ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇದೇ ಮೊದಲ ಬಾರಿಗೆ ಬಸವಕೇಂದ್ರ ಮುರುಘಾ ಮಠದಲ್ಲಿ ಮೂರು ದಿನಗಳ ಕಾಲ ಸಾಂಸ್ಕೃತಿಕ ನಾಯಕ ಬಸವೇಶ್ವರರ ಜಯಂತಿಯನ್ನು 28, 29 ಹಾಗೂ 30 ರಂದು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.ಜಯಂತಿಗೆ ಪೂರಕವಾಗಿ ವಿವಿಧ ಸ್ಪರ್ಧೆಗಳು ನಡೆಯಲಿದ್ದು, 28ರಂದು ಬೆಳಗ್ಗೆ ಶ್ರೀಮಠದ ಆವರಣದಲ್ಲಿ ಮಕ್ಕಳು ಹಾಗೂ ಹಿರಿಯರಿಗಾಗಿ ವಚನ ಕಂಠಪಾಠ ಸ್ಪರ್ಧೆ, ಮಹಿಳೆಯರಿಗಾಗಿ ಸಾಂಪ್ರದಾಯಿಕ ಮತ್ತು ಬಸವಾದಿ ಶಿವಶರಣರ ಭಾವಚಿತ್ರಗಳ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ, ಇದರ ಜೊತೆಗೆ ವಯಸ್ಕರು ಹಾಗೂ ಮಕ್ಕಳಿಗಾಗಿ ಬಸವಾದಿ ಶಿವಶರಣರ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿದೆ.
ಸಂಜೆ 6 ಗಂಟೆಗೆ ಅನುಭವ ಮಂಟಪದಲ್ಲಿ ಚಿಂತನಗೋಷ್ಠಿ ನಡೆಯಲಿದ್ದು, ಮೈಸೂರಿನ ಕುಂದೂರು ಮಠದ ಡಾ.ಶರಶ್ಚಚಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಬಸವ ಬೆರಗು(ಶರಣರ ದೃಷ್ಟಿಯಲ್ಲಿ ಬಸವಣ್ಣನವರು) ವಿಷಯ ಕುರಿತು ಚಿಂತನ ನೀಡುವರು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸುವರು. ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಶರಣ ಸಂಸ್ಕೃತಿ ನಿಜಾಚರಣೆಗಳು ವಿಷಯಾವಲೋಕನ ಮಾಡುವರು. ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಪಾಲ್ಗೊಳ್ಳುವರು.ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ವಚನ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗಾನಯಾಗಿ ಸಂಗೀತ ಬಳಗದ ಅಧ್ಯಕ್ಷ ತೋಟಪ್ಪ ಉತ್ತಂಗಿ ವಚನ ಸಂಗೀತ ನಡೆಸಿಕೊಡುವರು.
29ರಂದು ಶ್ರೀಮಠದ ಆವರಣದಲ್ಲಿ ಬೆಳಗ್ಗೆ 10ಗಂಟೆಗೆ ಪಿಯುಸಿ ಹಾಗೂ ಪದವೀಧರರಿಗೆ ಸಾಂಸ್ಕೃತಿಕ ನಾಯಕ ಬಸವಣ್ಣ ವಿಷಯ ಕುರಿತು ಭಾಷಣ ಸ್ಪರ್ಧೆ ಹಾಗೂ 18ವರ್ಷ ಮೇಲ್ಪಟ್ಟವರಿಗೆ ಸರ್ವ ಶರಣರ ದೃಷ್ಟಿಯಲ್ಲಿ ಬಸವಣ್ಣ ವಿಷಯ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.ಸಂಜೆ 6ಗಂಟೆಗೆ ಬಸವಣ್ಣನವರ ಆರ್ಥಿಕ ಚಿಂತನೆಗಳು ವಿಷಯ ಕುರಿತು ಚಿಂತನಗೋಷ್ಠಿ ನಡೆಯಲಿದ್ದು, ಇಳಕಲ್‌ನ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಮಹಾಸ್ವಾಮೀಜಿ ದಿವ್ಯಸಾನ್ನಿಧ್ಯ , ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ.ಸಿ ಕಳಸದ, ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪಾಲ್ಗೊಳ್ಳುವರು.
