ಕಾಪು: ಇಲ್ಲಿನ ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಳದಲ್ಲಿ ಮೂರು ದಿನಗಳ ಪರ್ಯಂತ ಜರುಗಿದ ೪೯ನೇ ವರ್ಷದ ಶ್ರೀಗಣೇಶೋತ್ಸವದ ವಿವಿಧ ಧಾರ್ಮಿಕ ಅನುಷ್ಟಾನಗಳು ಶ್ರೀಕ್ಷೇತ್ರದ ವೈದಿಕರಾದ ವೇದಮೂರ್ತಿ ಸಂದೇಶ್ ಭಟ್ ನೇತೃತ್ವದಲ್ಲಿ ಹಾಗೂ ವೈದಿಕ ಶ್ರೀಕಾಂತ್ ಭಟ್, ನರೇಶ್ ಭಟ್, ಮಂಜುನಾಥ್ ಭಟ್ ಸಹಭಾಗಿತ್ವದಲ್ಲಿ ಸಂಪನ್ನಗೊಂಡವು.ಶುಕ್ರವಾರ ಸಂಜೆ ಶ್ರೀಮಂಗಲಮೂರ್ತಿಯ ವಿಜರ್ಸನಾ ಪೂಜೆಯ ನಂತರ ಭವ್ಯ ಶೋಭಾಯಾತ್ರೆಯು ಬಂಟಕಲ್ಲು ದೇವಳದಿಂದ ಹೊರಟು ಪೇಟೆ ಮಾರ್ಗವಾಗಿ ಸಾಗಿ ಹೇರೂರು ಗಂಪ ಕೆರೆಯಲ್ಲಿ ಜಲಸ್ತಂಭನಗೊಳಿಸಲಾಯಿತು. ಕ್ಷೇತ್ರದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು, ಅಧ್ಯಕ್ಷ ಉಮೇಶ್ ಪ್ರಭು ಪಾಲಮೆ, ಉಪಾಧ್ಯಕ್ಷ ಎಳ್ಳಾರೆ ಪಾಂಡುರಂಗ ಕಾಮತ್, ಮಾಜಿ ಆಡಳಿತ ಮೊಕ್ತೇಸರರುಗಳಾದ ಸರಳೇಬೆಟ್ಟು ರಮಾನಾಥ ನಾಯಕ್, ಗುರ್ನೆಬೆಟ್ಟು ಗಣಪತಿ ನಾಯಕ್, ಸಡಂಬೈಲು ಶಶಿಧರ ವಾಗ್ಲೆ ಸಹಿತ ಆಡಳಿತ ಮಂಡಳಿಯ ಸದಸ್ಯರು, ರಾಜಾಪುರ ಸಾರಸ್ವತ ಸೇವಾವೃಂದ, ಶ್ರೀದುರ್ಗಾ ಮಹಿಳಾ ವೃಂದ, ಶ್ರೀದುರ್ಗಾ ಮಹೀಳಾ ಚಂಡೆಬಳಗದ ಪದಾಧಿಕಾರಿಗಳು, ಶ್ರೀಕ್ಷೇತ್ರದ ಭಗವದ್ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಶ್ರೀಕ್ಷೇತ್ರ ಮುಲ್ಕಾಡಿಯಲ್ಲಿ ಗಣೇಶೋತ್ಸವಇಲ್ಲಿನ ಶ್ರೀಕ್ಷೇತ್ರ ಮುಲ್ಕಾಡಿ ಶ್ರೀದುರ್ಗಾಪರಮೆಶ್ವರೀ ದೇವಳದಲ್ಲಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ಜರುಗಿದ ಎರಡು ದಿನಗಳ ಶ್ರೀಗಣೇಶೋತ್ಸವದ ವಿವಿಧ ಧಾರ್ಮಿಕ ಅನುಷ್ಠಾನಗಳು ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ಮಾರ್ಗದರ್ಶನದಲ್ಲಿ ಕ್ಷೇತ್ರದ ಅರ್ಚಕರಾದ ವೇ.ಮೂ.ಲೋಹಿತ್ ಭಟ್ ನೇತೃತ್ವದಲ್ಲಿ, ಸತೀಶ್ ಭಟ್, ನಾಗರಾಜ ಭಟ್,ಸಹಿತ ಇತರ ವೈದಿಕರ ಸಹಭಾಗಿತ್ವದಲ್ಲಿ ಸಂಪನ್ನಗೊಂಡವು. ಗುರುವಾರ ಸಂಜೆ ರಂಗಪೂಜೆ,ವಿಗ್ರಹದ ವಿಸರ್ಜನಾ ಪೂಜೆಯ ನಂತರ ಬೃಹತ್ ಶೋಭಾಯಾತ್ರೆಯೊಂದಿಗೆ ಪಂಜಿಮಾರು ಪಾಪನಾಶಿನಿ ಹೊಳೆಯಲ್ಲಿ ವಿಗ್ರಹದ ಜಲಸ್ತಂಭನ ನೆರವೇರಿತು. ಈ ಸಂದರ್ಭದಲ್ಲಿ ಸಮಿತಿಯ ಗೌರವ ಅಧ್ಯಕ್ಷ ದಿನಕರ ಶೆಟ್ಟಿ ಕೋಡುಗುಡ್ಡೆ, ಅಧ್ಯಕ್ಷ ಸಂತೋಷ್ ಶೆಟ್ಟಿ, ಶ್ರೀದೇವಳದ ಆಡಳಿತ ಮೊಕ್ತೇಸರ ಸುಧೀರ್ ಹೆಗ್ಡೆ, ಸಮಿತಿಯ ಕಾರ್ಯದರ್ಶಿ ಸುಕೇಶ್ ಪೂಜಾರಿ ವಲದೂರು ಮತ್ತಿತರರು ಹಾಜರಿದ್ದರು.