ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಗಡಿಯಾರ ಎಂಬಲ್ಲಿನ ಹೈಟೆನ್ಶನ್ ವಿದ್ಯುತ್ ತಂತಿಗಳೇ ಇದೀಗ ಸ್ಥಳೀಯರಿಗೆ ದೊಡ್ಡ ಟೆನ್ಶನ್ ಆಗಿದೆ. ಜನರ ದೈನಂದಿನ ಜೀವನವೇ ಈ ತಂತಿಗಳ ನಡುವೆ ಸಿಲುಕಿಕೊಂಡಂತಾಗಿದ್ದು, ಯಾವಾಗ ಏನಾಗುತ್ತದೆ ಎಂಬ ಭೀತಿ ನಿರಂತರವಾಗಿ ಕಾಡುತ್ತಿದೆ.
ಮೌನೇಶ ವಿಶ್ವಕರ್ಮ
ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಗಡಿಯಾರ ಎಂಬಲ್ಲಿನ ಹೈಟೆನ್ಶನ್ ವಿದ್ಯುತ್ ತಂತಿಗಳೇ ಇದೀಗ ಸ್ಥಳೀಯರಿಗೆ ದೊಡ್ಡ ಟೆನ್ಶನ್ ಆಗಿದೆ. ಜನರ ದೈನಂದಿನ ಜೀವನವೇ ಈ ತಂತಿಗಳ ನಡುವೆ ಸಿಲುಕಿಕೊಂಡಂತಾಗಿದ್ದು, ಯಾವಾಗ ಏನಾಗುತ್ತದೆ ಎಂಬ ಭೀತಿ ನಿರಂತರವಾಗಿ ಕಾಡುತ್ತಿದೆ.ಶನಿವಾರವಷ್ಟೇ ನಡೆದ ಬಾಲಕನ ದುರ್ಮರಣದ ಘಟನೆ ಈ ಸಮಸ್ಯೆಯ ಗಂಭೀರತೆಯನ್ನು ತೋರಿಸುವ ಒಂದು ಕಹಿ ಉದಾಹರಣೆಯಾಗಿದ್ದು, ಇಂತಹ ಘಟನೆಗಳ ಬಗೆಗಿನ ಆತಂಕ ಈ ಭಾಗದಲ್ಲಿ ಬಹು ಕಾಲದಿಂದಲೂ ಇರುವ ಅಪಾಯದ ಸಂಕೇತವಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ತಗ್ಗು ಪ್ರದೇಶಗಳಿಗೆ ಮಣ್ಣು ತುಂಬಿಸಿ ಭೂಮಿಯ ಮಟ್ಟವನ್ನು ಎತ್ತರಿಸಲಾಯಿತು. ಆದರೆ ಅದಕ್ಕೆ ಅನುಗುಣವಾಗಿ ವಿದ್ಯುತ್ ಕಂಬಗಳ ಎತ್ತರವನ್ನು ಹೆಚ್ಚಿಸುವುದು ಅಥವಾ ಹೈಟೆನ್ಶನ್ ತಂತಿಗಳನ್ನು ಮೇಲಕ್ಕೆ ಎತ್ತುವ ಕೆಲಸ ಕೈಗೊಳ್ಳಲಾಗಿಲ್ಲ. ಪರಿಣಾಮವಾಗಿ ಈಗ ಈ ತಂತಿಗಳು ಮನೆಗಳ ಹತ್ತಿರ, ತೋಟಗಳ ಮಧ್ಯೆ ಹಾಗೂ ರಸ್ತೆ ಬದಿಯಲ್ಲಿ ಅಪಾಯಕಾರಿಯಾಗಿ ಕೆಳ ಮಟ್ಟದಲ್ಲೇ ಹಾದು ಹೋಗುತ್ತಿವೆ.
