ಕನ್ನಡಪ್ರಭ ವಾರ್ತೆ ಬೀದರ್
ಇಲ್ಲಿಯ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ನಡೆದ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಪಂಚದ ಎಲ್ಲ ಧರ್ಮಗಳು ಜೀವ, ಜಗತ್ತು, ಈಶ್ವರ ಈ ಮೂರರ ಸಂಬಂಧ ತಿಳಿಸುತ್ತವೆ. ದೇವರು ಬಹುತೇಕ ಧರ್ಮಗಳ ಕೇಂದ್ರ ಬಿಂದು. ಆದರೆ, ಬಸವ ಧರ್ಮದಲ್ಲಿ ಜೀವಿಯೇ ಕೇಂದ್ರಬಿಂದು. ಬಸವಣ್ಣನವರು ಪ್ರತಿಪಾದಿಸಿದ್ದು ಜೀವಪರ ಧರ್ಮ ಎಂದು ನುಡಿದರು.
ಮನುಕುಲ ಸೌಖ್ಯವಾಗಿರಲು ಎಲ್ಲರೂ ಕಾಯಕ ಮಾಡಲೇಬೇಕು. ಇದರಲ್ಲಿ ಯಾರಿಗೂ ವಿನಾಯಿತಿ ಇಲ್ಲ. ಪ್ರತಿಯೊಬ್ಬರೂ ದುಡಿದು ಉಂಡರೆ ದೇಶದ ಪ್ರಗತಿ ಸಾಧ್ಯ ಎಂದು ಹೇಳಿದರು.1945ರ ಮಹಾ ಯುದ್ಧದಲ್ಲಿ ಜಪಾನ್ ಅಣುಬಾಂಬ್‌ದಾಳಿಗೆ ತುತ್ತಾಗಿತ್ತು. ಆ ದೇಶದ ಜನರು ಕಾಯಕದಿಂದ ಕೆಲವೇ ವರ್ಷಗಳಲ್ಲಿ ತಮ್ಮ ದೇಶವನ್ನು ಮತ್ತೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಎದ್ದು ನಿಲ್ಲಿಸಿದರು. ಅಂತೆಯೇ ಬಸವಾದಿ ಪ್ರಮಥರು ಕಾಯಕದಲ್ಲೇ ದೇವರನ್ನು ಕಂಡರು. ಕಾಯಕವೇ ಕೈಲಾಸವೆಂದರು.
ಸಾನಿಧ್ಯ ವಹಿಸಿದ್ದ ಪ್ರಭುದೇವ ಸ್ವಾಮೀ ಮಾತನಾಡಿ, ಹಸಿದವರಿಗೆ ಅನ್ನವನಿಕ್ಕುವುದೇ ನಿಜವಾದ ಧರ್ಮ. ಹಸಿದವರ ಮೂಲಕ ದೇವರು ಉಣ್ಣುತ್ತಾನೆ. ಜಗತ್ತಿನಲ್ಲಿ ಯಾರೂ ಹಸಿವಿನಿಂದ ಬಳಲಬಾರದೆಂಬುದು ಬಸವಾದಿ ಶರಣರ ಆಶಯವಾಗಿತ್ತು ಎಂದು ತಿಳಿಸಿದರು.
ಸಂಕಲ್ಪ- ವಿಕಲ್ಪಗಳನ್ನು ಅಳಿಸಿಕೊಂಡು ಸತ್ಯದ ದಾರಿಯಲ್ಲಿ ಸಾಗಬೇಕು ಎಂದರು.
ಚನ್ನಬಸವ ಹಂಗರಗಿ ಅಧ್ಯಕ್ಷತೆ ವಹಿಸಿದ್ದರು. ನೀಲಮ್ಮನ ಬಳಗದ ಜಗದೇವಿ ಶಾಂತಕುಮಾರ ಪನಸಾಲೆ ಸಮ್ಮುಖ ವಹಿಸಿದ್ದರು. ಶ್ಯಾಮಲಾ ಎಲಿ, ಸಿದ್ದಮ್ಮ ಮಠಪತಿ ವಚನ ಗಾಯನ ಮಾಡಿದರು. ವನಿತಾ ಚಂದ್ರಕಾಂತ ಸೋಶೆಟ್ಟಿ ಭಕ್ತಿ ದಾಸೋಹಗೈದರು. ಶಿಲ್ಪಾ ಮಜಗೆ ಸ್ವಾಗತಿಸಿದರು.