ಆಂಗ್ಲ ಮಾಧ್ಯಮದ ಪೂರ್ವ ಪ್ರಾಥಮಿಕ ಮಕ್ಕಳಿಗಾಗಿ ಆಕರ್ಷಕ 7 ನಮೂನೆಯ ಕೃತಿಗಳ ಲೋಕಾರ್ಪಣೆ
ಕನ್ನಡಪ್ರಭ ವಾರ್ತೆ ಕಲಬುರಗಿಕಲ್ಯಾಣ ನಾಡಲ್ಲಿ ಪ್ರಕಾಶನ ರಂಗದಲ್ಲಿ ಹೆಸರವಾಸಿಯಾಗಿರುವ ಇಲ್ಲಿನ ಕೊನೆಕ್ ಪರಿವಾರದವರ ಒಡೆತನದ ಬಸವ ಪ್ರಕಾಶನ ಬುಕ್ ಸೆಲ್ಲರ್ಸ್ ಸಂಸ್ಥೆಯವರು ಇದೇ ಮೊದಲ ಬಾರಿಗೆ ಹೊರ ತಂದಿರುವ ಆಂಗ್ಲ ಮಾಧ್ಯಮದ ಪೂರ್ವ ಪ್ರಾಥಮಿಕ ಮಕ್ಕಳಿಗಾಗಿ ಆಕರ್ಷಕ 7 ನಮೂನೆಯ ಕೃತಿಗಳನ್ನು ಹೊರತರುವ ಮೂಲಕ ಗಮನ ಸೆಳೆದಿದ್ದಾರೆ.
ಇದುವರೆಗೂ ಕೊನೆಕ್ ಪರಿವಾರದವರ ಸಿದ್ದಲಿಂಗೇಶ್ವರ ಹಾಗೂ ಬಸವ ಪ್ರಕಾಶನ ಪಿಯುಸಿಯಿಂದ ಹಿಡಿದು ಪದವಿ, ಸ್ನಾತಕ ಪದವಿವರೆಗಿನ ಎಲ್ಲಾ ಹಂತದಲ್ಲಿಯೂ ಪುಸ್ತಕಗಳನ್ನು ಮುದ್ರಿಸುತ್ತ ಗಮನ ಸೆಳೆದಿದ್ದರು, ಇದೀಗ ಮಕ್ಕಳಿಗಾಗಿ ಫೊನೆಟಿಕ್, ಲಿಟರಲ್ ಹಾಗೂ ಕರೆಸಿವ್ ರೈಟಿಂಗ್ ಸೇರಿದಂತೆ ಪೂರ್ವ ಪ್ರಾಥಮಿಕ ಹಂತದ ಕಲಿಕೆಯಲ್ಲಿರುವ ಮಕ್ಕಳಿಗಾಗಿ ಹಲವು ವಿಷಯಗಳಲ್ಲಿ 17 ಕೃತಿಗಳನ್ನು ಹೊರತರುವ ಮೂಲಕ ಪೂರ್ವ ಪ್ರಾಥಮಿಕ ರಂಗಕ್ಕೂ ಕಾಲಿಟ್ಟಿದ್ದಾರೆ.ಬಸವ ಪ್ರಕಾಶನ ಬುಕ್ ಸೆಲ್ಲರ್ ಸಂಸ್ಥೆಯಿಂದ ಹೊರತಂದಿರುವ ಲಿಟರಲ್, ಫೋನೆಟಿಕ್, ಕರೇಸೀವ್, ಸಾಫ್ಟ್ ಸ್ಕಿಲ್, ಆರ್ಟ್ ಆಂಡ್ ಕ್ರಾಫ್ಟ್ ಸೇರಿದಂತೆ ಹಲವು ವಿಷಯಗಳ ಮೇಲೆ ಕೇಂದ್ರೀಕರಿಸುವಂತಹ ಆಕರ್ಷಕ ಕೃತಿಗಳನ್ನು ಪುಟಾಣಿಗಳಿಗೆ ಲೋಕಾರ್ಪಣೆ ಮಾಡಲಾಯಿತು.
