ಬಸವರಾಜ ಬೊಮ್ಮಾಯಿ ಸುಳ್ಳಿನ ಸರದಾರ

KannadaprabhaNewsNetwork | Published : May 4, 2024 12:37 AM

ಸಾರಾಂಶ

ಸದಾ ಧರ್ಮದ ಮೇಲೆ ವಿಶ್ವಾಸವಿಟ್ಟ ಕಾಂಗ್ರೆಸ್ ಪಕ್ಷ ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸುತ್ತಿದೆ.

ಲಕ್ಷ್ಮೇಶ್ವರ: ಸದಾ ಸುಳ್ಳುಗಳನ್ನೇ ಹೇಳುವ ಬಿಜೆಪಿಯ ಬೋಗಸ್ ಕ್ಯಾಂಡಿಡೇಟ್ ಬಸವರಾಜ ಬೊಮ್ಮಾಯಿ ತಮ್ಮ ಬಳಿ ಮತಯಾಚನೆಗೆ ಬಂದಾಗ ಜನ್ ಧನ್ ಖಾತೆ ತೋರಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಜನತೆಗೆ ಕರೆನೀಡಿದರು.

ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಕಾಂಗ್ರೆಸ್ ರೋಡ್ ಶೋದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾವನಾತ್ಮಕ ಸಂಗತಿ ಮುಂದಿಟ್ಟುಕೊಂಡು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ದೇಶದ ಪ್ರತಿಯೊಬ್ಬರಿಗೂ ಸ್ವಿಸ್ ಬ್ಯಾಂಕ್ ನ ಹಣ ಜಮಾ ಮಾಡುವುದಾಗಿ ಹೇಳಿತ್ತು. ಜನರು ನಂಬಿ ಜನ್ ಧನ್ ಖಾತೆ ತೆರೆದರು. ಆದರೆ ಹತ್ತು ವರ್ಷಗಳಿಂದ ಆ ಪಕ್ಷ ನೀಡಿದ ಭರವಸೆ ಈಡೇರಿಸಲಿಲ್ಲ. ಜತೆಗೆ ರೈತರ ಭಾವನೆಗಳಿಗೆ ಸ್ಪಂದಿಸಲಿಲ್ಲ. ಅಂಥ ಪಕ್ಷದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಕೂಡ ಚಕ್ರವರ್ತಿ ಸೂಲಿಬೆಲೆಯನ್ನು ಮೀರಿ ಸುಳ್ಳುಗಳನ್ನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಮನೆ ಮಗ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮತ ನೀಡಿ ಗೆಲ್ಲಿಸಿದರೆ ಅವರ ಮುಂಗೈ ಹಿಡಿದು ಕೇಳುವ ಅಧಿಕಾರ ನಿಮಗಿದೆ ಎಂದರು.

ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆ ಧರ್ಮ ಮತ್ತು ಅಧರ್ಮಗಳ ಮಧ್ಯ ನಡೆಯುತ್ತಿದೆ. ಸದಾ ಧರ್ಮದ ಮೇಲೆ ವಿಶ್ವಾಸವಿಟ್ಟ ಕಾಂಗ್ರೆಸ್ ಪಕ್ಷ ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು.

ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ತಮ್ಮ ಮಧ್ಯ ಇದ್ದು ಸೇವೆ ಮಾಡಬೇಕೆಂಬುದು ನನ್ನ ಅಪೇಕ್ಷೆ. ಈ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ ಎಂದರು.

ಇದಕ್ಕೂ ಮುನ್ನ ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ರೋಡ್ ಶೋ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೂದಪೀರಾ ದರ್ಗಾವರೆಗೆ ಸಾಗಿ ಬಂದಿತು.

ಮಗನ ಗೆಲುವಿಗೆ ಹೆಜ್ಜೆ ಹಾಕಿದ ಹೆತ್ತವರು: ಆನಂದಸ್ವಾಮಿ ಗಡ್ಡದೇವರಮಠ ಲಕ್ಷ್ಮೇಶ್ವರದ ನಿವಾಸಿಯಾಗಿದ್ದು ಅವರ ತಂದೆ ಜಿ.ಎಸ್. ಗಡ್ಡದೇವರಮಠ ಹಾಗೂ ತಾಯಿ ಜಯಲಕ್ಷ್ಮೀ ಗಡ್ಡದೇವರಮಠ ಅವರು ಕಾಲ್ನಡಿಗೆಯಲ್ಲಿ ಕ್ರಮಿಸುತ್ತ ಬಂದರು. ವ್ಯಾಪಾರಸ್ಥರ, ನಿವಾಸಿಗಳ ಬಳಿ ಖುದ್ದು ತೆರಳಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡುತ್ತಿದ್ದರು.

ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮಗ ಮನೆಗೆ ಬರಲಿ ಎಂದು ಹೆತ್ತವರು ಹಾರೈಸಿರುವುದು ಆಕರ್ಷಣೆಯ ಆಗಿತ್ತು.

ಈ ವೇಳೆ ಮಾಜಿ ಶಾಸಕ ರಾಮಣ್ಣ ಲಮಾಣಿ, ಸಯ್ಯದ್ ಅಜ್ಜಿಂಪೀರ್ ಖಾದ್ರಿ, ರಾಮಕೃಷ್ಣ ದೊಡ್ಡಮನಿ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಮುಖಂಡರಾದ ಅಜ್ಜಣ್ಣ ಮಹಾಂತಶೆಟ್ಟರ್, ಚನ್ನಪ್ಪ ಜಗಲಿ,ಸುಜಾತಾ ದೊಡ್ಡಮನಿ, ಗುರುನಾಥ ದಾನಪ್ಪನವರ, ದಾದಾಪೀರ್ ಮುಚ್ಚಾಲೆ, ಭಾಗ್ಯಶ್ರೀ ಬಾಬಣ್ಣ, ಫಕ್ಕೀರೇಶ ಮ್ಯಾಟಣ್ಣವರ, ಬಸವರಡ್ಡಿ ಹನುಮರಡ್ಡಿ, ಫಿರ್ದೋಷ್ ಆಡೂರ, ರಾಜು ಕುಂಬಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್. ಕೊಪ್ಪದ ಹಾಗೂ ಜಯಮ್ಮ ಕಳ್ಳಿ, ಬಸವರಾಜ ಹೊಳಲಾಪೂರ, ಮಂಜುನಾಥ ಬಟ್ಟೂರ, ಗಂಗಾಧರ ಪರಸಣ್ಣವರ, ಅಫ್ಜಲ್ ರಿತ್ತಿ ಉಪಸ್ಥಿತರಿದ್ದರು.

Share this article