ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಮುರುಘಾಮಠದಿಂದ ನಿರ್ಮಾಣವಾಗುತ್ತಿರುವ ಬಸವ ಪುತ್ಥಳಿಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನ ದುರುಪಯೋಗವಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ಎಚ್. ಏಕಾಂತಯ್ಯ ಹಿಂದಿನ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ದೂರು ನೀಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿ ವಾಸ್ತವಾಂಶದ ವರದಿ ನೀಡುವಂತೆ ವಿನಂತಿಸಿದ್ದರು. ಈ ಹಿನ್ನೆಲೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ನೇತೃತ್ವದ ಐವರ ತಂಡ ರಚಿಸಿದ್ದ ಜಿಲ್ಲಾಧಿಕಾರಿ ದಿವ್ಯಪ್ರಭು ಹದಿನೈದು ದಿನಗಳ ಒಳಗಾಗಿ ಪೂರಕ ದಾಖಲೆಗಳೊಂದಿಗೆ ಸ್ಪಷ್ಟ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಉಪ ವಿಭಾಗಾಧಿಕಾರಿ ಕಾರ್ತಿಕ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಮಲ್ಲಿಕಾರ್ಜುನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ತಹಸೀಲ್ದಾರ್ ನಾಗವೇಣಿ ಪರಿಶೀಲನಾ ತಂಡದಲ್ಲಿದ್ದರು.
ಕಳೆದ ವರ್ಷ ಡಿಸೆಂಬರ್ ಒಂದರಂದೇ ಜಿಲ್ಲಾಧಿಕಾರಿ ಈ ಪರಿಶೀಲನಾ ತಂಡ ನೇಮಿಸಿದ್ದರಿಂದ ಡಿಸೆಂಬರ್ ಹದಿನೈದರ ಒಳಗಾಗಿ ವರದಿ ಸಲ್ಲಿಸಬೇಕಿತ್ತು. ತನಿಖೆ ಮರೆಯಿತಾ ಜಿಲ್ಲಾಡಳಿತ ಎಂಬ ತಲೆಬರಹದಡಿ ಜನವರಿ ಹತ್ತರಂದು ಕನ್ನಡಪ್ರಭ ವರದಿ ಪ್ರಕಟಿಸಿತ್ತು. ಅಂದೇ ಫೀಲ್ಡಿಗಿಳಿದಿದ್ದ ಬಿ.ಟಿ.ಕುಮಾರಸ್ವಾಮಿ ನೇತೃತ್ವದ ತಂಡ ಮುರುಘಾಮಠದ ಹಿಂಭಾಗದಲ್ಲಿರುವ ಪುತ್ಥಳಿ ನಿರ್ಮಾಣದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು. ಕಾಮಗಾರಿ ಅರೆಬರೆಯಾಗಿ ಕೇವಲ ಪಾದಗಳ ಅಚ್ಚುಗಳು ಮಾಡಲಷ್ಟಕ್ಕೆ ಸೀಮಿತವಾಗಿರುವುದ ಕಂಡು ಅಚ್ಚರಿ ವ್ಯಕ್ತಪಡಿಸಿತ್ತು.ರಾಜ್ಯ ಸರ್ಕಾರದಿಂದ ಒಟ್ಟು 35 ಕೋಟಿ ರುಪಾಯಿ ಅನುದಾನ ಬಿಡುಗಡೆಯಾಗಿದೆ. 24 ಕೋಟಿ ರುಪಾಯಿ ಖರ್ಚಾಗಿದೆ. ಆರು ಕೋಟಿ ರುಪಾಯಿ ನಾಗರಾರ್ಜುನ ಕಂಪನಿಗೆ ಅಡ್ವಾನ್ಸ್ ಮಾಡಿದ್ದೇವೆ. ಐದು ಕೋಟಿ ರುಪಾಯಿ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದೇವೆ. ಮುರುಘಾಮಠದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದರಿಂದ ಆಡಳಿತಾಧಿಕಾರಿಗಳು ಕಾಮಗಾರಿಗೆ ಬೆಂಬಲಿಸಲಿಲ್ಲ. ಹಾಗಾಗಿ ಕಳೆದ ಒಂದು ವರ್ಷದಿಂದ ಕಾಮಗಾರಿ ನಿಂತಿದೆ. ಪುತ್ಥಳಿ ನಿರ್ಮಾಣದ ಪೂರಕವಾಗಿ ಬೇಕಾದ ಶೆಡ್, ಹೊರ ರಾಜ್ಯಗಳಿಂದ ಕೆಲಸಗಾರರು ಎಲ್ಲರ ವೇತನ ಸೇರಿದಂತೆ 24 ಕೋಟಿ ರುಪಾಯಿ ಖರ್ಚಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಲೆಕ್ಕ ಪತ್ರಗಳು ಇವೆ ಎಂದು ಪುತ್ಥಳಿ ನಿರ್ಮಾಣದ ಹೊಣೆ ಹೊತ್ತ ಮುರುಘಾಮಠದ ಇಂಜಿನಿಯರ್ ಜಗದೀಶ್ ಅಂದು ಪರಿಶೀಲನಾ ತಂಡಕ್ಕೆ ಮಾಹಿತಿ ನೀಡಿದ್ದರು.
ತುಸು ತಡವಾಗಿಯಾದರೂ ಇದೀಗ ಪರಿಶೀಲನಾ ವರದಿ ಸಿದ್ದವಾಗಿದೆ. ಸರ್ಕಾರದಿಂದ ಬಿಡುಗಡೆಯಾದ ಅನುದಾನ ದುರುಪಯೋಗವಾಗಿರುವುದು ಪರಿಶೀಲನಾ ತಂಡದ ವರದಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ ಎನ್ನಲಾಗಿದೆ. ಅನುದಾನವೆಲ್ಲ ಕಬ್ಬಿಣ, ಸಿಮೆಂಟ್, ಲೇಬರ್ ವೆಚ್ಚಕ್ಕೆ ವ್ಯಯವಾಗಿರುವುದ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ತಿಳಿದು ಬಂದಿದೆ.