ಸದಸ್ಯರ ನಡವಳಿಕೆಗೆ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಆಕ್ರೋಶ

KannadaprabhaNewsNetwork |  
Published : Feb 22, 2024, 01:49 AM ISTUpdated : Feb 22, 2024, 03:11 PM IST
Basavaraj Horatti

ಸಾರಾಂಶ

ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಉತ್ತರಿಸುವ ವೇಳೆ ಎದ್ದ ವಾಗ್ವಾದದ ವೇಳೆ ಹಂತದಲ್ಲಿ ತಾಳ್ಮೆ ಕಳೆದುಕೊಂಡ ಸಭಾಪತಿಗಳು ಇದೇ ರೀತಿ ಮುಂದುವರೆದರೆ ಸದನ ನಡೆಸಲು ಆಗುವುದಿಲ್ಲ. ಸದನವನ್ನು ಮುಂದೂಡಬೇಕಾಗುತ್ತದೆ ಎಂದು ಹೊರಟ್ಟಿ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್‌

ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಿಸುವ ವೇಳೆ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡವಳಿಕೆಗೆ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತಮ್ಮ 44 ವರ್ಷಗಳ ಸದಸ್ಯತ್ವ ಅವಧಿಯಲ್ಲಿ ಈ ರೀತಿಯ ಸದನ ಎಂದೂ ಇರಲಿಲ್ಲ ಎಂದು ಬೇಸರಿಸಿದ ಪ್ರಸಂಗ ನಡೆಯಿತು.

ಮುಖ್ಯಮಂತ್ರಿಗಳು ಉತ್ತರಿಸುವ ಮಧ್ಯ ಹಲವಾರು ಬಾರಿ ಪ್ರತಿಪಕ್ಷ ಬಿಜೆಪಿ ಸದಸ್ಯರು ಆಕ್ಷೇಪಣೆ ವ್ಯಕ್ತಪಡಿಸಿದ್ದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಸದಸ್ಯರು ಎದ್ದು ನಿಂತು ವಾದಕ್ಕೆ ಇಳಿದರು. ಈ ರೀತಿ ಮಾಡದಂತೆ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಎನ್‌.ರವಿಕುಮಾರ್‌ ಸೇರಿದಂತೆ ಬಿಜೆಪಿ ಸದಸ್ಯರಿಗೆ ಅನೇಕ ಬಾರಿ ಮನವಿ ಮಾಡಿದರೂ ಕೇಳಲಿಲ್ಲ.

ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಸಭಾಪತಿಗಳು ಇದೇ ರೀತಿ ಮುಂದುವರೆದರೆ ಸದನ ನಡೆಸಲು ಆಗುವುದಿಲ್ಲ. ಸದನವನ್ನು ಮುಂದೂಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪದೇ ಪದೇ ಎದ್ದು ನಿಂತು ಮಾತನಾಡುತ್ತಿದ್ದ ಕಾಂಗ್ರೆಸ್‌ನ ಪ್ರಕಾಶ್‌ ರಾಥೋಡ್‌ ಅವರಿಗೆ ಸದನದಿಂದ ಹೊರಗೆ ಹಾಕಬೇಕಾಗುತ್ತದೆ ಎಂದು ಖಡಕ್ ಆಗಿ ಹೇಳಿದರು.

ನಂತರವೂ ಮುಖ್ಯಮಂತ್ರಿಗಳು ಉತ್ತರ ನೀಡುವಾಗ ಇದೇ ವಾತಾವರಣ, ವಾಗ್ವಾದ, ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪಗಳು ಮುಂದುವರೆದಾಗ, ಸಿಟ್ಟಾದ ಹೊರಟ್ಟಿ ಅವರು ಶಾಲಾ ಮಕ್ಕಳ ತರ ಮಾಡಿದರೆ ಹೇಗೆ, ಹೀಗೆ ಆದರೆ ನಾನು ಕುಳಿತುಕೊಳ್ಳಲು ಆಗುವುದಿಲ್ಲ ಎಂದರು.

ಕೊನೆಗೆ ಸಿದ್ದರಾಮಯ್ಯ ಅವರು ದಿಢೀರೆಂದು ನನ್ನ ಉತ್ತರ ಮುಗಿದಿದೆ. ಸ್ಪಷ್ಟನೆ ಕೊಡುವುದಿಲ್ಲ ಎಂದು ಹೇಳಿ ಕುಳಿತುಕೊಂಡರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಅನೇಕ ಸದಸ್ಯರು, ಮುಖ್ಯಮಂತ್ರಿಗಳ ಉತ್ತರ ಬಗ್ಗೆ ನಾವು ಸಾಕಷ್ಟು ಟಿಪ್ಪಣಿ ಹಾಕಿಕೊಂಡಿದ್ದೇವೆ. ಈಗ ಸ್ಪಷ್ಟನೆ ನೀಡುವುದಿಲ್ಲ ಎಂದು ಹೇಳಿದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಸಭಾಪತಿಗಳು ಉತ್ತರ ಮುಂದುವರೆಸುವಂತೆ ಯಾರಿಗೂ ಹೇಳಲು ಆಗುವುದಿಲ್ಲ ಎಂದು ಹೇಳಿ, ಮುಂದಿನ ಕಲಾಪ ಕೈಗೆತ್ತಿಕೊಂಡರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