ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ತಿಂಗಳಿಗೆ ಕೇವಲ 4-5 ಹೆರಿಗೆ!

KannadaprabhaNewsNetwork |  
Published : Mar 08, 2026, 02:45 AM IST
ಡಾ.ನಾಗಲಕ್ಷ್ಮಿ ಚೌಧರಿ | Kannada Prabha

ಸಾರಾಂಶ

ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆಯಾಗುವ ಸಂಖ್ಯೆ ತೀವ್ರ ಕುಸಿತವಾಗಿರುವ ಆತಂಕಕಾರಿ ಮಾಹಿತಿ ತಿಳಿದುಬಂದಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.

ಮಂಗಳೂರು: ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆಯಾಗುವ ಸಂಖ್ಯೆ ತೀವ್ರ ಕುಸಿತವಾಗಿರುವ ಆತಂಕಕಾರಿ ಮಾಹಿತಿ ತಿಳಿದುಬಂದಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.

ಕಳೆದ 3 ದಿನಗಳಿಂದ ದ.ಕ. ಜಿಲ್ಲಾ ಪ್ರವಾಸ ಕೈಗೊಂಡಿರುವ ಅವರು ಶನಿವಾರ ಹಲವು ವಿಚಾರಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ತಿಂಗಳಿಗೆ ಕೇವಲ ನಾಲ್ಕರಿಂದ ಐದು ಹೆರಿಗೆಗಳಷ್ಟೇ ಆಗುತ್ತಿವೆ. ಏಕೆ ಹೀಗಾಗುತ್ತಿದೆ ಎಂದು ಪರಿಶೀಲನೆ ನಡೆಸಿದಾಗ ಅಲ್ಲಿ ಪ್ರಸೂತಿ ತಜ್ಞರು ಮತ್ತು ಅರವಳಿಕೆ ತಜ್ಞರ ಹುದ್ದೆ ಖಾಲಿ ಇದೆ ಎನ್ನುವುದು ಗೊತ್ತಾಯಿತು. ಈ ಕಾರಣದಿಂದ ಅಲ್ಲಿನ ಗರ್ಭಿಣಿಯರು 25 ಕಿ.ಮೀ. ದೂರದ ಮಂಗಳೂರಿನ ಲೇಡಿಗೋಶನ್‌ ಆಸ್ಪತ್ರೆಗೆ ಹೋಗುತ್ತಿದ್ದಾರೆ. ತಕ್ಷಣ ಬಂಟ್ವಾಳ ತಾಲೂಕು ಆಸ್ಪತ್ರೆಗೆ ಸೂಕ್ತ ಸವಲತ್ತು ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಕಾವೂರು ಠಾಣಾಧಿಕಾರಿಯಿಂದ ದೌರ್ಜನ್ಯ:

ದೌರ್ಜನ್ಯ ಪ್ರಕರಣಗಳು ಸೇರಿ 50ಕ್ಕೂ ಅಧಿಕ ಮಹಿಳೆಯರ ವಿವಿಧ ಅಹವಾಲುಗಳನ್ನು ಆಲಿಸಿದ್ದು, ಸ್ಥಳದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗಿದೆ. ಕಾವೂರು ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ದೂರುಗಳು ಬಂದವು. ಆ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಎಸಿಪಿ ಅವರಿಗೆ ನಿರ್ದೇಶನ ನೀಡಲಾಗಿದೆ. ಮಹಿಳಾ ಸ್ನೇಹಿ ವ್ಯವಸ್ಥೆ ಪೊಲೀಸ್‌ ಠಾಣೆಗಳಲ್ಲಿ ಇರಬೇಕು. ಲಿಂಗ ಸೂಕ್ಷ್ಮತೆಯ ಬಗ್ಗೆ ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ಮನವರಿಕೆ ಮಾಡಲು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಡಾ.ನಾಗಲಕ್ಷ್ಮಿ ಚೌಧರಿ ತಿಳಿಸಿದರು.ಉಚಿತ ಹಾಸ್ಟೆಲ್‌ ಇದ್ದರೂ ಬಸ್‌ ಇಲ್ಲ:

