ಗಾಂಧೀಜಿ ವಿಚಾರಧಾರೆ ತಿಳಿಸಲು ಬಾಪೂಜಿ ಪ್ರಬಂಧ ಸ್ಪರ್ಧೆ

KannadaprabhaNewsNetwork |  
Published : Sep 01, 2024, 01:53 AM IST
ತುಮಕೂರಿನ ಜಿಪಂ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ನಡೆಯಿತು. | Kannada Prabha

ಸಾರಾಂಶ

ತುಮಕೂರು: ಮಹಾತ್ಮ ಗಾಂಧೀಜಿ ವಿಚಾರಧಾರೆಗಳನ್ನು ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ತಿಳಿಸುವ ಉದ್ದೇಶದಿಂದ ಶಾಲಾ-ಕಾಲೇಜುಗಳಲ್ಲಿ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಬೇಕು ಎಂದು ಜಿಪಂ ಸಿಇಒ ಜಿ.ಪ್ರಭು ಹೇಳಿದರು.

ತುಮಕೂರು: ಮಹಾತ್ಮ ಗಾಂಧೀಜಿ ವಿಚಾರಧಾರೆಗಳನ್ನು ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ತಿಳಿಸುವ ಉದ್ದೇಶದಿಂದ ಶಾಲಾ-ಕಾಲೇಜುಗಳಲ್ಲಿ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಬೇಕು ಎಂದು ಜಿಪಂ ಸಿಇಒ ಜಿ.ಪ್ರಭು ಹೇಳಿದರು.

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮಹಾತ್ಮ ಗಾಂಧೀಜಿ 155ನೇ ಜನ್ಮ ದಿನಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಹಾತ್ಮಾ ಗಾಂಧೀಜಿ ಅವರ ಬದುಕು, ಸರಳತೆ, ಅಹಿಂಸಾ ಮಾರ್ಗ, ಅಸ್ಪೃಷ್ಯತೆ ನಿವಾರಣೆ ಮತ್ತು ಸ್ವಾತಂತ್ರ್ಯ ಚಳುವಳಿವಳಿಯಲ್ಲಿ ಅವರ ಪಾತ್ರದ ಕುರಿತು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ತಿಳಿಸುವ ಸಲುವಾಗಿ ಈ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರೌಢಶಾಲೆ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳಿಗೆ ಪ್ರತ್ಯೇಕ ವಿಷಯಗಳಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧೀಜಿ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸುವಂತೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಾತ್ಮ ಗಾಂಧೀಜಿ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಕುರಿತು ಯಾವುದಾದರೂ ಒಂದು ವಿಷಯದಲ್ಲಿ 5 ರಿಂದ 7ನೇ ತರಗತಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಕ್ಕೆ ಆಯ್ಕೆ ಮಾಡಿ ಜಿಪಂ ಕಚೇರಿಗೆ ಸಲ್ಲಿಸಬೇಕು. ತಾಲೂಕು ಮಟ್ಟದಲ್ಲಿ ನಡೆಯುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡುವಂತೆ ಸೂಚಿಸಿದರು.

ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ, ಸತ್ಯಾಗ್ರಹ, ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ, ಗಾಂಧೀಜಿಯವರ ತತ್ವಗಳಿಂದ ದೇಶ ಕಟ್ಟುವ ಬಗೆ, ಪದವಿ ಪೂರ್ವ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ, ದೇಶದ ಕಳಂಕವಾದ ಅಸ್ಪೃಶ್ಯತೆ ನಿವಾರಿಸುವಲ್ಲಿನ ಗಾಂಧೀಜಿ ಪ್ರಯೋಗ, ಆರ್ಥಿಕ ಚಿಂತನೆಗಳು ಕುರಿತು ಒಂದು ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಕ್ಕೆ ಆಯ್ಕೆ ಮಾಡಬೇಕೆಂದು ಹೇಳಿದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು.ಜಿ ಮಾತನಾಡಿ, ಪ್ರತಿ ವಿಭಾಗದಲ್ಲಿನ ಅತ್ಯುತ್ತಮವಾದ 3 ಪ್ರಬಂಧ ರಚನೆಕಾರರಿಗೆ ಅಕ್ಟೋಬರ್ ೨ರಂದು ಜಿಲ್ಲಾ ಮಟ್ಟದ ಗಾಂಧಿ ಜಯಂತಿ ದಿನಾಚರಣೆ ಸಂದರ್ಭದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು. ಜಿಲ್ಲಾ ಮಟ್ಟದ ಪ್ರಥಮ ಬಹುಮಾನ ವಿಜೇತ ಪ್ರಬಂಧಗಳನ್ನು ರಾಜ್ಯ ಮಟ್ಟದಲ್ಲಿ ಮರುಮೌಲ್ಯಮಾಪನ ಮಾಡಿ, ಆಯ್ಕೆಯಾದವರಿಗೆ ರಾಜ್ಯ ಮಟ್ಟದಲ್ಲಿ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ತುಮಕೂರು ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಮಾಧವ ರೆಡ್ಡಿ, ಮಧುಗಿರಿ ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ನರಸಿಂಹಮೂರ್ತಿ, ತುಮಕೂರು ವಿಶ್ವ ವಿದ್ಯಾನಿಲಯದ ಮಂಜುನಾಥ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ತ್ರಿವೇಣಿ ಮತ್ತಿತರರಿದ್ದರು.

ವಿಜೇತರಿಗೆ ಎಷ್ಟು ಬಹುಮಾನ?ಪ್ರಬಂಧವು ಸಂಪೂರ್ಣವಾಗಿ ಸ್ವರಚಿತವಾಗಿರಬೇಕು. ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು. ಆಯ್ದ ಪ್ರಬಂಧಗಳ ಪ್ರಕಟಣೆಯ ಹಕ್ಕನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊಂದಿರುತ್ತದೆ. ಪ್ರೌಢಶಾಲಾ, ಪದವಿ ಪೂರ್ವ, ಕಾಲೇಜು ಹಾಗೂ ಸ್ನಾತಕೋತ್ತರ ಮೂರು ಪ್ರತ್ಯೇಕ ವಿಭಾಗಗಳ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಿಲ್ಲಾ ಮಟ್ಟದಲ್ಲಿ ಪ್ರಥಮ ₹3,000, ದ್ವಿತೀಯ ₹2,000., ತೃತೀಯ ಸ್ಥಾನಕ್ಕೆ ₹1,000 ಹಾಗೂ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ ₹31,000, ದ್ವಿತೀಯ ₹21,000 ಹಾಗೂ ತೃತೀಯ ಸ್ಥಾನಕ್ಕೆ ₹11,000 ನೀಡಲಾಗುವುದು ಎಂದು ಮಾಹಿತಿ ನೀಡಿದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