ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಗಾಯಿತ್ರಿ ಮಂದಿರದಲ್ಲಿ ಶ್ರೀ ವಿಶ್ವಗುರು ಕೋ ಆಪರೇಟಿವ್ ಸೊಸೈಟಿ ವತಿಯಿಂದ ನಡೆದ ಬಸವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ, ಬಸವಣ್ಣನವರು ಹಾಕಿಕೊಟ್ಟ ಅಡಿಪಾಯದಿಂದಲೇ ವಿಶ್ವದಲ್ಲಿ ಹಲವು ಕ್ರಾಂತಿಗಳು ಸೃಷ್ಟಿಯಾಗಿವೆ ಎಂದರು.
12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಎಲ್ಲಾ ಸಮುದಾಯಗಳಿಗೆ ಸಮಾನತೆ ಕಲ್ಪಿಸಿ, ವಚನಗಳ ಮೂಲಕ ಸಮಾಜದಲ್ಲಿದ್ದ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶ್ರಮಿಸಿದ ಬಸವಣ್ಣನವರನ್ನು ಜಗದ ಜ್ಯೋತಿ ಎಂದು ಕರೆಯಲಾಗಿದೆ. ಅವರು ನಮ್ಮ ದೇಶಕ್ಕೆ ಅಲ್ಲದೇ ವಿಶ್ವದಲ್ಲಿಯೇ ಪೂಜ್ಯರಾಗಿದ್ದಾರೆಂದು ಹೇಳಿದರು.ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರು ಎಲ್ಲ ಕಾಲಕ್ಕೂ ನಮ್ಮ ಜೊತೆಯಲ್ಲಿ ಜೀವಂತವಾಗಿರುತ್ತಾರೆ. ಅವರ ಸಂದೇಶಗಳನ್ನು ಓದಿಕೊಂದು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.
ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ನಿಶ್ಚಲಾನಂದ ಸ್ವಾಮೀಜಿ ಮಾತನಾಡಿ, ಬಸವ ಜಯಂತಿ ಕೇವಲ ಆಚರಣೆಗೆ ಮಾತ್ರ ಸೀಮಿತಗೊಳ್ಳದೇ ಬಸವಣ್ಣನವರ ಚಿಂತನೆಗಳನ್ನು ಅನುಸರಿಬೇಕು. ವಿಶ್ವಕ್ಕೆ ಗುರುವಾಗಿ ಬಸವಣ್ಣ ಸಮಾಜದ ಅಂಕು, ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆಂದು ಹೇಳಿದರು.
ಸಂತರ ಚಿಂತನೆಗಳು ಮನುಷ್ಯರ ಮನಸ್ಸಿನಲ್ಲಿರುವ ದುಷ್ಟ ಬುದ್ದಿ ಹೋಗಲಾಡಿಲು ಹಾಗೂ ಸಾಧನೆಗೆ ಸ್ಫೂರ್ತಿ ತುಂಬಲು ಜಯಂತಿಗಳ ಆಚರಣೆಗೆ ಸರ್ಕಾರದಿಂದ ಅವಕಾಶ ಕಲ್ಪಿಸಲಾಗುತ್ತಿದೆ. ಮಹನೀಯರ ಜಯಂತಿಗಳನ್ನು ಒಂದೊಂದು ಸಮುದಾಯಕ್ಕೆ ಸೀಮಿತಗೊಳಿಸಿ ಆಚರಿಸುತ್ತಿರುವುದರಿಂದ ಇಂದು ದೇಶ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಸೊಸೈಟಿ ಅಧ್ಯಕ್ಷ ಎಂ.ಜಿ.ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೃಷಿಕ ಸಮಾಜ ಅಧ್ಯಕ್ಷ ಕೆ.ಎಸ್. ಪ್ರಕಾಶ್, ಮನ್ಮುಲ್ ನಿರ್ದೇಶಕ ಕೃಷ್ಣೇಗೌಡ, ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ಡಾ.ಬಿ.ಎಂ. ಮಾಲಾ ಸೇರಿದಂತೆ ಇತರೆ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವಚನ ಕುಮಾರಸ್ವಾಮಿ, ರೂಪ ಬಸವಣ್ಣನವರ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸಿದ್ದಲಿಂಗಸ್ವಾಮಿ, ಜಾನಪದ ಕಲಾವಿದ ಮಹದೇವಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ, ಮನ್ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಮಾಜಿ ಅಧ್ಯಕ್ಷ ಎಂ.ವಿ.ಕೃಷ್ಣಶೆಟ್ಟಿ, ನಿರ್ದೇಶಕರಾದ ಗುರುಪ್ರಸಾದ್, ಎಂ.ಎಸ್.ದಯಾ ಶಂಕರ್, ಬಿ.ಮಹದೇವು, ಎಂ.ಎನ್.ಮಹೇಶ್‌ಕುಮಾರ್, ಕೆವಿಟಿ ಕುಮಾರ್, ಚಂದ್ರಮ್ಮ, ರೂಪ ಮಹೇಶ್ ಸೇರಿದಂತೆ ಇತರರು ಇದ್ದರು.