ಬಂಟ್ವಾಳ: ಪರಿಶಿಷ್ಟ ಜಾತಿ, ಪಂಗಡದ ಕುಂದುಕೊರತೆಗಳ ಸಭೆ

KannadaprabhaNewsNetwork | Published : Feb 8, 2024 1:33 AM

ಸಾರಾಂಶ

ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದಲ್ಲಿ ಹಿಂದೂ ರುದ್ರಭೂಮಿಗೆ ಸೂಕ್ತ ಜಾಗ ನಿಗದಿಯಾಗುವ ವಿಚಾರದ ಕುರಿತು ಗಡಿಗುರುತು ಆಗಿಲ್ಲ, ಮಂಜೂರಾತಿ ಆಗಿ ಇಷ್ಟು ವರ್ಷಗಳಾದರೂ ಇನ್ನೂ ಯಾಕೆ ಆಗಿಲ್ಲ ಎಂದು ಮುಖಂಡರು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಕಂದಾಯ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಪಂಗಡದ ಪ್ರತಿಯೊಂದು ಕಡತಗಳಿಗೆ ಪರಿಶೀಲಿಸಿ ಕ್ರಮಗೊಳ್ಳಲಾಗುವುದು ಎಂದು ಹಿಂಬರಹ ನೀಡಲಾಗುತ್ತಿದೆ, ಆದರೆ ಉಳಿದ ಕಡತಗಳು ಸರಾಗವಾಗಿ ಪರಿಹಾರ ಕಾಣುತ್ತಿದೆ ಎಂಬ ಆರೋಪ ಇಂದು ಬಿಸಿರೋಡಿನ ತಾ.ಪಂ. ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ, ಪಂಗಡದ ಕುಂದುಕೊರತೆಗಳ ಸಭೆಯಲ್ಲಿ ಕೇಳಿಬಂತು.

ಬಂಟ್ವಾಳ ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪಂಗಡ ಕುಂದು ಕೊರತೆ ಆಲಿಸುವ ಸಭೆ ಸಹಾಯಕ ಕಮೀಷನರ್ ಹರ್ಷವರ್ಧನ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭ ಮಾತನಾಡಿದ ಅವರು, ಪ್ರತಿ ಬಾರಿಯೂ ಸಭೆಯಲ್ಲಿ ಭರವಸೆಗಳ ಬಗ್ಗೆ ಮಾತನಾಡುವುಷ್ಟೇ ಅಲ್ಲ, ಅವುಗಳನ್ನು ಈಡೇರಿಸಲೂ ಕಾರ್ಯಕ್ರಮ ಆಗಬೇಕೆಂದು ಮಾರ್ಚ್ ಮೊದಲನೇ ವಾರ ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ಕರೆಯಲಾಗುವುದು. ಆಗ ಪರಿಹಾರ ದೊರಕುತ್ತದೆ ಎಂದರು.ತಹಸೀಲ್ದಾರ್ ಅರ್ಚನಾ ಭಟ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು. ಡಿಸಿ ಮನ್ನಾ ಭೂಮಿಯ ಕುರಿತು ಪ್ರತಿ ಬಾರಿ ವರದಿಗಳು ಬರುತ್ತಿವೆ. ಅದರ ಕುರಿತ ಸೂಕ್ತ ನಿರ್ಧಾರಗಳು ಆದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಜನಾರ್ದನ ಚಂಡ್ತಿಮಾರ್ ಪ್ರಶ್ನೆಗೆ ಸಹಾಯಕ ಕಮೀಷನರ್ ಹರ್ಷವರ್ಧನ ಉತ್ತರಿಸಿದರು.

ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದಲ್ಲಿ ಹಿಂದೂ ರುದ್ರಭೂಮಿಗೆ ಸೂಕ್ತ ಜಾಗ ನಿಗದಿಯಾಗುವ ವಿಚಾರದ ಕುರಿತು ಗಡಿಗುರುತು ಆಗಿಲ್ಲ, ಮಂಜೂರಾತಿ ಆಗಿ ಇಷ್ಟು ವರ್ಷಗಳಾದರೂ ಇನ್ನೂ ಯಾಕೆ ಆಗಿಲ್ಲ ಎಂದು ಮುಖಂಡರು ಪ್ರಶ್ನಿಸಿದರು. ಮುಂದಿನ ತಹಶಿಲ್ದಾರರ ಸಭೆಯಲ್ಲಿ ಇದರ ಬೆಳವಣಿಗೆ ಮಾಹಿತಿ ನೀಡಬೇಕು. ಜಂಟಿ ಸ್ಥಳ ತನಿಖೆ ನಡೆಸಿ, ನಿಗದಿಯಾದ ಜಾಗವನ್ನು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಸಹಾಯಕ ಕಮೀಷನರ್ ಹರ್ಷವರ್ಧನ ತಿಳಿಸಿದರು.

ಅಧಿಕಾರಿಗಳೇ ಸಭೆಯಲ್ಲಿ ಸರಿಯಾಗಿ ಹಾಜರಾಗದೇ ಇದ್ದರೆ ಸಭೆ ನಡೆಯುವುದು ಹೇಗೆ ಎಂದು ಮುಖಂಡ ಜನಾರ್ದನ ಬೋಳಂತೂರು ಹೇಳಿದರು. ಕಂದಾಯ ಇಲಾಖೆಯ ಮೇಲಂತಸ್ತಿಗೆ ಹೋಗುವ ದೃಷ್ಟಿಯಿಂದ ಆಳವಡಿಸಲಾದ ಲಿಪ್ಟ್ ಕೆಟ್ಟುಹೋಗಿರುವ ದೂರುನ್ನು ಆಲಿಸಿದ ಅಧಿಕಾರಿ ಮುಂದಿನ ಹತ್ತು ದಿನಗಳೊಳಗೆ ಸರಿಪಡಿಸುವಂತೆ ಸೂಚನೆ ನೀಡಿದರು.

ಮುಖಂಡರಾದ ಪದ್ಮನಾಭ ನರಿಂಗಾನ ಅವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ‌ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದು ಜನಾರ್ದನ ಚಂಡ್ತಿಮಾರ್ ಅವರು ಶ್ರದ್ಧಾಂಜಲಿ ಅರ್ಪಿಸಿದ ಬಳಿಕ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

Share this article