ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಟೋಲ್ ಗೇಟ್ ಗಳನ್ನು ತೆರಯಲು ಸಿದ್ದತೆಗಳು ಬಿರುಸುಗೊಳ್ಳುತ್ತಿರುವಂತೆಯೇ ಬಿ.ಸಿ. ರೋಡ್ ನಲ್ಲಿ ಬಂಟ್ವಾಳ ತಾಲೂಕಿನ ಸಮಾನ ಮನಸ್ಕ ಸಂಘಟನೆಗಳು, ಟೋಲ್ ವಿರೋಧಿ ಹೋರಾಟಗಾರರು ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಹೋರಾಟ ನಡೆಸುವ ಬಗ್ಗೆ ಸಮಾಲೋಚನಾ ಸಭೆ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಟೋಲ್ ಗೇಟ್ ಗಳನ್ನು ತೆರಯಲು ಸಿದ್ದತೆಗಳು ಬಿರುಸುಗೊಳ್ಳುತ್ತಿರುವಂತೆಯೇ ಬಿ.ಸಿ. ರೋಡ್ ನಲ್ಲಿ ಬಂಟ್ವಾಳ ತಾಲೂಕಿನ ಸಮಾನ ಮನಸ್ಕ ಸಂಘಟನೆಗಳು, ಟೋಲ್ ವಿರೋಧಿ ಹೋರಾಟಗಾರರು ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಹೋರಾಟ ನಡೆಸುವ ಬಗ್ಗೆ ಸಮಾಲೋಚನಾ ಸಭೆ ನಡೆಸಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಾನ ಮನಸ್ಕ ವಿವಿಧ ಸಂಘಟನೆಗಳು, ಪಕ್ಷಗಳಿಗೆ ಸೇರಿದ ಪ್ರತಿನಿಧಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಟೋಲ್ ಗೇಟ್ ತೆರವಿಗೆ ನಡೆಸಬೇಕಾದ ಮುಂದಿನ ಹೋರಾಟಗಳ ಕುರಿತು ಮಾರ್ಗದರ್ಶನ ಮಾಡಿದರು.ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ರಚಿಸಲು, ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವುಗೊಳ್ಳುವವರೆಗೂ ಅವಿರತ ಹೋರಾಟ ನಡೆಸಲು ಸಭೆ ನಿರ್ಧರಿಸಿತು.ಹೋರಾಟ ಸಮಿತಿಗೆ ಬಿ. ರಮಾನಾಥ ರೈ ಅವರನ್ನು ಗೌರವಾಧ್ಯಕ್ಷರಾಗಿ, ಬಿ. ಶೇಖರ್ ಹಾಗೂ ಮೋಹನ್ ಶೆಟ್ಟಿ ಅವರನ್ನು ಸಂಚಾಲಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮುಂದಿನ ದಿನದಲ್ಲಿ ಸಮಾನ ಮನಸ್ಕರಾದ ಎಲ್ಲರನ್ನೂ ಒಳಗೊಂಡ ಸಮಾವೇಶ ನಡೆಸಿ ಪೂರ್ಣಪ್ರಮಾಣದ ಸಮಿತಿ ರಚಿಸಲು ತೀರ್ಮಾನಿಸಲಾಯಿತು.ಮಾ. 3ರಂದು ಸಾಮೂಹಿಕ ಧರಣಿ: ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ನೂತನ ಸಮಿತಿ ವತಿಯಿಂದ, ಸಮಾನ ಮನಸ್ಕ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಾ. 3ರಂದು ಬ್ರಹ್ಮರಕೂಟ್ಲು ಟೋಲ್ ಗೇಟ್ ಸಮೀಪ ಬೆಳಗ್ಗೆ 9.00ರಿಂದ ಮಧ್ಯಾಹ್ನ 12.ರವರಗೆ ಬೃಹತ್ ಸಾಮೂಹಿಕ ಧರಣಿ ನಡೆಸುವುದಾಗಿ ಸಭೆ ತೀರ್ಮಾನಿಸಿತು. ಮುಂದಿನ ಹಂತದಲ್ಲಿ ಮತ್ತಷ್ಟು ತೀವ್ರತರವಾದ ಹೋರಾಟ ಸಂಘಟಿಸುವುದು, ಟೋಲ್ ಗೇಟ್ ತೆರವುಗೊಳಿಸಿಯೇ ವಿಶ್ರಮಿಸುವುದು ಎಂದು ಸಭೆ ಘೋಷಿಸಿತು.
ಸಭೆಯಲ್ಲಿ ರೈತ, ಕಾರ್ಮಿಕ, ದಲಿತ ಮತ್ತು ವಿವಿಧ ಜನಪರ ಸಂಘಟನೆಗಳ ಪ್ರಮುಖರು, ಸ್ಥಳೀಯ ಜನಪ್ರತಿ ನಿಧಿಗಳು, ಸಮಾನ ಮನಸ್ಕ ಸಂಘಟನೆಗಳ ಸಮಾನ್ವಯ ಸಮಿತಿ ಬಂಟ್ವಾಳದ ಪ್ರಮುಖರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.