ಬಸವ ಜಯಂತಿ ರಾಷ್ಟ್ರ ಮಟ್ಟದಲ್ಲಿ ಆಗಲಿ: ಅರವಿಂದ ಜತ್ತಿ

KannadaprabhaNewsNetwork |  
Published : May 01, 2025, 12:49 AM IST
30ಕೆಪಿಎಲ್29 ಕೊಪ್ಪಳ ನಗರದ ಗವಿಮಠ ಆವರಣದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ಡಾ. ಅರವಿಂದ ಜತ್ತಿ ಅವರು ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಕಾಶ್ಮೀರದಲ್ಲಿ ನಡೆದ ದುರಂತದಿಂದ ಕರುಳು ಕಿತ್ತು ಬಂದಿತು. ಮಕ್ಕಳೆದುರಿಗೆ ಅವರ ತಂದೆ ಕೊಂದ ಘಟನೆ ಕೇಳಿಸಿಕೊಳ್ಳಲು ಆಗದು. ಹೀಗಾಗಿ, ನಾವು ಬಸವ ಜಯಂತಿಗೆ ಸಂಗ್ರಹಿಸಿದ್ದ ಹಣದಲ್ಲಿ ₹ 5 ಲಕ್ಷ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಕಳುಹಿಸಿಕೊಟ್ಟಿದ್ದೇವೆ.

ಕೊಪ್ಪಳ:

ವಿಶ್ವಶಾಂತಿ ಬಯಸಿದ, ಸಮ ಸಮಾಜ ನಿರ್ಮಿಸಿದ ಬಸವಣ್ಣನವರ ಜಯಂತಿಯನ್ನು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲಿ ಮಾಡಬೇಕು. ದೇಶಾದ್ಯಂತ ಆಚರಿಸಬೇಕು ಎಂದು ಬಸವ ಸಮಿತಿ ರಾಜ್ಯಾಧ್ಯಕ್ಷ ಡಾ. ಅರವಿಂದ ಜತ್ತಿ ಆಗ್ರಹಿಸಿದರು.

ನಗರದ ಗವಿಮಠ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಬಸವ ಜಯಂತಿ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾಶ್ಮೀರದಲ್ಲಿ ನಡೆದ ದುರಂತದಿಂದ ಕರುಳು ಕಿತ್ತು ಬಂದಿತು. ಮಕ್ಕಳೆದುರಿಗೆ ಅವರ ತಂದೆ ಕೊಂದ ಘಟನೆ ಕೇಳಿಸಿಕೊಳ್ಳಲು ಆಗದು. ಹೀಗಾಗಿ, ನಾವು ಬಸವ ಜಯಂತಿಗೆ ಸಂಗ್ರಹಿಸಿದ್ದ ಹಣದಲ್ಲಿ ₹ 5 ಲಕ್ಷ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಕಳುಹಿಸಿಕೊಟ್ಟಿದ್ದೇವೆ. ಜತೆಗೆ ಬಸವ ಜಯಂತಿಯನ್ನು ರಾಷ್ಟ್ರ ಜಯಂತಿಯನ್ನಾಗಿ ಮಾಡುವಂತೆ ಪ್ರಧಾನಿಗೆ ಪತ್ರ ಬರೆದಿರುವುದಾಗಿ ಹೇಳಿದರು. ಇದನ್ನು ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮನವೊಲಿಸಬೇಕು. ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕು ಎಂದರು.

ಲಿಂಗಾಯತರು ಭಾರತೀಯರು ಹೌದೋ, ಅಲ್ಲವೋ ಎಂದು ಪ್ರಶ್ನೆ ಮಾಡಿದ ಅವರು, ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಏಕೆ ನೀಡುತ್ತಿಲ್ಲ? ಈ ದಿಸೆಯಲ್ಲಿ ನಮ್ಮ ಪ್ರಯತ್ನ ಆಗಬೇಕು ಎಂದರು.

ಬಸವಣ್ಣ ಜಯಂತಿ ಆಚರಿಸಿ, ಅವರನ್ನು ಹೊಗಳಿ ಹೊನ್ನ ಶೂಲಕ್ಕೇರಿಸುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಹೊಗಳುವುದು ಬೇಡ, ಅನುಸರಿಬೇಕು. ಅವರ ವಚನ ಪಾಲಿಸಬೇಕು. ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ವೇದಿಕೆ ಮೇಲಿದ್ದವರು ಗಣ್ಯರು ಎಂದು ಹೇಳುವುದನ್ನು ಬಸವಣ್ಣ ಒಪ್ಪುವುದಿಲ್ಲ. ಎದುರಿಗೆ ಕುಳಿತವರು ಅಗಣ್ಯರೇ ಎಂದು ಪ್ರಶ್ನಿಸಿದರು.

ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಬಸವ ಜಯಂತಿ ಆಚರಿಸುತ್ತಿದ್ದಾರೆ ಎಂದ ಅವರು, ಅವರ ವಚನಗಳು ಇಂದು ಜಗತ್ತಿಗೆ ಬೇಕಾಗಿವೆ. ಇಂದು ಭ್ರಮೆಯಲ್ಲಿ ಯುದ್ಧ ದಾಹಿಯಾಗಿದ್ದೇವೆ. ಉಕ್ರೇನ್ ಯುದ್ಧ ಸೇರಿದಂತೆ ಜಗತ್ತಿನ ಹಲವೆಡೆ ನಡೆಯುತ್ತಿರುವ ಯುದ್ಧಕ್ಕೆ ಪರಿಹಾರ ಬಸವಣ್ಣನ ವಚನಗಳು ಪ್ರಸ್ತುತ ಎಂದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಸಮಸಮಾಜದ ಕಲ್ಪನೆ ಬಿತ್ತಿದವರು ಬಸವಣ್ಣ. ಆ ಕಾರಣಕ್ಕಾಗಿಯೇ ಅವರನ್ನು ವಿಶ್ವಗುರು ಎನ್ನಲಾಗುತ್ತದೆ ಎಂದು ಹೇಳಿದರು.

ಡಾ. ವೀಣಾ ಎಲಿಗಾರ ಮಾತನಾಡಿ, ಕಾಯಕ ಕಲ್ಪನೆ ಬೆಳೆಸಿದ ಹಿರಿಮೆ ಬಸವಣ್ಣನರದ್ದು. ಕೇವಲ ಕಾಯಕ ಮಾಡುವುದಲ್ಲದೆ ಕಾಯಕದಿಂದ ಬಂದಿದ್ದನ್ನು ಹಂಚಿ ತಿನ್ನುವ ಸಂಸ್ಕೃತಿ ಬೆಳೆಸಿದರು. ಲಿಂಗ ಸಮಾನತೆ, ಜಾತಿ ಸಮಾನತೆ ಸೇರಿದಂತೆ ಎಲ್ಲ ಸಮಾನತೆಯ ಕಲ್ಪನೆ ಬೆಳೆಸಿದವರು ಬಸವಣ್ಣನವರು ಎಂದರು.

ಜವವಾಡದ ಅಲ್ಲಮಪ್ರಭು ಪೀಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಗವಿಸಿದ್ದಪ್ಪ ಕೊಪ್ಪಳ ಪ್ರಾಸ್ತಾವಿಕ ಮಾತನಾಡಿದರು. ಮಹೇಶ ಬಳ್ಳಾರಿ ಕಾರ್ಯಕ್ರಮ ನಿರೂಪಿಸಿದರು. ಶಕುಂತಲಾ ಬೆನ್ನಾಳ ಪ್ರಾರ್ಥಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