ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಹಾಗೂ ಯುವ ಘಟಕ ಮತ್ತು ತಾಲೂಕಿನ ವೀರಶೈವ ಲಿಂಗಾಯತ ಸಂಘ, ಸಂಸ್ಥೆಗಳು ಆಯೋಜಿಸಿದ್ದ ಬಸವೇಶ್ವರ ಜಯಂತಿ ಅದ್ಧೂರಿಯಾಗಿ ನಡೆಯಿತು. ಪಟ್ಟಣದ ಜೆಎಸ್‌ಎಸ್ ಕಾಲೇಜು ಬಳಿ ಬಸವೇಶ್ವರ ಭಾವಚಿತ್ರಕ್ಕೆ ಸೋಮಹಳ್ಳಿ ಮಠಾಧೀಶ ಸಿದ್ದಮಲ್ಲಸ್ವಾಮೀಜಿ ಸಾನ್ನಿಧ್ಯದಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಜೊತೆಗೂಡಿ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.ಬೆಳ್ಳಿ ರಥದಲ್ಲಿ ಬಸವೇಶ್ವರ ಮೂರ್ತಿ ಜೊತೆಗೆ ಎತ್ತಿನ ಗಾಡಿಗಳು, ಜೋಡೆತ್ತುಗಳು, ನಂದಿ ಕಂಬ ಹಾಗೂ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಯುವಕರು ಕುಣಿತದ ನಡುವೆ ಮೆರವಣಿಗೆ ಅದ್ಧೂರಿಯಾಗಿ ಸಾಗಿತು. ಹಿಂದೆ ನಡೆದ ಬಸವ ಜಯಂತಿಗೆ ಹೋಲಿಸಿದರೆ ಜನ ಹೆಚ್ಚಿಗೆ ಸೇರಿದ್ದರು. ಮೈಸೂರು, ಊಟಿ ಹೆದ್ದಾರಿ ಹಾಗೂ ಪ್ರಮುಖ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿ, ಡಿಜೆ ಸದ್ದಿಗೆ ಬಿಸಿಲಿನ ನಡುವೆಯೂ ಯುವಕರು ಕುಣಿದು ಕುಪ್ಪಳಿಸಿದರು. ಮೆರವಣಿಗೆ ನಡುವೆ ಸಿಂದೂರ ಹಾಗೂ ಸೈನಿಕರಿಗೆ ಜೈಕಾರ ಕೂಗಿದರು.
ಮೆರವಣಿಗೆ ಚಾಲನೆ ಸಮಯದಲ್ಲಿ ಮಾದಾಪಟ್ಟಣ ಶ್ರೀ, ಹಂಗಳ ಶ್ರೀ, ಕುರುಬರಹುಂಡಿ ಶ್ರೀ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಮೂಡ್ಲುಪುರ ನಂದೀಶ್, ತಾಲೂಕು ಅಧ್ಯಕ್ಷ ರವಿ, ಯುವ ಘಟಕದ ಅಧ್ಯಕ್ಷ ಎಸ್.ಗುರುಪ್ರಸಾದ್, ಬಿಜೆಪಿ ಮುಖಂಡರಾದ ಪ್ರಣಯ್, ಹಂಗಳ ನಂದೀಶ್ ಸೇರಿದಂತೆ ಕೆಲ ಸಂಘ, ಸಂಸ್ಥೆಗಳ ಮುಖಂಡರು ಹಾಗೂ ವೀರಶೈವ ಸಂಘಟನೆಗಳ ಮುಖಂಡರು ಸೇರಿದಂತೆ ಐದು ಸಾವಿರದಷ್ಟು ಜನ ಸೇರಿದ್ದರು. ಡಿವೈಎಸ್ಪಿ ಲಕ್ಷ್ಮಯ್ಯ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಎನ್.ಜಯಕುಮಾರ್ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಿದ್ದರು.ಶಾಸಕರಿಂದ ಉಪಹಾರ ವ್ಯವಸ್ಥೆ:
ಗುಂಡ್ಲುಪೇಟೆಯಲ್ಲಿ ಸೋಮವಾರ ನಡೆದ ಬಸವ ಜಯಂತಿಗೆ ಆಗಮಿಸಿದ್ದ ಸಾವಿರಾರು ಮಂದಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಉಪಹಾರದ ವ್ಯವಸ್ಥೆ ಮಾಡಿದ್ದರು. ಬಸವ ಜಯಂತಿಗೆ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಲಕ್ಷಾಂತರ ರು.ದೇಣಿಗೆ ನೀಡಿದರು.ಟ್ರಾಫಿಕ್‌ಗೆ ನಲುಗಿದ ಪ್ರವಾಸಿಗರು
ಪಟ್ಟಣದ ಮೈಸೂರು-ಊಟಿ ಹೆದ್ದಾರಿ, ಚಾಮರಾಜನಗರ-ಗುಂಡ್ಲುಪೇಟೆ ಹೆದ್ದಾರಿಯಲ್ಲಿ ಮೆರವಣಿಗೆ ಸಾಗುವ ರಸ್ತೆಯ ಒಂದು ಬದಿ ಮೆರವಣಿಗೆ ಸಾಗಿದರೂ ಮತ್ತೊಂದು ರಸ್ತೆಯ ಮತ್ತೊಂದು ಬದಿಯಲ್ಲಿ ಎರಡು ಕಡೆಯಿಂದ ವಾಹನಗಳು ಸಂಚರಿಸುತ್ತಿದ್ದ ಕಾರಣ ಪ್ರಯಾಣಿಕರು ಹೈರಾಣರಾಗಬೇಕಾಯಿತು. ಪೊಲೀಸರು ಅಧಿಕ ಸಂಖ್ಯೆಯಲ್ಲಿದ್ದರೂ ಸುಗಮ ಸಂಚಾರಕ್ಕೆ ಆಗಲಿಲ್ಲ. ಮಹಾತ್ಮರ ಜಯಂತಿಗೆ ಮೆರವಣಿಗೆ ಮಾಡಲು ತಕರಾರೇನಿಲ್ಲ. ಆದರೆ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕಿತ್ತು ಎಂದು ಪ್ರವಾಸಿಗರೊಬ್ಬರು ಹೇಳಿದರು.