ಬಸವಣ್ಣನವರು ಮಾನವ ಸಮಾಜಕ್ಕೆ ಮಾರ್ಗದರ್ಶಕರು: ತೋಂಟದ ಸಿದ್ದರಾಮ ಶ್ರೀ

KannadaprabhaNewsNetwork |  
Published : May 24, 2025, 12:01 AM IST
ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡನಹಳ್ಳಿ ತೋಂಟದಾರ್ಯ ಶಾಖಾಮಠದಲ್ಲಿ ಬಸವ ತತ್ವದಡಿ ಸಾಮೂಹಿಕ ವಿವಾಹಗಳು ನಡೆದವು. | Kannada Prabha

ಸಾರಾಂಶ

ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡನಹಳ್ಳಿ ಗ್ರಾಮದ ಶ್ರೀ ತೋಂಟದಾರ್ಯ ಶಾಖಾಮಠದಲ್ಲಿ ತೋಂಟದ ಕೌದಿ ಮಹಾಂತೇಶ್ವರ ಸ್ವಾಮಿಗಳ ಪರ್ವ ಕಾರ್ಯಕ್ರಮದ ನಿಮಿತ್ತ, ಶಿವಮಹಾಂತ ಸ್ವಾಮೀಜಿಗಳ ನೇತೃತ್ವದಲ್ಲಿ ಬಸವತತ್ವ ಅನುಸಾರ ಉಚಿತ ಸಾಮೂಹಿಕ ವಿವಾಹ ನಡೆಯಿತು.

ಹಗರಿಬೊಮ್ಮನಹಳ್ಳಿ: ಬಸವಣ್ಣನವರು ಪ್ರತಿಪಾದಿಸಿದ ತತ್ವ, ಸಿದ್ಧಾಂತಗಳು ಮಾನವ ಸಮಾಜಕ್ಕೆ ಮಾರ್ಗದರ್ಶಕವಾಗಿ ಬೆಳಕನ್ನು ಬೀರುವಂತಿವೆ ಎಂದು ಗದುಗಿನ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಬಾಚಿಗೊಂಡನಹಳ್ಳಿ ಗ್ರಾಮದ ಶ್ರೀ ತೋಂಟದಾರ್ಯ ಶಾಖಾಮಠದಲ್ಲಿ ತೋಂಟದ ಕೌದಿ ಮಹಾಂತೇಶ್ವರ ಸ್ವಾಮಿಗಳ ಪರ್ವ ಕಾರ್ಯಕ್ರಮದ ನಿಮಿತ್ತ, ಶಿವಮಹಾಂತ ಸ್ವಾಮೀಜಿಗಳ ನೇತೃತ್ವದಲ್ಲಿ ಬಸವತತ್ವ ಅನುಸಾರ ನಡೆದ ಉಚಿತ ಸಾಮೂಹಿಕ ವಿವಾಹದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬಸವಣ್ಣನವರು ಸಮಾಜದಲ್ಲಿ ಜಾತಿಪದ್ಧತಿ ನಿರ್ಮೂಲನೆ ಮಾಡಿ, ಸಾಮಾಜಿಕ ನ್ಯಾಯಕ್ಕೆ ಹೋರಾಡಿ ಇಡೀ ಮನುಕುಲಕ್ಕೆ ದಾರಿದೀಪವಾಗಿದ್ದಾರೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠೆಗೆ ಸಿಕ್ಕಾಪಟ್ಟೆ ಹಣ ಖರ್ಚು ಮಾಡಿ ಅದ್ಧೂರಿ ಮದುವೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ದೇಶದ ಯುವಶಕ್ತಿ ಗಟ್ಟಿಗೊಳ್ಳುವ ಅಗತ್ಯವಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಬಡಜನತೆಗೆ ನೆರವಾಗಬೇಕಿದೆ. ಬಾಚಿಗೊಂಡನಹಳ್ಳಿ ಗ್ರಾಮದ ಗಾಂಧಿವಾದಿ, ಮಾಜಿ ಶಾಸಕ ಚನ್ನಬಸವನಗೌಡ್ರು, ಎಂ.ಪಿ. ಪ್ರಕಾಶ್, ಅಕ್ಕಿ ಕೊಟ್ರಪ್ಪನವರ ಸಾಮಾಜಿಕ, ಧಾರ್ಮಿಕ ಸೇವೆ ಅಪಾರವಾಗಿದೆ ಎಂದರು.

ಶಾಸಕ ಕೆ. ನೇಮರಾಜ ನಾಯ್ಕ ಉದ್ಘಾಟಿಸಿ ಮಾತನಾಡಿ, ಮಠಾಧೀಶರ ನೇತೃತ್ವದಲ್ಲಿ ನಡೆಯುವ ಸಾಮೂಹಿಕ ವಿವಾಹಗಳು ಸತಿ-ಪತಿಯರಿಗೆ ಉತ್ತಮ ಸಂದೇಶ ನೀಡುತ್ತವೆ. ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರವಾಗಿ ಅರ್ಥಪೂರ್ಣ ಬದುಕು ರೂಪಿಸಿಕೊಳ್ಳಬೇಕು ಎಂದರು.

ಪುರಸಭೆ ಅಧ್ಯಕ್ಷ ಎಂ. ಮರಿರಾಮಣ್ಣ ಮಾತನಾಡಿ, ಸರಳ ಬಸವತತ್ವಧಾರಿತ ಮದುವೆಗಳು ಹೆಚ್ಚು ನಡೆಯಲಿ ಎಂದು ಹಾರೈಸಿದರು.

ಗ್ರಾಮದ ಮುಖಂಡ ಕೆ. ರೋಹಿತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಡೂರಿನ ವಿರಕ್ತಮಠದ ಪ್ರಭು ಸ್ವಾಮೀಜಿ ಮಾತನಾಡಿದರು. ಅರಸಿಕೇರಿ ಶಾಂತಲಿಂಗ ಸ್ವಾಮೀಜಿ, ನಂದಿಪುರ ಮಹೇಶ್ವರ ಸ್ವಾಮೀಜಿ, ಗದ್ದಿಕೇರಿ ವಿರಕ್ತಮಠದ ಇಮ್ಮಡಿ ಮಹಾಂತ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ, ಗಾಯತ್ರಿದೇವಿ ಮಠದ ಉಪಾಸಕ ವಿ. ವೆಂಕಟರಾಮರಾಜು ಸಾನ್ನಿಧ್ಯ ವಹಿಸಿದ್ದರು.

ಬಸವಣ್ಣನವರ ವಚನಗಳ ಮೂಲಕ ನಡೆದ ವಿವಾಹದಲ್ಲಿ ನಾಲ್ಕು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಕೆಎಂಎಫ್ ಅಧ್ಯಕ್ಷ ಎಸ್. ಭೀಮನಾಯ್ಕ ಸಾಮೂಹಿಕ ವಿವಾಹಕ್ಕೆ ಆಗಮಿಸಿದ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಕಲ್ಪಿಸಿದರು. ಚಿತ್ರದುರ್ಗದ ಉಮೇಶ್ ಪತ್ತಾರ ಸಂಗಡಿಗರ ವಚನಗಾಯನಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಿತಿಯ ಜ್ಞಾನಮೂರ್ತಿ, ಶಿವಕುಮಾರ, ಶೈಲಾ ಅಡೂರ್ ಶೆಟ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಬಾಚಿಗೊಂಡನಹಳ್ಳಿ, ತಂಬ್ರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನೇತೃತ್ವವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