ಧಾರವಾಡ: ಸದಾ ಎಲ್ಲರೊಂದಿಗೆ ಬೆರೆತು ನಕ್ಕು ನಗಿಸುತ್ತ ಉತ್ತರ ಕರ್ನಾಟಕದ ಎಲ್ಲ ಜಾನಪದ ಪ್ರಕಾರಗಳನ್ನು ಕರಗಿಸಿಕೊಂಡು ನಾಡಿನ ಜನತೆಗೆ ಹಂಚಿಕೊಳ್ಳುತ್ತಿದ್ದ ಬಸವಲಿಂಗಯ್ಯ ಹಿರೇಮಠ ಪ್ರಾಮಾಣಿಕ ಹಾಗೂ ಭಾವುಕ ವ್ಯಕ್ತಿತ್ವ ಹೊಂದಿದ್ದರು ಎಂದು ಹಿರಿಯ ಪತ್ರಕರ್ತ ಡಾ. ಬಂಡು ಕುಲಕರ್ಣಿ ಹೇಳಿದರು.
ಇಂದು ಆ ಪ್ರಾಮಾಣಿಕತೆ, ಪ್ರಯತ್ನ, ದುಡಿಮೆಗಳ ಕೊರತೆ ಕಲಾವಿದರಲ್ಲಿ ಎದ್ದು ಕಾಣುತ್ತಿದೆ. 30 ವರ್ಷಗಳಿಂದ ಜಾನಪದ ಸಂಶೋಧನ ಕೇಂದ್ರವನ್ನು ನಡೆಸಿಕೊಂಡು ಬಂದು ಅನೇಕ ಮೌಲಿಕ ಪುಸ್ತಕಗಳನ್ನು ಹೊರ ತಂದಿದ್ದಾರೆ. ಗಜಾನನ ಚಿನಗುಡಿ ಅವರು ಅವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿಯನ್ನು ಇಟ್ಟು ದತ್ತಿ ಆರಂಭಿಸಿದ್ದು ಶ್ಲಾಘನೀಯ ಎಂದರು.
ಬಾಗಲಕೋಟೆ ಜಿಲ್ಲೆಯ ಬೆಳಗಿ ತಾಲೂಕಿನ ಎಳ್ಳಿಗುತ್ತಿ ಗ್ರಾಮದ ತತ್ವಪದ ಕಲಾವಿದ ರಂಗಪ್ಪ ಹಲಕುರ್ಕಿ ಅವರಿಗೆ ಬಸವಲಿಂಗಯ್ಯ ಹೆಸರಿನ ₹10 ಸಾವಿರ ಮೌಲ್ಯದ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಬಸವಲಿಂಗಯ್ಯ ಸ್ವತಃ ಒಬ್ಬ ಕವಿ ಹಾಗೂ ಹಾಡುಗಾರರಾಗಿದ್ದಾರೆ. ಜಾನಪದಕ್ಕೆ ಅವರು ಕೊಟ್ಟ ಕೊಡುಗೆ ಅಪಾರ. ಅವರ ಹೆಸರಿನ ಪ್ರಶಸ್ತಿಯನ್ನು ಬೀಳಗಿಯ ರಂಗಪ್ಪ ಹಲಕುರ್ಕಿ ಅವರಿಗೆ ನೀಡಿದ್ದು ಸಾರ್ಥಕ ಎಂದರು.ಪ್ರಕಾಶ ಉಡಿಕೇರಿ ಮಾತನಾಡಿದರು.
ಬಸವಲಿಂಗಯ್ಯನವರ ಕನಸನ್ನು ಇಂದು ಪತ್ನಿ ವಿಶ್ವೇಶ್ವರಿ ಹಾಗೂ ಮಗ ನಾಗಭೂಷಣ ಮುಂದುವರಿಸಬೇಕಾಗಿದೆ ಎಂದರು.
ಬಾಗಲಕೋಟಿ ಕಸಾಪ ಅಧ್ಯಕ್ಷ ಶಿವಾನಂದ ಶಲ್ಲಿಕೇರಿ, ವಿವೇಕ್ ಕುರುಗುಂದ, ದತ್ತಿದಾನಿ ಗಜಾನನ ಚಿನಗುಡಿ, ಪ್ರತಿಷ್ಠಾನದ ಅಧ್ಯಕ್ಷ ಎನ್.ಎಸ್. ಗಲಗಲಿ ಇದ್ದರು. ಆರಂಭದಲ್ಲಿ ಜಾನಪದ ಸಂಶೋಧನಾ ಕೇಂದ್ರದ ಸಂಗೀತ ಬಳಗ ಬಸಲಿಂಗಯ್ಯ ಅವರ ತತ್ವಪದಗಳನ್ನು ಪ್ರಸ್ತುತಪಡಿಸಿದ್ದರು. ನಾಗಭೂಷಣ ಹಿರೇಮಠ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು, ಜಾನಪದ ಸಂಶೋಧನ ಕೇಂದ್ರದ ಅಧ್ಯಕ್ಷ ಗು.ರು. ಕಲ್ಮಠ ವಂದಿಸಿದರು.