ಕೋಟೆಕಾರು ಮಡ್ಯಾರಿನ ಹಿಂದುಳಿದ ವರ್ಗಗಳ ವಸತಿ ನಿಲಯದ ವಿದ್ಯಾರ್ಥಿಗಳು ಹಾಸ್ಟೆಲ್‌ನಿಂದ ಶಿಕ್ಷಣ ಸಂಸ್ಥೆಗಳಿಗೆ ತೆರಳಲು ಬಸ್ಸಿನ ವ್ಯವಸ್ಥೆ ಇಲ್ಲದೆ ನಿತ್ಯ 100 ರು. ವ್ಯಯಿಸಬೇಕಾಗುತ್ತದೆ ಎಂದು ತಿಳಿಸಿದ್ದು, ಈ ಸಮಸ್ಯೆ ನೀಗಿಸುವಂತೆ ಜಿಲ್ಲಾಧಿಕಾರಿಗೆ ತಿಳಿಸಿರುವುದಾಗಿ ಹೇಳಿದರು.

ಹೊಸದಾಗಿ ನಿರ್ಮಾಣವಾದ ಮೀನು ಮಾರುಕಟ್ಟೆ ಪ್ರದೇಶವು ಹವಾನಿಯಂತ್ರಿತವಾಗಿದ್ದು, ಜಾಗದ ಕೊರತೆ, ಗಾಳಿಯ ಕೊರತೆ ಮತ್ತಿತರ ಕೊರತೆಗಳನ್ನು ಹೊಂದಿದೆ. ಎಸಿ ತಮಗೆ ಬೇಡ ಎಂದು ಮೀನುಗಾರ ಮಹಿಳೆಯರೇ ಹೇಳುತ್ತಿದ್ದಾರೆ. ಅದೆಲ್ಲವನ್ನೂ ಸರಿಪಡಿಸದೆ ಸ್ಟೇಟ್‌ ಬ್ಯಾಂಕ್‌ ಮೀನುಗಾರ ಮಹಿಳೆಯರನ್ನು ಸ್ಥಳಾಂತರ ಮಾಡದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕ್ರಮ ಕೈಗೊಂಡ ವರದಿ ನೀಡುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದರು. ಆ್ಯಸಿಡ್‌ ದಾಳಿ ಸಂತ್ರಸ್ತೆಗೆ ಪರಿಹಾರ

ಬೆಳ್ತಂಗಡಿಯಲ್ಲಿ ಕುಡಿತದ ಅಮಲಿನಲ್ಲಿ ಪತ್ನಿ ಮೇಲೆ ಪತಿಯೇ ಆ್ಯಸಿಡ್‌ ಚೆಲ್ಲಿದ ಘಟನೆ ಇತ್ತೀಚೆಗೆ ನಡೆದಿದ್ದು, ಇದರಿಂದ ಸಂತ್ರಸ್ತೆಯ ಎದೆ ಭಾಗ, ಕೈ ಸುಟ್ಟು ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯನ್ನು ಭೇಟಿಯಾಗಿ, ಸೂಕ್ತ ಪರಿಹಾರ, ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ ಈ ಹಿಂದಿನ ಮೂರು ಆ್ಯಸಿಡ್‌ ದಾಳಿ ಪ್ರಕರಣಗಳಲ್ಲೂ ಪರಿಹಾರ ಹಾಗೂ ಉಚಿತ ಶಸ್ತ್ರಚಿಕಿತ್ಸೆಗೆ ಸೂಚಿಸಲಾಗಿದೆ ಎಂದು ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೈಕ್‌ಗೆ ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿ ಸಂಚಾರ: ಪ್ರಕರಣ ದಾಖಲು
ಸಾಲದ ಹೊರೆ ಹೆಚ್ಚಿಸಿ, ಕರಾವಳಿ ಕಡೆಗಣಿಸಿದ ಬಜೆಟ್: ಕಾಮತ್‌