ವಿಶ್ವವಿಖ್ಯಾತ ತ್ರಾಸಿ–ಮರವಂತೆ ಕಡಲತೀರದಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಅಳವಡಿಸಲಾಗಿದ್ದ ಅರೆಬರೆ ತಡೆಬೇಲಿ ಕಾಮಗಾರಿಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಂಬಂಧಪಟ್ಟ ಇಲಾಖೆ ಇದೀಗ ಕಾಮಗಾರಿಯನ್ನು ಪೂರ್ಣಗೊಳಿಸಿದೆ.
ಕುಂದಾಪುರ: ವಿಶ್ವವಿಖ್ಯಾತ ತ್ರಾಸಿ–ಮರವಂತೆ ಕಡಲತೀರದಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಅಳವಡಿಸಲಾಗಿದ್ದ ಅರೆಬರೆ ತಡೆಬೇಲಿ ಕಾಮಗಾರಿಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಂಬಂಧಪಟ್ಟ ಇಲಾಖೆ ಇದೀಗ ಕಾಮಗಾರಿಯನ್ನು ಪೂರ್ಣಗೊಳಿಸಿದೆ.ಪ್ರವಾಸಿಗರ ಪ್ರವೇಶವನ್ನು ನಿಯಂತ್ರಿಸಿ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ತಡೆಬೇಲಿ ಅಳವಡಿಸಲಾಗಿದೆ.ಈ ಹಿಂದೆ ತ್ರಾಸಿ ಬೀಚ್ ಪಾರ್ಕ್‌ನ ಒಂದು ಬದಿಯಿಂದ ಆರಂಭಗೊಂಡಿದ್ದ ತಡೆಬೇಲಿ ನಿರ್ಮಾಣ ಕಾರ್ಯ, ಹಿಂದಿನ ಸ್ಕೈ ಡೈನ್ ಕಾರ್ಯಾಚರಣೆ ನಡೆದ ಸ್ಥಳದವರೆಗೆ ಮಾತ್ರ ಸೀಮಿತಗೊಂಡಿತ್ತು. ಅಪಾಯಕಾರಿ ಪ್ರದೇಶಗಳಲ್ಲಿ ಪ್ರವಾಸಿಗರು ಕಡಲಿಗೆ ಇಳಿದು ಬಂಡೆಕಲ್ಲುಗಳ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಈ ಕುರಿತು ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿ ಸಂಬಂಧಪಟ್ಟ ಇಲಾಖೆಯ ಗಮನ ಸೆಳೆದಿತ್ತು.
ವರದಿ ಪ್ರಕಟವಾದ ಬಳಿಕ ಸ್ಕೈ ಡೈನ್ ಪ್ರದೇಶದಿಂದ ಮರವಂತೆ ವರಾಹ ದೇವಸ್ಥಾನದವರೆಗೆ ಕರಾವಳಿ ಕಾವಲು ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಕೆಎನ್‌ಡಿ ಸಿಬ್ಬಂದಿಯ ಸಹಾಯದಿಂದ ತಡೆಬೇಲಿ ಅಳವಡಿಸಲಾಗಿದೆ. ಇದರಿಂದ ಪ್ರವಾಸಿಗರು ಅಪಾಯಕಾರಿ ಪ್ರದೇಶಗಳಿಗೆ ತೆರಳುವುದನ್ನು ತಡೆಯುವ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.ಪ್ರವಾಸೋದ್ಯಮ ಇಲಾಖೆ ಆರಂಭದಲ್ಲಿ ಅರೆಬರೆಯಾಗಿ ತಡೆಬೇಲಿ ಅಳವಡಿಸಿದ್ದಕ್ಕೆ ಸ್ಥಳೀಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ತ್ರಾಸಿ ಬೀಚ್ ಪಾರ್ಕ್‌ನಿಂದ ಸ್ಕೈ ಡೈನ್ ಪ್ರದೇಶದವರೆಗೆ ಮಾತ್ರ ತಡೆಬೇಲಿ ನಿರ್ಮಿಸಿ ಉಳಿದ ಪ್ರದೇಶಗಳನ್ನು ನಿರ್ಲಕ್ಷಿಸಲಾಗಿತ್ತು. ಮರವಂತೆ ವರಾಹ ದೇವಸ್ಥಾನದ ಎದುರು ಅಳವಡಿಸಲಾಗಿದ್ದ ನೆಟ್ ತಡೆಬೇಲಿಯೂ ಸಮರ್ಪಕವಾಗಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.ಮಳೆಗಾಲ ಆರಂಭಕ್ಕೂ ಮುನ್ನ ಕಡಲತೀರ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆರು ಕೆಎನ್‌ಡಿ ಸಿಬ್ಬಂದಿ ಹಾಗೂ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಸರದಿ ಪ್ರಕಾರ ಪ್ರತಿನಿತ್ಯ ತ್ರಾಸಿ–ಮರವಂತೆ ಕಡಲತೀರದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ. ಪ್ರವಾಸಿಗರು ಕಡಲಿಗೆ ಇಳಿಯದಂತೆ ನಿರಂತರವಾಗಿ ಎಚ್ಚರಿಕೆ ನೀಡಲಾಗುತ್ತಿದ್ದು, ಜಿಲ್ಲಾಡಳಿತದ ನಿರ್ದೇಶನದಂತೆ ಸಾಧ್ಯವಿರುವ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆ ಉಪನಿರೀಕ್ಷಕ ಸುಬ್ರಹ್ಮಣ್ಯ ಎಚ್. ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.