ಮುಂಡಗೋಡ: ೩೩ ವರ್ಷಗಳಿಂದ ಸ್ಥಗಿತಗೊಂಡಿದ್ದ ಪಟ್ಟಣದ ಬಸವಣ್ಣ, ವೀರಭದ್ರೇಶ್ವರ ದೇವಸ್ಥಾನದ ನೂತನ ರಥದ ಲೋಕಾರ್ಪಣೆ ಹಾಗೂ ರಥೋತ್ಸವಕ್ಕೆ ಭಾನುವಾರ ಸಂಜೆ ಶಾಸ್ತ್ರೋತ್ತರವಾಗಿ ಚಾಲನೆ ದೊರೆತಿದೆ. ಭಾರೀ ಜನಸ್ತೋಮದೊಂದಿಗೆ ರಥೋತ್ಸವ ಅದ್ಧೂರಿಯಾಗಿ ಜರುಗಿತು.
ರಥ ಬೀದಿಯುದ್ದಕ್ಕೂ ಸಾಮಾಜಿಕ ಕಾರ್ಯಕರ್ತರಿಂದ ಶರಬತ್, ಮಜ್ಜಿಗೆ, ಕುಡಿಯುವ ನೀರು ಸೇರಿದಂತೆ ವಿವಿಧ ಪಾನೀಯಗಳನ್ನು ಭಕ್ತರಿಗೆ ಪೂರೈಕೆ ಮಾಡಲಾಯಿತು. ಪುರುಷರು ಮಹಿಳೆಯರು ವೃದ್ಧರು, ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥ ಬೀದಿ ಜನಜಂಗುಳಿಯಿಂದ ಕೂಡಿತ್ತು.
ಬಾಗಲಕೋಟೆ ಕಲಾದಗಿ ಪಂಚಗೃಹ ಸಂಸ್ಥಾನ ಮಠದ ಗಂಗಾಧರ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ನವಲಗುಂದ ಗವಿಮಠದ ಬಸವಲಿಂಗ ಶ್ರೀ, ವೇದಮೂರ್ತಿ ರುದ್ರಮುನಿ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಶಾಸಕ ಶಿವರಾಮ ಹೆಬ್ಬಾರ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ಮಳೆಯಲ್ಲಿಯೇ ಭಕ್ತಿಯ ಪರಾಕಾಷ್ಠೆ:
ರಥೋತ್ಸವ ನಡೆಯುವ ಸಂದರ್ಭದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುತ್ತಿದ್ದರೂ ಅಂಜದ ಭಕ್ತರು ಮಳೆಯಲ್ಲಿಯೇ ರಥೋತ್ಸವದಲ್ಲಿ ಪಾಲ್ಗೊಂಡ ತಮ್ಮ ಪ್ರಾಮಾಣಿಕ ಭಕ್ತಿಯನ್ನು ದೇವರಿಗೆ ಸಮರ್ಪಿಸಿದರು.