60 ಸಾವಿರಕ್ಕೂಹೆಚ್ಚು ಚೆಂಡು ಮಲ್ಲಿಗೆಯಲ್ಲಿ ಬಪ್ಪನಾಡು ದುರ್ಗೆ ಶಯನೋತ್ಸವ

KannadaprabhaNewsNetwork | Published : Mar 31, 2024 2:01 AM

ಸಾರಾಂಶ

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮಲ್ಲಿಗೆ ಪ್ರಿಯಳಾದ ಬಪ್ಪನಾಡು ದುರ್ಗೆಗೆ ಬರುವಷ್ಟು ಮಲ್ಲಿಗೆ ಹೂವು ಬೇರೆ ಯಾವ ದೇವಳಗಳಲ್ಲಿ ಬರುವುದಿಲ್ಲ. ಇದು ಇಲ್ಲಿಯ ವಿಶೇಷತೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶನಿವಾರ ಹಗಲು ರಥೋತ್ಸವ ನಡೆದು, ರಾತ್ರಿ ದುರ್ಗೆಗೆ ದೇವಳದ ಗರ್ಭಗುಡಿಯಲ್ಲಿ ಮಲ್ಲಿಗೆಯ ಹಾಸಿಗೆಯಲ್ಲಿ ಶಯನೋತ್ಸವ ನಡೆಯಿತು.

ಈ ಬಾರಿ ಮಲ್ಲಿಗೆಗೆ ಅಟ್ಟೆಗೆ 1200 ರುಪಾಯಿ ಇದ್ದರೂ ಸುಮಾರು 15000 ಅಟ್ಟೆ ಅಂದರೆ ಸುಮಾರು 60000ಕ್ಕೂ ಮಿಕ್ಕಿ ಚೆಂಡು ಮಲ್ಲಿಗೆ ಹೂವನ್ನು ಭಕ್ತರು ದೇವಿಗೆ ಅರ್ಪಿಸಿದ್ದಾರೆ. ಸಂಜೆ ಉತ್ಸವ ಬಲಿ ಜರುಗಿದ ಬಳಿಕ ಭಕ್ತರು ಅರ್ಚಿಸಿದ ಮಲ್ಲಿಗೆ ಹೂವನ್ನು ಗರ್ಭ ಗುಡಿಯಲ್ಲಿ ದೇವಿಯನ್ನು ಮಲಗಿದ ರೀತಿಯಲ್ಲಿ ಅಲಂಕಾರ ಮಾಡಿ ರಾತ್ರಿ ಗರ್ಭ ಗುಡಿಯ ಬಾಗಿಲು ಮುಚ್ಚಲಾಯಿತು. ಮರುದಿನ ಬೆಳಗ್ಗೆ ಕವಾಟೋದ್ಘಾಟನೆಯಾಗಿ ಮಹಾ ಪೂಜೆಯಾದ ಬಳಿಕ ಭಕ್ತರಿಗೆ ಈ ಮಲ್ಲಿಗೆಯನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮಲ್ಲಿಗೆ ಪ್ರಿಯಳಾದ ಬಪ್ಪನಾಡು ದುರ್ಗೆಗೆ ಬರುವಷ್ಟು ಮಲ್ಲಿಗೆ ಹೂವು ಬೇರೆ ಯಾವ ದೇವಳಗಳಲ್ಲಿ ಬರುವುದಿಲ್ಲ. ಇದು ಇಲ್ಲಿಯ ವಿಶೇಷತೆ. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಶ್ರೀ ದೇವರ ಹಗಲು ರಥೋತ್ಸವ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಶ್ರೀ ದೇವರ ಬಲಿ ಉತ್ಸವ, ಹಗಲು ರಥೋತ್ಸವ, ಪ್ರಸಾದ ವಿತರಣೆ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ ಕಿನ್ನಿಗೋಳಿ, ಕ್ಷೇತ್ರದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಆಡಳಿತ ಮೊಕ್ತೇಸರ ಎನ್‌.ಎಸ್‌. ಮನೋಹರಶೆಟ್ಟಿ, ಕಾರ್ಯನಿರ್ವಣಾಧಿಕಾರಿ ಜಯಮ್ಮ, ದೇವಪ್ರಸಾದ್ ಪುನರೂರು, ವಿದ್ವಾನ್ ನಾಗೇಶ್ ಬಪ್ಪನಾಡು, ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರದಲ್ಲಿ, ರಾತ್ರಿ ಮಲ್ಲಿಗೆ ಪ್ರಿಯೆ ಶ್ರೀದೇವಿಯ ಶಯನೋತ್ಸವ, ನಡೆಯಿತು. ಮಾ.31ರಂದು ಬ್ರಹ್ಮರಥೋತ್ಸವ ನಡೆಯಲಿದೆ.ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ರಾತ್ರಿ ಶ್ರೀ ದೇವರ ಉತ್ಸವ ಬಲಿ, ಬೊಂಬೆ ರಥೋತ್ಸವ,ಸ್ವರ್ಣ ಪಲ್ಲಕಿ ಉತ್ಸವ, ಕೆರೆ ದೀಪೋತ್ಸವ ಹಾಗೂ ಕಟ್ಟೆ ಪೂಜೆ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಕ್ಷೇತ್ರದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಕಾರ್ಯನಿರ್ವಣಾಧಿಕಾರಿ ಜಯಮ್ಮ, ನಾಗೇಶ್‌ ಬಪ್ಪನಾಡು, ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Share this article