ಬಸವಣ್ಣನವರ ತತ್ವ ಇಂದಿನ ಯುಗದಲ್ಲೂ ಪ್ರಸ್ತುತ: ತಹಸೀಲ್ದಾರ್ ವಾಣಿ

KannadaprabhaNewsNetwork |  
Published : Apr 21, 2026, 03:30 AM IST
ಬಸವ ಜಯಂತಿಯ ಅಂಗವಾಗಿ ಬಸವಣ್ಣನ ಪುತ್ಥಳಿಗೆ  ತಹಸಿಲ್ದಾರ್ ವಾಣಿ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿದರು | Kannada Prabha

ಸಾರಾಂಶ

ಜಾತಿ, ಮತಗಳ ಬೇಧವಿಲ್ಲದೆ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಜಗಜ್ಯೋತಿ ಬಸವಣ್ಣನವರ ತತ್ವಗಳು ಇಂದಿನ ಆಧುನಿಕ ಯುಗದಲ್ಲಿ ಅತ್ಯಂತ ಪ್ರಸ್ತುತವಾಗಿವೆ ಎಂದು ತಹಸೀಲ್ದಾರ್ ವಾಣಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಜಾತಿ, ಮತಗಳ ಬೇಧವಿಲ್ಲದೆ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಜಗಜ್ಯೋತಿ ಬಸವಣ್ಣನವರ ತತ್ವಗಳು ಇಂದಿನ ಆಧುನಿಕ ಯುಗದಲ್ಲಿ ಅತ್ಯಂತ ಪ್ರಸ್ತುತವಾಗಿವೆ ಎಂದು ತಹಸೀಲ್ದಾರ್ ವಾಣಿ ತಿಳಿಸಿದರು.

ಸೋಮವಾರ ಬಸವ ಜಯಂತಿಯ ಅಂಗವಾಗಿ ತಾಲೂಕು ವೀರಶೈವ ಸಮಾಜ, ತಾಲೂಕು ಆಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸ ಸಂತೆ ಮೈದಾನದ ಬಳಿಯ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಬಸವಣ್ಣನವರು ಪ್ರಜಾಪ್ರಭುತ್ವದ ಆಶಯಗಳನ್ನು 12ನೇ ಶತಮಾನದಲ್ಲಿ ಬಿತ್ತಿದ್ದರು. ಸ್ತ್ರೀ, ಪುರುಷ ಸಮಾನತೆ, ಅಸ್ಪೃಶ್ಯತೆ ನಿವಾರಣೆ ಮತ್ತು ಅಧ್ಯಾತ್ಮದ ಸರಳೀಕರಣಕ್ಕಾಗಿ ಅವರು ನೀಡಿದ ವಚನಗಳು ಸಮಾಜದಲ್ಲಿ ಸೌಹಾರ್ದತೆಯ ಸಂದೇಶವನ್ನು ಪಸರಿಸುತ್ತಿವೆ ಎಂದರು.

ಬಸವಣ್ಣನವರು ಕೇವಲ ಉಪದೇಶ ನೀಡದೆ, ಶ್ರಮ ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಿದ್ದರು. ಬಡವ, ಬಲ್ಲಿದ ಸಮಾಜಕ್ಕೆ ಕೈಲಾದ ಸಹಾಯ ಮಾಡಬೇಕು ಎಂಬುದು ಅವರ ಆಶಯವಾಗಿತ್ತು. ಈ ದಿನ ರಾಜ್ಯಾದ್ಯಂತ ಅನೇಕ ಸಂಘ, ಸಂಸ್ಥೆಗಳು ಅನ್ನದಾನ ಮತ್ತು ರಕ್ತದಾನದಂತಹ ಶಿಬಿರಗಳನ್ನು ನಡೆಸಿ ಜನಸೇವೆಯ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಬಸವಣ್ಣನವರನ್ನು ಚಿರಸ್ಥಾಯಿಯಾಗಿಸಿದ್ದಾರೆ ಎಂದರು.

ಹನ್ನೆರಡನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಕಾಯಕವೇ ಕೈಲಾಸ ಎಂದು ಸಾರಿದ ಜಗಜ್ಯೋತಿ ಬಸವಣ್ಣನವರ ಜಯಂತಿ ನಾಡಿನೆಲ್ಲೆಡೆ ಅತ್ಯಂತ ಸಡಗರ ಮತ್ತು ಭಕ್ತಿಯಿಂದ ಆಚರಿಸುತ್ತಿದ್ದು, ಇದರೊಂದಿಗೆ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ರಾಕೇಶ್ ಮಾತನಾಡಿ, ಬಸವಣ್ಣನವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಅವರು ವಿಶ್ವಮಾನವರು. ಅವರ ಆಚಾರ, ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.

ಪುರಸಭೆ ಮುಖ್ಯಾಧಿಕಾರಿ ಭರತ್, ಉಪ ತಹಸೀಲ್ದಾರ್ ವಿನಯ್ ಆರಾಧ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎಸ್ ರವೀಂದ್ರ, ವಿರಕ್ತ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಮುಖಂಡರಾದ ಚನ್ನವೀರಪ್ಪ, ಗೋಣಿ ಮಾಲತೇಶ್, ಈರೇಶ್, ಬೆಂಕಿ ಯೋಗೇಶ್, ಜು.ಪುನೀತ್ ರಾಜಕುಮಾರ್, ಪ್ರಶಾಂತ್ ಪ್ರತಿಬಿಂಬ, ಪಾಪಯ್ಯ, ಭಂಡಾರಿ ಮಾಲತೇಶ್, ಡಾ. ಮಾಲತೇಶ್, ಗುರುರಾಜ ಜಕ್ಕಿನಕೊಪ್ಪ, ಪ್ರಶಾಂತ್‌ ಪ್ರತಿಬಿಂಬ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೀಘ್ರದಲ್ಲಿ ಬೃಹತ್‌ ಬಸವ ಭವನ ನಿರ್ಮಾಣ: ಶಾಸಕ ದೇವೇಂದ್ರಪ್ಪ
ಜಿಲ್ಲಾದ್ಯಂತ ಸಡಗರ ಸಂಭ್ರಮದ ಬಸವ ಜಯಂತಿ