ಅಳಗವಾಡಿ ಕೆರೆ ವೀಕ್ಷಣೆ ನಂತರ ಸಭೆಯಲ್ಲಿ ಆಶೀರ್ವಚನ । ಪ್ರತಿನಿಧಿಗಳು ಜನರ ಪ್ರಾಥಮಿಕ ಅವಶ್ಯಕತೆ ಪೂರೈಸಿಕನ್ನಡಪ್ರಭ ವಾರ್ತೆ ಸಿರಿಗೆರೆ
೧೨ನೆಯ ಶತಮಾನದ ಬಸವಾದಿ ಶಿವಶರಣರ ವಚನಗಳು ಈಗೀಗ ಭಾಷಣದ ಸರಕಾಗಿವೆ. ಜೀವನದಲ್ಲಿ ಅವುಗಳ ಆಶಯದ ಅಳವಡಿಕೆ ಆಗುತ್ತಿಲ್ಲ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.ಭರಮಸಾಗರ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳನ್ನು ವೀಕ್ಷಣೆ ಮಾಡಿ ಅಳಗವಾಡಿ ದೇವಾಲಯದ ಮುಂಭಾಗದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಶ್ರೀಗಳು, ವಚನಗಳ ಸಾರವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ವಚನಗಳ ಆಶಯದಿಂದ ಬದುಕು ಸುಂದರವಾಗಬೇಕು ಎಂದರು.
ನಮ್ಮಲ್ಲಿ ಬಹು ಸಂಸ್ಕೃತಿ ಇದೆ. ಬಹುದೇವತಾರಾಧನೆ ಎಲ್ಲಡೆಯಲ್ಲಿಯೂ ನಡೆಯುತ್ತಿದೆ. ಹಲವು ಸಂಪ್ರದಾಯಸ್ಥರು ಅವರವರ ಆಚಾರಗಳಿಗೆ ತಕ್ಕಂತೆ ದೇವತಾರಾಧನೆ ಮಾಡುತ್ತಾರೆ, ಅದನ್ನು ತಿರಸ್ಕರಿಸಲಾಗದು. ಕೆಲವರು ಮಾರಮ್ಮನನ್ನು ಪೂಜಿಸಿದರೆ, ಮತ್ತೆ ಕೆಲವರು ಕರಿಯಮ್ಮನನ್ನು, ಇನ್ನು ಕೆಲವರು ಬಸವಣ್ಣನನ್ನು ಪೂಜಿಸುತ್ತಾರೆ. ಅದು ಅವರ ವೈಯುಕ್ತಿಕ ನಂಬಿಕೆ. ದೇವರು ಯಾರೇ ಇರಲಿ ಹೃದಯದಲ್ಲಿ ಸ್ಪುರಿಸುವ ಭಕ್ತಿ ಒಂದೇ. ದೇವನೊಬ್ಬ ನಾಮ ಹಲವು ಎಂದು ಬಸವಣ್ಣನವರೇ ಹೇಳಿದ್ದಾರೆ ಎಂದು ಶ್ರೀಗಳು ಪ್ರತಿಪಾದಿಸಿದರು.ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರು ಇನ್ನೂ ಕೆಲವು ಕಡೆ ಕುಡಿಯುವ ನೀರಿಗೂ ತೊಂದರೆ ಇದೆ. ಜನ ಪ್ರತಿನಿಧಿಗಳು ಜನರ ಪ್ರಾಥಮಿಕ ಅವಶ್ಯಕತೆಯಾದ ನೀರನ್ನು ಒದಗಿಸುವ ಕಡೆಗೆ ಗಮನ ನೀಡಬೇಕು ಎಂದರಲ್ಲದೆ, ಜನರೂ ಸಹ ತಮ್ಮ ಕಷ್ಟಕ್ಕೆ ಸ್ಪಂದಿಸುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಪರಿಶುದ್ಧ ನಡೆಯ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಬದುಕೂ ಸಹ ಚೆನ್ನಾಗಿರುತ್ತದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ನೀಡುವ ಆಮಿಷಗಳಿಗೆ ಬಲಿಯಾಗದೇ ಸ್ವಂತ ವಿವೇಚನೆಯಿಂದ ನಾಯಕನನ್ನು ಆರಿಸಬೇಕು ಎಂದರು.
