ಕುವೇಂಡ ವೈ. ಹಂಝತುಲ್ಲಾರಿಗೆ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ

KannadaprabhaNewsNetwork |  
Published : Aug 28, 2024, 12:55 AM IST
ಕುವೇಂಡ ವೈ. ಹಂಝತುಲ್ಲಾ | Kannada Prabha

ಸಾರಾಂಶ

ಕುವೇಂಡ ವೈ ಹಂಝತುಲ್ಲಾ ಅವರು 2022ನೇ ಸಾಲಿನ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಗೌರವ ಪ್ರಶಸ್ತಿ 50000 ರು. ನಗದು ಬಹುಮಾನವನ್ನು ಒಳಗೊಂಡಿದೆ.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಹಿರಿಯ ಪತ್ರಕರ್ತ ಮತ್ತು ಕಿತ್ತಳೆ ನಾಡು ಕನ್ನಡ ವಾರಪತ್ರಿಕೆಯ ಪ್ರಧಾನ ಸಂಪಾದಕರೂ ಆಗಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ನ ಸ್ಥಾಪಕ ಅಧ್ಯಕ್ಷರಾದ ಕುವೇಂಡ ವೈ. ಹಂಝತುಲ್ಲಾ ಅವರು 2022ನೇ ಸಾಲಿನ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಯು. ಎಚ್. ಉಮರ್, ಕುವೇಂಡ ವೈ. ಹಂಝತುಲ್ಲಾ ಅವರು ಬ್ಯಾರಿ ಟೈಮ್ಸ್ ಮತ್ತು ಕಿತ್ತಳೆ ನಾಡು ಕನ್ನಡ ವಾರಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕನ್ನಡ ಪತ್ರಿಕೋದ್ಯಮಕ್ಕೆ ಮತ್ತು ಬ್ಯಾರಿ ಸಾಹಿತ್ಯಕ್ಕೆ ಕಳೆದ ನಾಲ್ಕು ದಶಕಗಳಿಂದ ನೀಡಿದ ಕೊಡುಗೆಯನ್ನು ಪರಿಗಣಿಸಿ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆಗೊಳಿಸಲಾಗಿದೆ.

ಚಿಂತನಾಶೀಲಾ ವ್ಯಕ್ತಿತ್ವ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಅವರ ರಚನಾತ್ಮಕ ಸಮಾಜಮುಖಿ ಕಾರ್ಯ ಚಟುವಟಿಕೆಗಳು, ಕನ್ನಡಪರ ಕಾಳಜಿ ಮತ್ತು ಅವರ ಸಂವೇದನಾಶೀಲತೆ ಮೊದಲಾದವುಗಳನ್ನು ಅಕಾಡೆಮಿಯ ಪ್ರಶಸ್ತಿ ಆಯ್ಕೆ ಸಮಿತಿ ಅಂಗೀಕರಿಸಿದ್ದು, ಈ ಎಲ್ಲ ಮಾನದಂಡದಲ್ಲಿ ಅಕಾಡೆಮಿಯ ಗೌರವ ಪ್ರಶಸ್ತಿಗೆ ಅವರು ಅರ್ಹರೆಂದು ಪರಿಗಣಿಸಿ ಆಯ್ಕೆಗೊಳಿಸಲಾಗಿದೆ. ಗೌರವ ಪ್ರಶಸ್ತಿಯು 50000 ರು. ನಗದು ಬಹುಮಾನವನ್ನು ಒಳಗೊಂಡಿದೆ ಎಂದು ಉಮರ್ ತಿಳಿಸಿದ್ದಾರೆ.

1988 ರಲ್ಲಿ ಪತ್ರಿಕಾಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಕುವೇಂಡ ವೈ. ಹಂಝತುಲ್ಲಾ ಅವರು, ಮೊದಲಿಗೆ ಬೆಂಗಳೂರಿನಲ್ಲಿ ಬ್ಯಾರಿ ಟೈಮ್ಸ್ ಎಂಬ ಬ್ಯಾರಿ ಭಾಷಾ ಪತ್ರಿಕೆಯನ್ನು ಆರಂಭಿಸಿ ಅದರ ಸ್ಥಾಪಕ ಸಂಪಾದಕರಾಗಿ ಆರು ವರ್ಷಗಳ ಕಾಲ ವೃತ್ತಿ ನಿರ್ವಹಿಸಿದ್ದರು. ಬಳಿಕ ಬೆಂಗಳೂರಿನಿಂದಲೇ ಕಿತ್ತಳೆ ನಾಡು ಎಂಬ ಕನ್ನಡ ವಾರಪತ್ರಿಕೆಯನ್ನು ಆರಂಭಿಸಿ ಇಂದಿನವರೆಗೂ ಅದರ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಬ್ಯಾರಿ ಮತ್ತು ಕೊಡವ ಮುಸ್ಲಿಂ ಅಸೋಸಿಯೇಷನ್ ನಲ್ಲಿ ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸರ್ಕಾರದಿಂದ ಮಾನ್ಯತೆ ಪಡೆದ ಹಿರಿಯ ಪತ್ರಕರ್ತರಾಗಿರುವ ಹಂಝತುಲ್ಲಾ, ಬ್ಯಾರಿ ಮತ್ತು ಕನ್ನಡ ಭಾಷೆಯಲ್ಲಿ ವಿವಿಧ ಕೃತಿಗಳನ್ನು ಹೊರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮೂಲತಃ ವಿರಾಜಪೇಟೆ ಸಮೀಪದ ಕೊಟ್ಟೋಳಿ (ಗುಂಡಿಕೆರೆ) ನಿವಾಸಿಯಾಗಿರುವ ಕೆ. ವೈ. ಹಂಝತುಲ್ಲಾ ಅವರು ದಿ. ಕುವೇಂಡ ಯೂಸುಫ್ ಹಾಜಿ ಮತ್ತು ದಿ.ನಫೀಸಾ ದಂಪತಿಯ ಪುತ್ರರಾಗಿದ್ದಾರೆ.

ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಮುಂದಿನ ತಿಂಗಳು 6ರಂದು ಸಂಜೆ ಮಂಗಳೂರಿನ ಪುರಭವನದಲ್ಲಿ ಜರುಗಲಿದೆ. ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಯು. ಎಚ್. ಉಮರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