ಡಾ.ಬಿ.ರಾಜಶೇಖರಪ್ಪ ಅವರ ಸಂಪಾದಕತ್ವದಲ್ಲಿ ಸತ್ಯಶುದ್ಧ ಕಾಯಕ ಎಂಬ ತ್ರೈಮಾಸಿಕ ಪತ್ರಿಕೆ ಬಿಡುಗಡೆಯಾಗಲಿದೆ. ಆರ್ಥಿಕ ಚಿಂತಕ ಹೊಸಪೇಟೆಯ ಟಿ.ಆರ್.ಚಂದ್ರಶೇಖರ್ ಅವರು ಬಸವಣ್ಣನವರ ಆರ್ಥಿಕ ಚಿಂತನೆಗಳು ವಿಷಯ ಮಂಡನೆ ಮಾಡುವರು. ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ಹಾಗೂ ಚಿತ್ರದುರ್ಗ ಕೆಡಿಪಿ ಸದಸ್ಯ ಕೆ.ಸಿ ನಾಗರಾಜ್ ಉಪಸ್ಥಿತರಿರುವರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಡಾ.ಪಂಡಿತ್ ಮುದ್ದು ಮೋಹನ್ ವಚನ ಗಾಯನ ನಡೆಸಿಕೊಡಲಿದ್ದಾರೆ. ನಂತರ ಎಸ್‌ಜೆಎಂ ದಂತ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಅನುಭವ ಮಂಟಪ ನೃತ್ಯ ರೂಪಕ ನಡೆಯಲಿದೆ.30ರ ಬೆಳಗ್ಗೆ 10ಗಂಟೆಗೆ ಬಸವಣ್ಣನವರ ಜಯಂತ್ಯುತ್ಸವವು ಚಿತ್ರದುರ್ಗ ಸಮೀಪದ ಗೋನೂರು ನಿರಾಶ್ರಿತರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಆಡಳಿತ ಮಂಡಳಿಯ ಸದಸ್ಯರಾದ ಡಾ.ಪಿ.ಎಸ್.ಶಂಕರ್ ಹಾಗೂ ಚಂದ್ರಶೇಖರ್ ಎಸ್.ಎನ್ ಭಾಗವಹಿಸವರು. ರಾಯಚೂರು ಶ್ರೀ ಬಸವ ಸೇವಾ ಪ್ರತಿಷ್ಠಾನದ ಶರಣ ಬಸವರಾಜಸ್ವಾಮಿ ಅವರನ್ನು ಸನ್ಮಾನಿಸಲಾಗುವುದು. ಸಂಜೆ 4ಗಂಟೆಗೆ ವಿಶ್ವಗುರು ಮಹಾಮಾನವತಾವಾದಿ ಸಾಂಸ್ಕೃತಿಕ ನಾಯಕ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ವೀರಶೈವ ಸಮಾಜ ವಿವಿಧ ಸಮಾಜಗಳ ಸಹಯೋಗದಲ್ಲಿ ನಡೆಯಲಿದೆ. ಮೆರವಣಿಗೆಯು ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಆರಂಭಗೊಂಡು ಗಾಂಧಿವೃತ್ತ, ಆನೆಬಾಗಿಲು, ದೊಡ್ಡಪೇಟೆ, ರಂಗಯ್ಯನಬಾಗಿಲು, ಬಸವಮಂಟಪ ರಸ್ತೆ, ಅಂಬೇಡ್ಕರ್ ವೃತ್ತ, ಬಿ.ಡಿ ರಸ್ತೆಯ ಮೂಲಕ ದೇವಸ್ಥಾನ ತಲುಪಲಿದೆ.