಮಾಡಿಕೊಳ್ಳುತ್ತಿದೆ. ರೈತರು ಹೆಚ್ಚಾಗಿ ಶ್ರೀಗಂಧ ಮತ್ತಿತರ ಮರಗಳನ್ನು ಬೆಳೆಯಲು ಅವುಗಳ ಮೇಲಿನ ಹಕ್ಕನ್ನು ರೈತರಿಗೆ ನೀಡಬೇಕು ಎಂದು ಆಗ್ರಹಿಸಿದರು.

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಮತ್ತು ಹಿಂದೂ ಸನ್ಯಾಸಿಗಳ ಮೇಲಿನ ದೌರ್ಜನ್ಯ ಖಂಡಿಸಿದ ಸದ್ಗುರು, ಬಾಂಗ್ಲಾದೇಶ ಉದ್ಭವವಾಗಲು ಭಾರತದ ಕೊಡುಗೆಯನ್ನು ಮರೆಯುವಂತಿಲ್ಲ. ಬಾಂಗ್ಲಾದೇಶ ಉದಯಿಸಲು ಭಾರತದ 11 ಸಾವಿರ ಸೈನಿಕರು ಹುತಾತ್ಮರಾಗಿದ್ದಾರೆ. ಇದನ್ನು ಬಾಂಗ್ಲಾದೇಶ ಮರೆತಿದೆ ಎಂದು ವಿಷಾದಿಸಿದರು.

Share this article