ಕನ್ನಡಪ್ರಭ ವಾರ್ತೆ ಬಂಟ್ವಾಳ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನ ಪ್ರಮಾಣ ದಾಖಲಾದ ಪಾಣೆಮಂಗಳೂರು ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 151, 152ರಲ್ಲಿ ಬಂಟ್ವಾಳ ತಾಲೂಕು ಸ್ವೀಪ್ ಸಮಿತಿ, ತಾಲೂಕು ಪಂಚಾಯಿತಿ, ತಾಲೂಕು ಕಂದಾಯ ಇಲಾಖೆ, ಬಂಟ್ವಾಳ ಪುರಸಭೆ ವತಿಯಿಂದ ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನ ಭಾನುವಾರ ನಡೆಯಿತು.ಅಭಿಯಾನ ಅಂಗವಾಗಿ ಧ್ವಜಾರೋಹಣ, ಸ್ವಚ್ಛತೆ, ಮತದಾನ ಪ್ರತಿಜ್ಞಾವಿಧಿ, ಗಿಡ ನೆಡುವ ಕಾರ್ಯಕ್ರಮ, ಜಾಗೃತಿ ಜಾಥಾ, ಸೆಲ್ಫಿ ಅಭಿಯಾನ ಹಾಗೂ ಬೀದಿನಾಟಕ ಕಾರ್ಯಕ್ರಮ ನಡೆಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಹಾಯಕ ಚುನಾವಣಾಧಿಕಾರಿ ಉದಯ ಕುಮಾರ್ ಶೆಟ್ಟಿ, ಪ್ರತಿ ಮತಗಟ್ಟೆಗಳಲ್ಲಿ ಶೇ.100ರಷ್ಟು ಮತದಾನವಾಗಬೇಕು ಎಂಬ ಉದ್ದೇಶದಿಂದ ಚುನಾವಣಾ ಆಯೋಗ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಯಾವುದೇ ಆಮಿಷಗಳಿಗೆ, ಆಸೆಗಳಿಗೆ ಬಲಿಯಾಗದೆ ಪ್ರತಿಯೊಬ್ಬರೂ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು. ಇದಕ್ಕಾಗಿ ಪ್ರತಿ ಚುನಾವಣೆ ವೇಳೆ ಸ್ವೀಪ್ ಸಮಿತಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಕಾಂಬಳೆ ಮಾತನಾಡಿ, ಮತದಾನ ನಮ್ಮ ಆದ್ಯ ಕರ್ತವ್ಯವಾಗಿದ್ದು, ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಿ ಅರ್ಹ ವ್ಯಕ್ತಿಯನ್ನು ಚುನಾಯಿಸುವುದರಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಶ್ರೀಧರ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ವಿಶ್ವನಾಥ್ ಬಿ., ತಾಪಂ ವ್ಯವಸ್ಥಾಪಕ ಪ್ರಕಾಶ್, ಪುರಸಭೆ ವ್ಯವಸ್ಥಾಪಕ ರಝಾಕ್, ಸ್ವೀಪ್ ಜಿಲ್ಲಾ ತರಬೇತುದಾರ ವಿಠ್ಠಲ್ ನಾಯಕ್, ಗ್ರಾಮ ಲೆಕ್ಕಾಧಿಕಾರಿ ಯಶ್ವಿತ, ಸ್ವೀಪ್ ತಾಲೂಕು ತರಬೇತುದಾರೆ ಸುರೇಖಾ, ಮಹೇಶ್ ಕುಮಾರ್, ಸ್ವೀಪ್ ಸಮಿತಿ ಸದಸ್ಯರಾದ ಪ್ರಶಾಂತ್, ರಾಜೇಶ್, ಪ್ರದೀಪ್ ಕಾಮತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶಾಲಿನಿ, ಅಂಗನವಾಡಿ ಮೇಲ್ವಿಚಾರಕರು, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪುರಸಭೆ ಮತ್ತು ತಾಲೂಕು ಪಂಚಾಯತ್ ಸಿಬ್ಬಂದಿ, ಸ್ಥಳೀಯ ಸಾರ್ವಜನಿಕರು ಭಾಗವಹಿಸಿದ್ದರು.ಸೆಲ್ಫಿ ಫೋಸ್: ಕಾರ್ಯಕ್ರಮದಲ್ಲಿ ಇಡಲಾಗಿದ್ದ ಸೆಲ್ಫಿ ಪಾಯಿಂಟ್ ಆಕರ್ಷಣೀಯವಾಗಿತ್ತು. ವಿವಿಧ ಇಲಾಖೆಗಳ ಸಿಬ್ಬಂದಿ, ಸಾರ್ವಜನಿಕರು, ಪುರಸಭೆ ಸಿಬ್ಬಂದಿ ಸೆಲ್ಫಿ ಕ್ಲಿಕ್ಕಿಸಿದರು. ಸೆಲ್ಫಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕುವ ಮೂಲಕ ಜಾಗೃತಿ ಮೂಡಿಸಿದರು.
ಬೀದಿನಾಟಕ, ಶ್ರಮದಾನ: ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನದ ಅಂಗವಾಗಿ ಮತಗಟ್ಟೆ ಸುತ್ತಮುತ್ತ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಜೊತೆಗೆ ಜಾಗೃತಿ ಜಾಥಾ ಹಮ್ಮಿಕೊಂಡು ಸಾರ್ವಜನಿಕರ ಅರಿವು ಮೂಡಿಸಲಾಯಿತು. ರಂಗಭೂಮಿ ಕಲಾವಿದ ಮೌನೇಶ್ ವಿಶ್ವಕರ್ಮ ಮಾರ್ಗದರ್ಶನದಲ್ಲಿ ಮತದಾನದ ಮಹತ್ವ ಸಾರುವ ಬೀದಿನಾಟಕ ನಡೆಯಿತು. ಬಂಟ್ವಾಳ ತಾಲೂಕಿನ 249 ಮತಗಟ್ಟೆಗಳಲ್ಲಿ ಧ್ವಜಾರೋಹಣ, ಜಾಥಾ, ಶ್ರಮದಾನ, ಮತದಾನ ಪ್ರತಿಜ್ಞಾವಿಧಿ ಬೋಧನೆ ನಡೆಯಿತು.