ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಧನಾರಿಪುರದಲ್ಲಿ ಶುಕ್ರವಾರ ರಾತ್ರಿ ಬಾಣಂತಿಯೊಬ್ಬರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜೇಶ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದರು.ತಾಲೂಕಿನ ಅರ್ಧನಾರಿಪುರ ಗ್ರಾಮದ ರಾಜೇಶ್ ಎಂಬವರ ಪತ್ನಿ ರೇವತಿ ಕಳೆದ 3 ವರ್ಷದ ಹಿಂದೆ ವಿವಾಹವಾಗಿದ್ದು, 2 ವರ್ಷದ ಗಂಡು ಮಗುವಿದೆ. ಶುಕ್ರವಾರ ಮನೆಯಲ್ಲೇ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಆರೋಗ್ಯವಾಗಿದೆ. ಆದರೆ, ರೇವತಿ ಬೆಳಿಗ್ಗೆ 10 ಗಂಟೆಗೆ ಸ್ನಾನದ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದರು.
ನಿರ್ಲಕ್ಷ್ಯದಿಂದ ಬಾಣಂತಿ ಸಾವು?:ಅರ್ಧನಾರಿಪುರ ಗ್ರಾಮದ ರಾಜೇಶ್ ಅವರ ಪತ್ನಿಯ ರೇವತಿ ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆ ಪ್ರತಿ ತಿಂಗಳು ಆಸ್ಪತ್ರೆಗೆ ಕರೆ ತಂದು ತಜ್ಞ ವೈದ್ಯರಿಂದ ತಪಾಸಣೆ ನಡೆಸಿದ್ದಾರೆ. ಆದರೆ ಶುಕ್ರವಾರ ಹೆರಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ ಮಾಹಿತಿ ನೀಡದೆ ಕುಟುಂಬಸ್ಥರೇ ಹೆರಿಗೆ ಮಾಡಿಸಿದ್ದಾರೆ, ನಂತರ ಆಶಾ ಕಾರ್ಯಕರ್ತೆಗೆ ದೂರವಾಣಿ ಮುಖಾಂತರ ಹೆರಿಗೆ ಆಗಿರುವ ವಿಚಾರ ತಿಳಿಸಿದರು. ಆಗ ಅವರು ತಡ ಮಾಡದೆ ಆಸ್ಪತ್ರೆಗೆ ಕರೆದುಕೊಂಡು ಬನ್ನಿ ಎಂದು ಹೇಳಿದ್ದರು.
ಆಗ ಕುಟುಂಬಸ್ಥರು ಹೆರಿಗೆಯಾದ ಒಂದು ಗಂಟೆಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿಕೊಂಡು ಆಸ್ಪತ್ರೆಗೆ ಹೋಗೋಣ ಎಂದು ಸ್ನಾನ ಮಾಡಿಸಲು ಕಳುಹಿಸಿದರು. ಈ ವೇಳೆ ಪ್ರಜ್ಞೆ ಕಳೆದುಕೊಂಡು ಸ್ಥಾನದ ಮನೆಯಲ್ಲಿಯೇ ಕುಸಿದು ಬಿದ್ದರು. ಮಹಿಳೆ ಸರಿ ಹೋಗಬಹುದು ಎಂದು ಭಾವಿಸಿ ಮನೆಯಲ್ಲಿಯೇ ಇರಿಸಿಕೊಂಡರು. ಮಹಿಳೆಗೆ ಪ್ರಜ್ಞೆ ಬಾರದಿದ್ದಾಗ ಮಧ್ಯಾಹ್ನ ಸುಮಾರು ಒಂದು ಗಂಟೆ ವೇಳೆಗೆ ಪಿ.ಜಿ.ಪಾಳ್ಯ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆ ವೇಳೆಗಾಗಲೇ ಮಹಿಳೆ ಮೃತಪಟ್ಟಿದ್ದರು ಎಂದು ಆಸ್ಪತ್ರೆಯ ಅಧಿಕಾರಿ ಮಲ್ಲೇಶ್ ಮಾಹಿತಿ ನೀಡಿದರು.ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ರಾಜೇಶ್ ಪತ್ರಿಕೆಯೊಂದಿಗೆ ಮಾತನಾಡಿ, ಮೃತ ರೇವತಿಗೆ ಹೊಟ್ಟೆ ನೋವು ಬಂದಾಗ ಕುಟುಂಬದವರು ಆಸ್ಪತ್ರೆಗೆ ಸೇರಿಸದೆ ಮನೆಯಲ್ಲಿಯೇ ಹೆರಿಗೆ ಮಾಡಿಸಿದ್ದಾರೆ, ನಂತರ ಸ್ನಾನ ಮಾಡಲು ಹೋದಾಗ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಮೃತ ರೇವತಿಯ ಸಂಬಂಧಿಕರೊಬ್ಬರು ರೇವತಿಯ ಮಗುವಿಗೂ ಹಾಲುಣಿಸಲು ತೀರ್ಮಾನಿಸಿದ್ದಾರೆ. ಆದರೆ ಮಗುವಿಗೆ ಹಾಲುಣಿಸಲು ಸಂಬಂಧಿಕರು ಸಬಲರಾಗಿದ್ದಾರೆ ಎಂದು ವರದಿ ಬಂದರೆ ಅವರಿಗೆ ಪೌಷ್ಟಿಕಾಂಶದ ಆಹಾರ ಪೂರೈಕೆ ಮಾಡಿ ಹಾಲುಣಿಸಲು ಕ್ರಮ ಕೈಗೊಳ್ಳಲಾಗುವುದು, ಇಲ್ಲದಿದ್ದರೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇಲಾಖೆ ವತಿಯಿಂದ ಸಿಗುವ ಪರಿಹಾರವನ್ನು ಅತಿ ಶೀಘ್ರದಲ್ಲಿಯೇ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲಾ ಬುಡಕಟ್ಟು ಸಂಘದ ಕಾರ್ಯದರ್ಶಿ ರಂಗೇಗೌಡ, ಆಶಾ ಕಾರ್ಯಕರ್ತೆ, ಕುಟುಂಬಸ್ಥರು ಹಾಜರಿದ್ದರು.