ನಾವು ತುಂಗಾ ಮತ್ತು ಭದ್ರೆ ನದಿಗಳು ಸೇರುವ ಆವಾಸಸ್ಥಾನದಲ್ಲಿ ಜನಿಸಿದವರು. ಅಲ್ಲಿಂದ ಸಿರಿಗೆರೆಯ ಪೀಠಕ್ಕೆ ಬಂದವರು. ತುಂಗಭದ್ರೆಯ ನೀರು ನಮ್ಮನ್ನು ಅನುಸರಿಸಿಕೊಂಡು ಇಷ್ಟು ದೂರ ಬಂದಿರುವುದನ್ನು ಕಂಡು ಸಂತೋಷವಾಗಿದೆ. ತುಂಗೆಯ ನೀರು ಸಿಹಿ. ಹೆಣ್ಣುಮಕ್ಕಳು ಈ ನೀರಿನಲ್ಲಿ ಅಡಿಗೆ ಮಾಡಿದರೆ ರುಚಿಯೂ ಹೆಚ್ಚು. ನೀರು ಅಮೂಲ್ಯವಾದುದು, ಹೊಣೆಗಾರಿಕೆ ಅರಿತು ನೀರನ್ನು ಮಿತವಾಗಿ ಬಳಸಿ ಎಂದು ಶ್ರೀಗಳು ತಿಳಿಸಿದರು.ಊರಿನ ಕೆರೆ ಒತ್ತುವರಿ ಆಗಿದೆ. ಅದರ ಅಚ್ಚುಕಟ್ಟು ವ್ಯಾಪ್ತಿಯ ಮಾಹಿತಿ ಇಲ್ಲ. ನಮ್ಮ ಊರಿನ ಕೆರೆಯನ್ನು ರಕ್ಷಿಸಿ ಕೊಡಿ, ಒತ್ತುವರಿಯನ್ನು ತೆರವುಗೊಳಿಸಿ ಎಂದು ಪಳಿಕೇಹಳ್ಳಿ ಗ್ರಾಮಸ್ಥರು ಶ್ರೀಗಳಲ್ಲಿ ಮನವಿ ಸಲ್ಲಿಸಿದರು. ಓಬಳಾಪುರ ಗ್ರಾಮದ ಕೆರೆ ೨೧೫ ಎಕರೆಯಷ್ಟಿದೆ. ಹಲವು ಬಾರಿ ಮನವಿ ಸಲ್ಲಿಸಿದ್ದರೂ ಏತ ನೀರಾವರಿ ವ್ಯಾಪ್ತಿಗೆ ಕೆರೆಯನ್ನು ಸೇರಿಸಿಲ್ಲ. ನಮ್ಮೂರಿನ ಕೆರೆಯನ್ನು ಯೋಜನೆ ವ್ಯಾಪ್ತಿಗೆ ಸೇರಿಸಬೇಕು ಎಂದು ಓಬಳಾಪುರ ಗ್ರಾಮಸ್ಥರು ಶ್ರೀಗಳಲ್ಲಿ ಪ್ರಾರ್ಥಿಸಿದರು.
ಭರಮಸಾಗರ ಏತ ನೀರಾವರಿ ಸಮಿತಿ ಅಧ್ಯಕ್ಷ ಚೌಲಿಹಳ್ಳಿ ಶಶಿಪಾಟೀಲ್, ಸಿ.ಆರ್. ನಾಗರಾಜ್, ಕೆರೆ ವೀಕ್ಷಣೆ ಸಮಿತಿ ಸಂಚಾಲಕ ಗೌಡ್ರ ಜಿ.ಬಿ. ತೀರ್ಥಪ್ಪ, ಕರ್ನಾಟಕ ನೀರಾವರಿ ನಿಗಮದ ಇಂಜಿನಿಯರ್ ಮನೋಜ್ ಕುಮಾರ್, ಅಳಗವಾಡಿ ಗ್ರಾಪಂ ಅಧ್ಯಕ್ಷೆ ಸೋನುಬಾಯಿ ಮುಂತಾದವರು ಭಾಗವಹಿಸಿದ್ದರು.- - -
ಪಳಿಕೆಹಳ್ಳಿ ಕೆರೆ ವೀಕ್ಷಣೆ ನಂತರ ಶ್ರೀಗಳು ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.- - -
(ಏತ ನೀರಾವರಿ ಯೋಜನೆಗೆ ರೈತರ ಪ್ರತಿಕ್ರಿಯೆ)ಗುರುಗಳ ಸಾರ್ಥಕ ಕೆಲಸದ ಅರಿವು
ಕಳೆದ ನಾಲ್ಕಾರು ವರ್ಷಗಳ ಕಾಲ ಸರಿಯಾಗಿ ಮಳೆಯಾಗದೆ ತತ್ತರಿಸಿ ಹೋಗಿದ್ದ ರೈತರಿಗೆ ತರಳಬಾಳು ಶ್ರೀಗಳು ವರ ನೀಡಿದ್ದಾರೆ. ನಮ್ಮ ಭಾಗದಲ್ಲಿ ಅಡಿಕೆ ಮತ್ತು ತರಕಾರಿ ಪ್ರಮುಖ ಬೆಳೆಗಳು. ನಾಲ್ಕಾರು ವರ್ಷಗಳ ಹಿಂದೆ ತೋಟ ಉಳಿಸಿಕೊಳ್ಳಲು ರೈತರು ಲಕ್ಷಾಂತರ ರುಪಾಯಿಗಳನ್ನು