ತಮ್ಮ ವಾಣಿಜ್ಯ ಮಳಿಗೆಗಳ ರಕ್ಷಣೆಗಾಗಿ ಪ್ರಭಾವಿಯಿಂದ ಕಾಂಪೌಂಡ್ । ಅಧಿಕಾರಿಗಳ ನಿರ್ಲಕ್ಷ್ಯ
ಶ್ರೀವಿದ್ಯಾಸಕಲೇಶಪುರಕನ್ನಡಪ್ರಭ ವಾರ್ತೆ ಸಕಲೇಶಪುರ
ಹೇಮಾವತಿ ನದಿಯ ಪ್ರವಾಹದಿಂದ ತಮಗೆ ಸೇರಿದ ವಾಣಿಜ್ಯ ಮಳಿಗೆಗಳ ಉಳಿವಿಗಾಗಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರೊಬ್ಬರು ನದಿಪಾತ್ರಕ್ಕೆ ನಿರ್ಮಿಸುತ್ತಿರುವ ತಡೆಗೋಡೆ ಅರ್ಧ ಪಟ್ಟಣ ಮುಳುಗಡೆಗೆ ಕಾರಣವಾಗಲಿದೆ ಎಂಬ ಭೀತಿ ಪಟ್ಟಣಿಗರನ್ನು ಕಾಡುತ್ತಿದೆ.ಪಟ್ಟಣ ಸಮೀಪದ ಹೇಮಾವತಿ ನದಿ ಮಳೆಗಾಲದಲ್ಲಿ ತನ್ನ ಹರಿವು ಹೆಚ್ಚಿಸುವುದರಿಂದ ಪಟ್ಟಣ ಸಮೀಪದ ಮಳಲಿ, ಆಚಂಗಿ ಗ್ರಾಮಗಳ ಭತ್ತದ ಗದ್ದೆಗಳು ತಾತ್ಕಾಲಿಕವಾಗಿ ಮುಳುಗಡೆಯಾಗುತ್ತಿದೆ. ಈ ಎರಡು ಗದ್ದೆ ಬಯಲು ಮಳೆಗಾಲದಲ್ಲಿ ಮುಳುಗಡೆಯಾಗುವುದರಿಂದ ಮಳೆಗಾಲ ಮುಗಿದ ನಂತರ ಈ ಗದ್ದೆ ಬಯಲಿನಲ್ಲಿ ಭತ್ತದ ನಾಟಿ ಮಾಡುವುದು ವಾಡಿಕೆಯಾಗಿದೆ. ಈ ಎರಡು ಗದ್ದೆ ಬಯಲಿನ ಜಮೀನಿನ ಮಾಲೀಕರಿಗೆ ಗೊರೂರು ಅಣೆಕಟ್ಟು ನಿರ್ಮಾಣದ ವೇಳೆ ಪರಿಹಾರ ನೀಡಲಾಗಿದ್ದು, ಬೆಳೆ ಬೆಳೆಯಲು ಮಾತ್ರ ಅವಕಾಶವಿದ್ದು ಯಾವುದೇ ವಾಣಿಜ್ಯ ಉದ್ದೇಶಕ್ಕೆ ಇಲ್ಲಿ ಅವಕಾಶವಿಲ್ಲ ಎನ್ನಲಾಗಿದೆ.
೨೦೧೮ರಲ್ಲಿ ಸುರಿದ ಬಾರಿ ಮಳೆಯಿಂದಾಗಿ ಹೇಮಾವತಿ ನದಿ ಉಕ್ಕಿಹರಿದು ಬಹುತೇಕ ಕಲ್ಯಾಣ ಮಂಟಪ ಮಳೆ ನೀರಿನಿಂದ ಮುಳುಗಿದರೆ ನದಿ ಪಾತ್ರದ ಭತ್ತದ ಗದ್ದೆಗಳಿಗೆ ಮಣ್ಣು ತುಂಬಿತ್ತು. ಪರಿಣಾಮ ಪಟ್ಟಣದ ಅಜಾದ್ ರಸ್ತೆಯ ಸುಮಾರು ಅರ್ಧ ಕಿ.ಮೀ.ವರೆಗೂ ನೀರು ಅವರಿಸಿದ್ದರಿಂದ ನೂರಾರು ಕುಟುಂಬಗಳು ತಾತ್ಕಾಲಿಕವಾಗಿ ಮನೆ ಖಾಲಿ ಮಾಡಿ ಗಂಜಿ ಕೇಂದ್ರದಲ್ಲಿ ವಾಸ ಮಾಡುವಂತ ಪರಿಸ್ಥಿತಿ ಸೃಷ್ಟಿಯಾಗಿತ್ತು.ನದಿಪಾತ್ರಕ್ಕೆ ತಡೆಗೋಡೆ ನಿರ್ಮಾಣ ಮಾಡಿದರೆ ಕಲ್ಯಾಣ ಮಂಟಪದ ಎದುರು ಕಾಮನ ಬಿಲ್ಲಿನ ರೀತಿಯಲ್ಲಿ ಹರಿದು ಬರುವ ಹೇಮಾವತಿ ನದಿ ನೀರು ಮಳೆಗಾಲದಲ್ಲಿ ತಡೆಗೋಡೆಗೆ ಅಪ್ಪಳಿಸಿ ಹಿಮ್ಮುಖವಾಗಿ ಚಲಿಸುವುದರಿಂದ ಪಟ್ಟಣದ ಅಜಾದ್ ರಸ್ತೆ, ಮಲ್ಲಮ್ಮನ ಬೀದಿ, ಷಣ್ಮುಖಯ್ಯ ಬೀದಿ ಹಾಗೂ ಮಹೇಶ್ವರಿನಗರಗಳನ್ನು ಅವರಿಸುವುದು ನಿಶ್ಚಿತವಾಗಿದೆ. ಪ್ರಸಕ್ತವರ್ಷ ತಡೆಗೋಡೆ ನಿರ್ಮಾಣ ಮಾಡಿದರೆ ಪಟ್ಟಣದ ಅರ್ಧಭಾಗ ಮುಳುಗಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ದಕ್ಷತೆ ಇಲ್ಲದ ಅಧಿಕಾರಿಗಳು:ಪಟ್ಟಣ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸಬೇಕಿದ್ದರೂ ಪುರಸಭೆಯ ಅನುಮತಿ ಅಗತ್ಯ. ಆದರೆ, ತಡೆಗೋಡೆ ನಿರ್ಮಾಣದ ವಿಚಾರ ಪುರಸಭೆ ಅಧಿಕಾರಿಗಳಿಗೆ ತಿಳಿದಿದ್ದರೂ ನದಿಪಾತ್ರದ ಕಂದಾಯ ಜಮೀನಿನಲ್ಲಿ ನಿರ್ಮಾಣ ಮಾಡುತ್ತಿರುವ ತಡೆಗೋಡೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುವ ಮೂಲಕ ಪುರಸಭೆ ಮುಖ್ಯಾಧಿಕಾರಿ ರಮೇಶ್ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡರೆ, ಹೇಮಾವತಿ ನದಿಯ ಪ್ರವಾಹದ ನೀರಿನಿಂದ ತಮ್ಮ ಜಮೀನನ್ನು ರಕ್ಷಿಸಿಕೊಳ್ಳಲು ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೂ ತಮಗೂ ಸಂಬಂದವಿಲ್ಲ. ಅನ್ಯಸಂಕ್ರಮಣ ಮಾಡದ ಜಮೀನಿಗೆ ಮಣ್ಣು ತುಂಬಿರುವ ಬಗ್ಗೆ ಪರಿಶೀಲಿಸುತ್ತೇವೆ ಎನ್ನುತ್ತಾರೆ ತಹಸೀಲ್ದಾರ್ ಮೇಘನಾ.
ಕಡತಗಳು ಕಣ್ಮರೆ:ಮಳಲಿ, ಆಚಂಗಿ ಭತ್ತ ಬೆಳೆಯುವ ಪ್ರದೇಶಗಳು ಮುಳುಗಡೆಯಾಗಿರುವ ಬಗ್ಗೆ ದಾಖಲೆಗಳು ಹಾಸನದ ಜಿಲ್ಲಾಧಿಕಾರಿಗಳ ಕಚೇರಿಯ ಮೇಲ್ಬಾಗದಲ್ಲಿರುವ ಹೇಮಾವತಿ ಜಲಾಶಯ ಯೋಜನೆ ಕಚೇರಿಯಲ್ಲಿ ೨೦೦೬ರ ವರೆಗೆ ಇದ್ದ ದಾಖಲೆಗಳು ತದನಂತರದ ವರ್ಷಗಳಲ್ಲಿ ಕಣ್ಮರೆಯಾಗಿದ್ದು. ಈ ದಾಖಲೆಗಳ ಕಣ್ಮರೆಗೆ ಪ್ರಸಕ್ತ ಈ ಮುಳಗಡೆ ಪ್ರದೇಶದಲ್ಲಿ ನಿರ್ಮಾಣ ಮಾಡುತ್ತಿರುವ ಲೇಔಟ್ ಮಾಲೀಕರು ಹಾಗೂ ವಾಣಿಜ್ಯ ಸಂಕಿರ್ಣದ ಮಾಲೀಕರ ಕೈವಾಡವಿದೆ ಎಂದು ಆರೋಪಿಸಲಾಗಿದೆ.
ತಮ್ಮ ಜಮೀನು ಉಳಿವಿಗಾಗಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಅದನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ.ಮೇಘನಾ, ತಹಸೀಲ್ದಾರ್.
ನದಿಪಾತ್ರದಲ್ಲಿ ತಡೆಗೋಡೆ ನಿರ್ಮಾಣ ಮಾಡುವುದರಿಂದ ಮಳೆಗಾಲದಲ್ಲಿ ಹೇಮಾವತಿಯ ನದಿ ಪ್ರವಾಹ ಅರ್ಧ ಪಟ್ಟಣಕ್ಕೆ ನುಗ್ಗುವುದು ನಿಶ್ಚಿತ. ಈ ಬಗ್ಗೆ ಯಾವುದೆ ಅಧಿಕಾರಿಗೆ ದೂರು ನೀಡಿದ್ದರೂ ಪ್ರಯೋಜವಾಗುತ್ತಿಲ್ಲ.ಯೋಗೇಶ್, ಹೋರಾಟಗಾರ.