ಸಂಡೂರು: ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಅವರು ಸರ್ವಕಾಲಿಕ ಗೌರವಕ್ಕೆ ಪಾತ್ರರಾದವರು ಎಂದು ಶಾಸಕಿ ಈ. ಅನ್ನಪೂರ್ಣ ತುಕಾರಾಂ ಅಭಿಪ್ರಾಯಪಟ್ಟರು.
ಇಂದಿನ ಸಮಾಜದಲ್ಲಿ ಮಹಿಳೆಯರು ಸಮಾನ ಅವಕಾಶ, ಉನ್ನತ ಸ್ಥಾನಮಾನ ಪಡೆದುಕೊಳ್ಳುತ್ತಿರುವುದಕ್ಕೆ ಅಡಿಪಾಯ ಹಾಕಿದವರು ಬಸವಣ್ಣನವರು. ಅವರು ಆರ್ಥಿಕ ತಜ್ಞರಾಗಿದ್ದರು. ಬಸವಣ್ಣನವರ ಜಯಂತಿ ಒಂದು ದಿನದ ಕಾರ್ಯಕ್ರಮವಾಗದೆ ಪ್ರತಿ ದಿನದ ಕಾರ್ಯಕ್ರಮವಾಗಬೇಕಿದೆ ಎಂದರು.
ವಚನಕಾರರ ತತ್ವ ಪಾಲಿಸಿದರೆ, ಜೀವನ ಸಾರ್ಥಕವಾಗಲಿದೆ. ಶಾಲಾ ಕಾಲೇಜುಗಳಲ್ಲಿಯೂ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಯುವ ಜನತೆಗೂ ಬಸವಾದಿ ಶರಣರ ವಚನಗಳ ಸಾರ ತಿಳಿಸಬೇಕಿದೆ. ಯುವ ಜನತೆ ದೇಶದ ಆಸ್ತಿ. ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ ಬದ್ಧರಾಗಿ ಶ್ರಮಿಸೋಣ ಎಂದರು.ಸಾಹಿತಿ ಡಾ.ನಂದೀಶ್ವರ ದಂಡೆಯವರು ವಚನ ಸಾಹಿತ್ಯದ ತಾತ್ವಿಕತೆ ವಿಷಯ ಕುರಿತು ಮಾತನಾಡಿ, ಇತ್ತೀಚೆಗಿನ ದಿನಗಳಲ್ಲಿ ಬಸವ ತತ್ವದ ಮೇಲೆ ದಾಳಿ ನಡೆಯುತ್ತಿದೆ. ಇದನ್ನು ತಡೆಯಬೇಕಿದೆ. ಸಮ ಸಮಾಜ ನಿರ್ಮಾಣ, ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ಕೊಡಿಸಲು ಶ್ರಮಿಸಿದವರು ಬಸವಾದಿ ಶರಣರು. ಇದು ಬಸವ ತತ್ವದ ಸುಗ್ಗಿಯ ಕಾಲ. ವಚನ ಸಂಪತ್ತನ್ನು ಸಂರಕ್ಷಿಸುವ ಅಗತ್ಯವಿದೆ. ಅನುಭವ ಮಂಟಪ ಪ್ರಜಾಪ್ರಭುತ್ವದ ತೊಟ್ಟಿಲು. ಬಸವ ತತ್ವ ಯುವ ಜನತೆಗೆ ತಲುಪಿಸಬೇಕಿದೆ ಎಂದರು.
ಡಾ. ಚನ್ನಬಸಯ್ಯ ಹಿರೇಮಠ್ ರಚಿಸಿರುವ ಅರಿವಿನ ಬೆಳಕು ಅಜಗಣ್ಣ ತಂದೆ ಹಾಗೂ ಡಾ.ಪಿ.ಆರ್.ಚಂದ್ರಶೇಖರ್, ಡಾ. ಮುಕ್ತಾಬಿ ಹಾಗೂ ಡಾ. ಎಸ್.ಎಂ. ಜಾಮದಾರ್ ಸಂಪಾದಿತ ಕೃತಿ ವಚನ ದರ್ಶನ ಮಿಥ್ಯ ವರ್ಸಸ್ ಸತ್ಯ ಕೃಷಿಯನ್ನು ಗಣ್ಯರು ಬಿಡುಗಡೆಗೊಳಿಸಿದರು.
ಶಿವಕುಮಾರ್ ಮುದೇನೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ನರಿ ಬಸವರಾಜ ಪ್ರಾರ್ಥಿಸಿ, ವಚನ ಸಂಗೀತ ಕಾರ್ಯಕ್ರಮ ನೀಡಿದರು. ನಿರ್ಮಲಾ ಬಸವರಾಜ ಹಾಗೂ ವಿಶಾಲಾಕ್ಷಿ ಉಗ್ರಾಣದ್ ಸ್ವಾಗತಿಸಿದರು. ಉಪನ್ಯಾಸಕ ಜಿ.ಎಂ.ಪ್ರದೀಪ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಅಂಕಮನಾಳ್ ಮಯೂರ್ ವಂದಿಸಿದರು.