ಇಲ್ಲಿನ ಸೂಪರ್ ಮಾರ್ಕೆಟ್‌ನ ಚೆಂಬರ್ ಸಭಾಂಗಣದಲ್ಲಿ ಗುರುವಾರ ನಡೆದ ಬಸವ ಪ್ರಕಾಶನದ ಸ್ಥಾಪಕರಾದ ಶ್ರೀಮತಿ ಬಸಮ್ಮ ಕೋನಕ್ ಅವರ 12ನೇ ವರ್ಷದ ಪುಣ್ಯ ಸ್ಮರಣೋತ್ಸವ , ಪೂರ್ವ ಪ್ರಾಥಮಿಕ ಕೃತಿಗಳ ಲೋಕಾರ್ಪಣೆ ಹಾಗೂ ಬಸವ ಸಿರಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಕೂಡಲ ಸಂಗಮ ಬಸವ ಧರ್ಮ ಪೀಠದ ಡಾ. ಗಂಗಾ ಮಾತಾಜಿ, ಅಭಾ ಶರಣ ಸಾಹಿತ್ಯ ಪರಿಷತ್ತಿನ ಪ್ರಮುಖರಾದ ಅಪ್ಪಾರಾವ ಅಕ್ಕೋಣೆ, ಪ್ರಕಾಶಕರಾದ ಬಸವರಾಜ ಕೊನೆಕ್ ಸೇರಿದಂತೆ ವದಿಕೆಯಲ್ಲಿದ್ದ ಗಣ್ಯರು ಕೃತಿಗಳನ್ನು ಪೂರ್ವ ಪ್ರಾಥಮಿಕ ಮಕ್ಕಳಿಗೆ ಅರ್ಪಣೆ ಮಾಡಿದರು.ಸಮಾರಂಭದಲ್ಲಿ ಮಾತನಾಡಿದ ಅಪ್ಪಾರಾವ ಅಕ್ಕೋಣೆ, ಡಾ. ಗಂಗಾ ಮಾತಾಜಿಯವರು ನೂರಾರು ಕೃತಿಗಳ ಮೂಲಕ ರಾಜ್ಯದ ಗಮನ ಸೆಳೆದಿರುವ ಕೊನೆಕ್ ಪರಿವಾರದ ಬಸವ, ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆಗಳ ಕೆಲಸಗಳನ್ನು ಬಹುವಾಗಿ ಮೆಚ್ಚಿಕೊಂಡರು.
ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿರೋದನ್ನ ನಿಜಾರ್ಥದಲ್ಲಿ ಪಾಲಿಸುತ್ತಿರೋರು ಪ್ರಕಾಶನ ರಂಗದಲ್ಲಿ ಹೆಸರು ಮಾಡಿರುವ ಬಸವರಾಜ ಕೊನೆಕ್ ಅವರು ಎಂದ ಶ್ಲಾಘಿಸಿದರು.ಗಂಗಾಧರ ಎಸ್. ದೇಸಾಯಿ ಅವರು ಕೃತಿಗಳನ್ನು ಪರಿಚಯಿಸುತ್ತ ಬಸವ ಪ್ರಕಾಶನದ ಮೊದಲ ಪ್ರಯತ್ನವಾಗಿರುವ ಪುಟಾಣಿಗಳ ಪೂರ್ವ ಪ್ರಾಥಮಿಕ 17 ಕೃತಿಗಳು ಇತರರಿಗಿಂತ ಅದು ಹೇಗೆ ಭಿನ್ನವೆಂಬುದನ್ನು ವಿವರಿಸುತ್ತ ಪ್ರಕಾಶನದ ಈ ಹೊಸ ಹೆಜ್ಜೆಯನ್ನು ಎಲ್ಲರೂ ಸ್ವಾಗತಿಸುವಂತೆ ಕರೆ ನೀಡಿದರು.
ಇದು ಒಂದು ಸವಾಲಿನ ಕೆಲಸವಾದರೂ ಬಸವರಾಜ ಕೊನೆಕ್, ಅವರ ಪುತ್ರರಾದ ಶರಣಬಸವ, ಸಿದ್ದಲಿಂಗ ಕೊನೆಕೆ ಅವರ ನಿರಂತರ ಪ್ರೋತ್ಸಾಹದಿಂದ ಸಾಧ್ಯವಾಗಿದೆ. ಬರುವ ದಿನಗಳಲ್ಲಿ ವರ್ಕ್ ಬುಕ್‌ಗಳನ್ನೂ ಮುದ್ರಿಸಿ ಹೊರತರೋದಾಗಿ ಹೇಳಿದರು.ಪ್ರಕಾಶನದ ಸಾಹಿತಿ ಸಲಹಾ ಸಮಿತಿ ಸದಸ್ಯ ಪ್ರೊ.ಶಿವರಾಜ ಪಾಟೀಲ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತ ಲಿಂ. ಬಸಮ್ಮ ಕೊನೆಕ್ ಅವರ ಬಸವ ತತ್ವಗಳ ಪ್ರಚಾರದ ಆಸಕ್ತಿಯನ್ನು ವಿವರಿಸುತ್ತ ಪ್ರಕಾಶನ ರಂಗದಲ್ಲಿ ಹೆಸರು ಮಾಡಿರುವ ಬಸವರಾಜರಿಗೆ ಅವರು ಬೆನ್ನ ಹಿಂದಿನ ಬೆಳಕಿನಂತೆ ಇದ್ದರು ಎಂದರು.
