ಹಾವೇರಿ: ಲಿಂಗಾಯತ ಮಠಾಧೀಶರ ಒಕ್ಕೂಟ ಹಾಗೂ ಹಾವೇರಿಯ ಬಸವ ಸಂಸ್ಕೃತಿ ಅಭಿಯಾನ ಸಮಿತಿಯಿಂದ ಸೆ. 14ರಂದು ಬಸವ ಸಂಸ್ಕೃತಿ ಅಭಿಯಾನ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ನಗರದ ರಜನಿ ಕನ್ವೆನ್ಷಲ್ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಜಗಜ್ಯೋತಿ ಬಸವೇಶ್ವರರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ವರ್ಷ ಗತಿಸಿದೆ. ಈ ಹಿನ್ನೆಲೆ ಯುವಜನತೆಗೆ, ಮಕ್ಕಳಿಗೆ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಲಿಂಗಾಯತ ಮಠಗಳು ಹಾಗೂ ವಿವಿಧ ಬಸವಪರ ಸಮಿತಿಗಳು ಬಸವ ಸಂಸ್ಕೃತಿ ಅಭಿಯಾನವನ್ನು ರಾಜಾದ್ಯಂತ ನಡೆಸುತ್ತಿವೆ. ಹಾವೇರಿಯಲ್ಲಿ ಸೆ. 14ರಂದು ಕಾರ್ಯಕ್ರಮ ನಡೆಸಲಾಗುತ್ತಿದ್ದು, ಜಿಲ್ಲೆಯ ನಾಡಿನ ಎಲ್ಲ ಬಸವ ಭಕ್ತರು, ಹೆಚ್ಚಿನ ಜನಸಮೂಹ ಆಗಮಿಸಬೇಕು. ನೀವು ಬನ್ನಿ, ನಿಮ್ಮವರನ್ನೂ ಕರೆ ತನ್ನಿ ಎಂಬ ಘೋಷಣೆಯೊಂದಿಗೆ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.ಸೆ. 14ರಂದು ಬೆಳಗ್ಗೆ 10ಕ್ಕೆ ಅಭಿಯಾನದ ಸ್ವಾಗತ, ನಂತರ ಷಟಸ್ಥಲ ಧ್ವಜಾರೋಹಣ ನೆರವೇರಿಸಲಾಗುತ್ತದೆ. ಬೆಳಗ್ಗೆ 11ಕ್ಕೆ ನಡೆಯುವ ವಚನ ಸಂವಾದವನ್ನು ಎಸ್‌ಪಿ ಯಶೋದಾ ವಂಟಗೋಡಿ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ನಡೆಯುವ ಬಸವ ಸಂಸ್ಕೃತಿ ಅಭಿಯಾನದ ಸಾಮರಸ್ಯ ನಡಿಗೆಯನ್ನು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಉದ್ಘಾಟಿಸಲಿದ್ದಾರೆ ಎಂದರು.ಸಂಜೆ 6ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ವಿಶ್ವಗುರು ಬಸವಣ್ಣನವರು ಸಾನ್ನಿಧ್ಯ ವಹಿಸಲಿದ್ದಾರೆ. ಲಿಂಗಾಯತ ಮಠಾಪತಿಗಳ ಒಕ್ಕೂಟದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಬಾಲ್ಕಿ, ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯರು, ತೋಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ಕೂಡಲಸಂಗಮ ಬಸವಧರ್ಮ ಪೀಠದ ಡಾ. ಗಂಗಾಮಾತಾಜಿ, ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಮ್ಮುಖವನ್ನು ಜಿಲ್ಲೆಯ ವಿವಿಧ ಮಠಾಧೀಶರು ವಹಿಸಿಕೊಳ್ಳಲಿದ್ದಾರೆ ಎಂದರು.ನಿವೃತ್ತ ನ್ಯಾಯಮೂರ್ತಿ ಎಸ್.ಎನ್. ಕೆಂಪಗೌಡ್ರ ಅಧ್ಯಕ್ಷತೆ ವಹಿಸಲಿದ್ದು, ಬಸವ ಕಲ್ಯಾಣದ ಸದ್ಗುರು ಬಸವಪ್ರಭು ಸ್ವಾಮೀಜಿ ಅನುಭಾವ ನಡೆಸಲಿದ್ದಾರೆ. ಜನಪದ ವಿದ್ವಾಂಸ ಡಾ. ಶಂಭು ಬಳಿಗಾರ ಅವರು ಉಪನ್ಯಾಸ ನೀಡಲಿದ್ದಾರೆ. ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ, ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ. ಬಣಕಾರ, ಪ್ರಕಾಶ ಕೋಳಿವಾಡ, ಶ್ರೀನಿವಾಸ ಮಾನೆ, ಯಾಸೀರಖಾನ ಪಠಾಣ, ಮಾಜಿ ಸಚಿವ ಬಿ.ಸಿ. ಪಾಟೀಲ, ಮಾಜಿ ಶಾಸಕರಾದ ನೆಹರು ಓಲೇಕಾರ, ಶಿವರಾಜ ಸಜ್ಜನರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ ಸೇರಿ ಅನೇಕರು ಭಾಗವಹಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಶಿವಯೋಗಿ ಮಾಮಲೆಪಟ್ಟಣಶೆಟ್ಟಿ, ಎಸ್.ಎನ್. ಕೆಂಪಗೌಡ್ರು, ಕಿರಣ ಕೊಳ್ಳಿ, ಅಶೋಕ ಮಾಗನೂರ, ಆನಂದ ಅಟವಾಳಗಿ, ವಿ.ಜಿ. ಯಳಗೇರಿ, ಪರಮೇಶಪ್ಪ ಮೇಗಳಮನಿ, ಶಿವಬಸಪ್ಪ ಮುದ್ದಿ, ಮಲ್ಲಿಕಾರ್ಜುನ ಹಿಂಚಿಗೇರಿ, ಗಂಗಾಧರ ಮಾಸೂರ, ಮುರಿಗೆಪ್ಪ ಕಡೆಕೊಪ್ಪ, ಶಿವಬಸಪ್ಪ ಅರಳೇಶ್ವರ, ಮೃತ್ಯುಂಜಯ ಮಹಾರಾಜಪೇಟೆ, ಬಸವರಾಜ ಮುಳುಗುಂದ ಇದ್ದರು.