ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಬಸವಣ್ಣನವರು ಸಮಾಜದಲ್ಲಿನ ತಾರತಮ್ಮ, ಅನಿಷ್ಟಗಳ ವಿರುದ್ಧ ಹೋರಾಟ ನಡೆಸಿದ್ದರು ಎಂದು ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಜಿಲ್ಲಾಧ್ಯಕ್ಷೆ ಆಶಾಲತಾ ಪುಟ್ಟೇಗೌಡ ಹೇಳಿದರು.ಪಟ್ಟಣದ ಉತ್ತರಾದಿ ಮಠ ಬೀದಿಯ ಸಂಸ್ಥೆ ಕಚೇರಿಯಲ್ಲಿ ಬಸವ ಜಯಂತಿ ಅಂಗವಾಗಿ ಶ್ರೀಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಬಸವಣ್ಣ ಅವರು ಸಮಾಜದಲ್ಲಿನ ಜಾತಿ ತಾರತಮ್ಮ ಹಾಗೂ ಅನಿಷ್ಟತೆಗಳ ವಿರುದ್ಧ ಹೋರಾಟ ನಡೆಸಿದ್ದರು. 12ನೇ ಶತಮಾದ ಬಸವಣ್ಣ ಅವರನ್ನು ಇಂದಿಗೂ ಶಾಲೆ, ಸಂಘ ಸಂಸ್ಥೆಗಳಲ್ಲಿ ಪೂಜಿಸುತ್ತಿದ್ದು, ಅವರ ಬರಹ ಮತ್ತು ಬದುಕು ನಮಗೆಲ್ಲಾ ಪ್ರೇರಣೆ ಎಂದರು.
ಸಂಸ್ಥೆ ತಾಲೂಕು ಘಟಕದ ಅಧ್ಯಕ್ಷ ಎಸ್.ಪ್ರಕಾಶ್ ಮಾತನಾಡಿ, ಅಕ್ಷಯ ತೃತಿಯ ಹಾಗೂ ಶ್ರೀಬಸವೇಶ್ವರರ ಜಯಂತಿ ಒಂದೇ ದಿನ ಆಚರಿಸುತ್ತಿರುವುದರಿಂದ ಎಲ್ಲರಿಗೂ ಶುಭವಾಗಲಿ ಎಂದರು. ನಂತರ ಸಂಸ್ಥೆ ಸದಸ್ಯರು ಮಜ್ಜಿಗೆ, ಪಾನಕ ತಯಾರಿಸಿ ಸಾರ್ವಜನಿಕರಿಗೆ ವಿತರಿಸಲಾಯಿತು.ಈ ವೇಳೆ ಭ್ರಷ್ಟಾಚಾರ ವಿರೋಧಿ ಸಂಸ್ಥೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ್‌ಕುಮಾರ್, ಮಹಿಳಾ ಕಾರ್ಯದರ್ಶಿ ಸರಸ್ವತಿ, ಗಾಯಿತ್ರಿ ದೇವಿ, ಸದಸ್ಯಾದ ಬಾಲು, ಎಲ್.ವಿ ನವೀನ್‌ಕುಮಾರ್, ಗಂಜಾಂ ಮಂಜು, ಶಿವು, ಮಂಜುನಾಥ್, ಡಾ. ನಾಗರಾಜು, ವಕೀಲರಾದ ಪರಮೇಶ್, ಲೋಕೇಶ್, ಕೂಡಲಕುಪ್ಪೆ ಗೋಪಾಲ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಭುತ್ವದ ಪಿತಾಮಹ ಬಸವಣ್ಣ: ಕೆ.ಟಿ.ಹನುಮಂತುಮಂಡ್ಯ:
12ನೇ ಶತಮಾನದಲ್ಲಿಯೇ ಸರ್ವ ಜನಾಂಗದ ಪ್ರಜಾಪ್ರಭುತ್ವದ ಪಿತಾಮಹ ವಿಶ್ವಗುರು ಬಸವಣ್ಣ ಆಗಿದ್ದರು ಎಂದು ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ. ಹನುಮಂತು ಅಭಿಪ್ರಾಯಪಟ್ಟರು.ನಗರದ ವೀರಶೈವ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಪ್ರತಿಭಾಂಜಲಿ ಸುಗಮಸಂಗೀತ ಅಕಾಡೆಮಿ ಆಯೋಜಿಸಿದ್ದ ವಿಶ್ವ ಗುರು ಬಸವ ಜಯಂತಿ ಅಂಗವಾಗಿ ಬಸವಶ್ರೀ ಹಾಗೂ ಕಾಯಕ ಪ್ರಶಸ್ತಿ ಪ್ರದಾನ - ವಚನ ಗಾಯನಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಕ್ಷಯ ತೃತಿಯ ದಿನ ಮಹಾಮಾನವತವಾದಿ ಬಸವಣ್ಣ ಅವರ ಜಯಂತಿ ಬರುತ್ತದೆ. ಈ ಪ್ರಪಂಚದ ಅನೇಕ ದೇಶಗಳಲ್ಲಿ ಬಸವಣ್ಣ ಅವರ ಅನುಯಾಯಿಗಳು ಇದ್ದಾರೆ. ಪ್ರತಿಮೆಗಳು ನಿರ್ಮಾಣವಾಗಿದೆ. ರಾಜ್ಯಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಗೌರವಿಸಿ ಘೋಷಿಸಿದೆ ಎಂದು ನುಡಿದರು.ಇದೇ ಸಂದರ್ಭದಲ್ಲಿ ಹಿರಿಯ ವಕೀಲ ಎಂ.ಬಿ.ರಾಜಶೇಖರ್ ಮತ್ತು ಲೇಖಕಿ ಭವಾನಿ ಲೋಕೇಶ್‌ಗೆ ಬಸವಶ್ರೀ ಹಾಗೂ ಕಾಯಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಗಾಯಕಿ ಡಾ.ವರ್ಷ ಹೂಗಾರ್ ಮತ್ತು ಡೇವಿಡ್ ಪ್ರತಿಭಾಂಜಲಿ ವಚನಗಾಯನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್, ಅಲಯನ್ಸ್ ಸಂಸ್ಥೆ 2ನೇ ಜಿಲ್ಲಾ ರಾಜ್ಯಪಾಲ ಕೆ.ಎಸ್.ಚಂದ್ರಶೇಖರ್, ಕೃಷಿಕ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ಮೋಹನ್‌ಕುಮಾರ್ ಇದ್ದರು.