ಸತಿಪತಿಗಳೊಂದಾಗಿ ಪ್ರಕಾಶನ ರಂಗ, ಬಸವ ತತ್ವಗಳನ್ನು ಈ ಭಾಗದಲ್ಲಿ ಬಳೆಸಿದ ಪರಿ ಅನನ್ಯ ಎಂದು ಹೇಳುತ್ತ ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಪ್ರಕಾಶಕರಾದ ಬಸವರಾಜ ಕೊನೇಕ್ ಅವರ ಸಾಧನೆ ಕೊಂಡಾಡಿದರು.ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಸೇರಿದಂತೆ ಬರಹಗಾರರು, ಸಾಹಿತಿಗಳು, ಲೇಖಕರು, ಪುಸ್ತಕ ಆಸಕ್ತರು, ಓದುಗರು, ಬಸವ ತತ್ವ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಡಾ.ಗಂಗಾದೇವಿ ಮಾತಾಜಿಗೆ ಬಸವಸಿರಿ ಪ್ರಶಸ್ತಿ ಪ್ರದಾನಸಮಾರಂಭದಲ್ಲಿ ಬಸವ ಪ್ರಕಾಶನದ ಸ್ಥಾಪಕರಾದ ಲಿಂ.ಶ್ರೀಮತಿ ಬಸಮ್ಮ ಕೋನಕ್ ಅವರ 12ನೇ ವರ್ಷದ ಪುಣ್ಯಸ್ಮರಣೋತ್ಸವ ಅಂಗವಾಗಿ ಕಲಬುರಗಿಯಿಂದ ನೀಡುವ ರಾಜ್ಯಮಟ್ಟದ ಬಸವ ಸಿರಿ ಪ್ರಶಸ್ತಿಗೆ ಭಾಜನರಾಗಿರುವ ಕೂಡಲಸಂಗಮ ಬಸವ ಧರ್ಮಪೀಠದ ಜಗದ್ಗುರು ಡಾ.ಗಂಗಾದೇವಿ ಮಾತಾಜಿಯವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಪುರಸ್ಕಾರ 11 ಸಾವಿರ ರು. ನಗದು ಮತ್ತು ಪ್ರಶಸ್ತಿ ಪ್ರಮಾಣ ಪತ್ರ ಒಳಗೊಂಡಿದೆ. ಬಸವ ತತ್ವ ಪ್ರಸಾರಕ್ಕಾಗಿ ಸಮರ್ಪಿಸಿಕೊಂಡು ಇಡಿ ಜೀವನಮಾನವನ್ನು ಸವೆಸುತ್ತಿರುವ ಗಂಗಾ ಮಾತಾಜಿಯವರ ಸೇವೆಯನ್ನು ಈ ಸಂದರ್ಭಲ್ಲಿ ಕೊಂಡಾಡಲಾಯಿತು. ಬಸವ ತತ್ವ ಪ್ರಸಾರ ಮಾಡುತ್ತ ದೇಶ ವಿದೇಶಗಳಲ್ಲಿ ಹಾಗೂ ಉತ್ತರ ಕರ್ನಾಟಕದಲ್ಲಿ ಬಸವ ಬಳ್ಳಿ ಪಸರಿಸಿದ ಡಾ.ಗಂಗಾದೇವಿ ಮಾತಾಜಿ ಅವರು ಬಸವ ತತ್ವದ ಪ್ರಸಾರಕ್ಕಾಗಿ ದುಡಿದವರು. ಇವರ ಸಾಧನೆ ಕಂಡು ಸಂತೋಷಗೊಂಡು ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಪ್ರಕಾಶನದ ಪರವಾಗಿ ಬಸವರಾಜ ಕೊನೆಕ್, ಸಿದ್ದಲಿಂಗ ಕೊನೇಕ್, ಹಾಗೂ ಶರಣಬಸವ ಕೊನೇಕ್ ಸಂತೋಷದಿಂದ ಹೇಳಿದರು.