ಖರ್ಚು ಮಾಡಿದ್ದಾರೆ. ನೀರು ಎಲ್ಲಿ ಸಿಗುವುದೋ ಅಲ್ಲಿಂದ ಟ್ರ್ಯಾಕ್ಟ್ ಮೂಲಕ ಟ್ಯಾಂಕರ್‌ನಲ್ಲಿ ನೀರು ತಂದು ತೋಟ ಉಳಿಸಿಕೊಂಡಿದ್ದಾರೆ. ಆ ದಿನಗಳನ್ನು ನೆನಪು ಮಾಡಿಕೊಂಡರೆ ಗುರುಗಳು ಮಾಡಿರುವ ಸಾರ್ಥಕ ಕೆಲಸದ ಅರಿವು ಸಹಜವಾಗಿ ಆಗುತ್ತದೆ. ಅವರು ರೈತರ ಪಾಲಿನ ದೈವವಾಗಿದ್ದಾರೆ. ರೈತರ ಹಿತಚಿಂತನೆಯೇ ಅವರಿಗೆ ಮುಖ್ಯ. ಅವರಿಂದ ನಮ್ಮ ಭಾಗದ ಕೃಷಿಕರು ಪಾವನ ಆಗಿದ್ದಾರೆತಿಪ್ಪೇಸ್ವಾಮಿ ಅಡಿಕೆ ಬೆಳೆಗಾರರು, ಹಳವುದರ
- - -ದೂರದೃಷ್ಟಿಯ ಭಗೀರಥ
ರೈತರ ಬವಣೆಯನ್ನು ಹತ್ತಿರದಿಂದ ಬಲ್ಲ ಗುರುಗಳು ಹರಿಹರ ಸಮೀಪದ ನದಿಯಿಂದ ನೀರು ತಂದು ನಮ್ಮ ಕೆರೆಗಳನ್ನು ತುಂಬಿಸಿದ್ದಾರೆ. ಇದನ್ನು ರೈತರು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಎಲ್ಲಾ ಕೆರೆಗಳಿಗೂ ನೀರು ಸಮವಾಗಿ ಬರಬೇಕು. ನಮಗೆ ಎರಡು ತಿಂಗಳ ಕಾಲ ನೀರು ಬಂದಿರಲಿಲ್ಲ. ಹಿಂದಿನ ಕೆರೆಯವರು ವಾಲ್‌ಗಳನ್ನು ತಾವೇ ನಿರ್ವಹಿಸುತ್ತಿರುವುದರಿಂದ ಮುಂದಿನ ಕೆರೆಗಳಿಗೆ ಸರಿಯಾಗಿ ನೀರು ಬರುತ್ತಿಲ್ಲ. ಅದನ್ನು ಎಲ್ಲರೂ ಅರಿತು, ನೀರನ್ನು ಸಮರ್ಪಕವಾಗಿ ಎಲ್ಲಾ ಕೆರೆಗಳಿಗೂ ತಲುಪುವಂತೆ ನೋಡಿಕೊಳ್ಳಬೇಕು. ಇದರಿಂದ ನಮ್ಮ ಗುರುಗಳಿಗೆ ಸಂತೋಷವಾಗುತ್ತದೆ.ನಾರಣ್ಣ, ಕೃಷಿಕರು, ಅಳಗವಾಡಿ
- - -ನೀರಿನ ಬಗ್ಗೆ ಜವಾಬ್ದಾರಿ ಇರಲಿ
ಯೋಜನೆ ವ್ಯಾಪ್ತಿಯ ಕೃಷಿಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಅವರು ಪ್ರಜ್ಞಾವಂತರಾದರೆ ಈ ಯೋಜನೆ ಹೆಚ್ಚು ಸಫಲವಾಗುತ್ತದೆ. ಕೆಲವು ಕಡೆ ಕೆರೆಗಳಲ್ಲಿಯೇ ಮೋಟಾರುಗಳನ್ನು ಇಟ್ಟು ತೋಟಗಳಿಗೆ ನೀರು ಪಂಪ್ ಮಾಡುತ್ತಿದ್ದಾರೆ. ಕೆಲವು ಕೆರೆಯಲ್ಲಿ ನೀರು ಬರಲು ಅಳವಡಿಸಿರುವ ಪೈಪುಗಳಿಂದ ನೇರ ಸಂಪರ್ಕ ಪಡೆದು ತಮ್ಮ ತೋಟಗಳಿಗೆ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಇಂತಹ ಕೃತ್ಯಗಳನ್ನು ಜನರು ಕೈಬಿಡಬೇಕು. ಹೀಗೆ ಮಾಡಿದರೆ ಯೋಜನೆ ಸಫಲವಾಗುವುದಿಲ್ಲ.ಮನೋಜ್‌ಕುಮಾರ್, ಇಂಜಿನಿಯರ್, ಕರ್ನಾಟಕ ನೀರಾವರಿ ನಿಗಮ