ಸ್ಥಳೀಯರ ಹೇಳಿಕೆಯ ಪ್ರಕಾರ, ಮನೆಗಳ ಮೇಲ್ಛಾವಣಿ, ಮರಗಳ ಕೊಂಬೆಗಳು, ವಾಹನ ಸಂಚಾರಕ್ಕೆ ತುಂಬಾ ಹತ್ತಿರದಲ್ಲೇ ಈ ತಂತಿಗಳು ಇರುವುದರಿಂದ, ಯಾವಾಗ ಬೇಕಾದರೂ ಮತ್ತೊಂದು ಅನಾಹುತ ಸಂಭವಿಸಬಹುದು. ಮಕ್ಕಳು ಆಟವಾಡುವ ಸ್ಥಳಗಳಲ್ಲಿಯೂ ಈ ಅಪಾಯ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಈ ಕುರಿತು ಮೆಸ್ಕಾಂ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಲವು ಬಾರಿ ದೂರು ನೀಡಿದರೂ, ಯಾವುದೇ ಸ್ಪಷ್ಟ ಪರಿಹಾರ ಸಿಗದೆ, ಪರಸ್ಪರ ಹೊಣೆ ತಪ್ಪಿಸುವಿಕೆಯಲ್ಲೇ ಮುಂದುವರಿದಿದ್ದಾರೆ. ಮೆಸ್ಕಾಂ ಗೆ ಹೇಳಿದರೆ, ರಸ್ತೆ ಎತ್ತರಿಸಿದ್ದು ನಾವಲ್ಲ ಎಂದು ಜಾರಿಕೊಂಡರೆ, ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದರೆ ಕಂಬ, ತಂತಿ, ನಿರ್ವಹಣೆನಮ್ಮ ಕೆಲಸವಲ್ಲ ಎನ್ನುತ್ತಾರೆ ಎನ್ನಲಾಗಿದೆ. ಈ ನಿರ್ಲಕ್ಷ್ಯವೇ ಈಗ ಜನರಲ್ಲಿ ಅಸಹನೆಗೆ ಕಾರಣವಾಗಿದೆ.
“ಹೈಟೆನ್ಶನ್ ತಂತಿಗಳು ನಮ್ಮ ತಲೆಯ ಮೇಲೆ ಕತ್ತಿಯಂತೆ ತೂಗುತ್ತಿವೆ” ಎಂಬುದು ಸ್ಥಳೀಯರ ನೋವುಭರಿತ ಮಾತು. ಸಾರ್ವಜನಿಕ ಸುರಕ್ಷತೆ ಎಂಬ ಮೂಲಭೂತ ಜವಾಬ್ದಾರಿಯನ್ನು ಕಡೆಗಣಿಸಿದರೆ, ಇಂತಹ ದುರ್ಘಟನೆಗಳು ಮರುಕಳಿಸುವ ಸಾಧ್ಯತೆ ಹೆಚ್ಚಿದೆ.ಇಲಾಖೆಗಳು ಏನು ಮಾಡಬೇಕಿದೆ..?ಸಂಬಂಧಪಟ್ಟ ಇಲಾಖೆಗಳು—ಮೆಸ್ಕಾಂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ತಕ್ಷಣ ಎಚ್ಚೆತ್ತುಕೊಂಡು,* ಹೈಟೆನ್ಶನ್ ತಂತಿಗಳನ್ನು ಸುರಕ್ಷಿತ ಎತ್ತರಕ್ಕೆ ಸ್ಥಳಾಂತರಿಸುವುದು
* ಅಗತ್ಯವಿದ್ದಲ್ಲಿ ಕಂಬಗಳ ಎತ್ತರ ಹೆಚ್ಚಿಸುವುದು
* ಅಪಾಯ ಪ್ರದೇಶಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸುವುದು
ಇಂತಹ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಾಗಿದೆ.ಇಲ್ಲವಾದರೆ “ಹೈಟೆನ್ಶನ್ ವೈರ್‌ಗಳೇ ದೊಡ್ಡ ಟೆನ್ಶನ್” ಎಂಬ ಆತಂಕ ಇನ್ನಷ್ಟು ಗಂಭೀರವಾಗಿ ಮುಂದುವರಿಯುವುದು ಖಚಿತ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.