ಧಾರ್ಮಿಕ ಭಾವನೆ ಬೆಳೆಸಿದ ಬಸವಣ್ಣ: ಸ್ವಾಮೀಜಿ

KannadaprabhaNewsNetwork | Published : Apr 8, 2025 12:36 AM

ಸಾರಾಂಶ

ಚಳ್ಳಕೆರೆ ತಾಲೂಕಿನ ಮೈಲನಹಳ್ಳಿ ಗ್ರಾಮದಲ್ಲಿ ಉಜ್ಜಯನಿ ಸದ್ದರ್ಮ ಸಿಂಹಾಸನಾಧೀಶ್ವರ ಸಿದ್ದಲಿಂಗರಾಜದೇಶೀ ಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವ.

ಮೈಲನಹಳ್ಳಿ ಈಶ್ವರ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಚಳ್ಳಕೆರೆ:

ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಬದುಕು ರೂಪಿಸಿಕೊಳ್ಳಲು ಪ್ರೇರಣೆ ನೀಡಿದವರು ಜಗಜ್ಯೋತಿ ಬಸವಣ್ಣನವರು. 12ನೇ ಶತಮಾನ ಧಾರ್ಮಿಕ ಬದಲಾವಣೆಯ ವರ್ಷವಾಗಿ ಪರಿವರ್ತನೆಯಾಯಿತು. ಸಮಾಜದಲ್ಲಿ ಒಳ್ಳೆಯ ವಿಚಾರಗಳನ್ನು ಕೇಳುವಂತಹ ಸ್ಥಿತಿ ನಿರ್ಮಾಣವಾಯಿತು. ಇಂದು ನಾವೆಲ್ಲರೂ ಧಾರ್ಮಿಕ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದೇವೆಂದರೆ ಅದಕ್ಕೆ ಜಗಜ್ಯೋತಿ ಬಸವಣ್ಣನವರೇ ಸ್ಪೂರ್ತಿ ಎಂದು ಉಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ ಸಿದ್ದಲಿಂಗ ರಾಜದೇಶೀ ಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾ ಸ್ವಾಮೀಜಿ ತಿಳಿಸಿದರು.

ಸೋಮವಾರ ತಳಕು ಹೋಬಳಿಯ ಮೈಲನಹಳ್ಳಿ ಗ್ರಾಮದಲ್ಲಿ ಭಕ್ತರು ಹಮ್ಮಿಕೊಂಡಿದ್ದ ಶ್ರೀ ಈಶ್ವರ ದೇವಸ್ಥಾನದ ಕಳಸಾರೋಹಣ, ನೂತನ ಕರಿಗಲ್ಲು ಸ್ಥಾಪನೆ ಹಾಗೂ ಸ್ವಾಮಿಯವರ ಜಗದ್ಗುರು ಅಡ್ಡಪಲ್ಲಕ್ಕಿ ಮತ್ತು ಜನ ಜಾಗೃತಿ ಧರ್ಮಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ರಾಮೀಣ ಭಾಗಗಳಲ್ಲಿ ಜನರು ಭಕ್ತಿ, ಶ್ರದ್ಧೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಇಂದು ಸಾವಿರಾರು ಭಕ್ತರು ವಿವಿಧ ಗ್ರಾಮಗಳಿಂದ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ನಮ್ಮೆಲ್ಲಾ ಧಾರ್ಮಿಕ ಜಾಗೃತಿ ಕಾರ್ಯಕ್ರಮಗಳಿಗೆ ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗಲಿವೆ ಎಂದು ಹೇಳಿದರು.ಮುಸ್ಟೂರಿನ ದಾಸೋಹ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧಾರ್ಮಿಕ ವಿಚಾರ ಧಾರೆಗಳಿಂದ ಮನುಷ್ಯನ ಪರಿವರ್ತನೆಯೊಂದಿಗೆ ಸಮಾಜದ ಪರಿವರ್ತನೆಯೂ ಸಹ ಸುಲಭವಾಗುತ್ತದೆ. ಸಾಮಾನ್ಯವಾಗಿ ಎಂತಹ ಸಂದರ್ಭದಲ್ಲೂ ಸಹ ವ್ಯಕ್ತಿ ಧರ್ಮವನ್ನು ಬಿಡಲು ಒಪ್ಪುವುದಿಲ್ಲ. ತನ್ನದೇಯಾದ ರೀತಿಯಲ್ಲಿ ಧಾರ್ಮಿಕ ವಿಚಾರಗಳನ್ನು ತಿಳಿದು ಅದರಂತೆ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾನೆ. ಇದೊಂದು ಸಮಧಾನಕರ ಬೆಳವಣಿಗೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಪಾಲಯ್ಯ, ಗ್ರಾಮದ ಮುಖಂಡರಾದ ಗೌಡ್ರ ಬಸವರಾಜಪ್ಪ, ನಾಗಣ್ಣ, ಚಂದ್ರಣ್ಣ, ಚನ್ನವೀರಪ್ಪ, ಮೈಲನಹಳ್ಳಿನಾಗರಾಜು, ದಿನೇಶ್, ಧನಂಜಯ, ಮಂಜಣ್ಣ, ಸದಸ್ಯರಾದ ಜಗನ್ನಾಥ, ಜಯಲಕ್ಷ್ಮಿ, ಶಾಂತಮ್ಮ, ವೆಂಕಟೇಶ್, ಪ್ರಹ್ಲಾದ್, ಮಂಜಣ್ಣ, ಗೋವಿಂದ, ಪಿಡಿಒ ನಾಗರಾಜು ಮುಂತಾದವರು ಉಪಸ್ಥಿತರಿದ್ದರು.

Share this article