ಕೊಪ್ಪಳ:
ಕೊಪ್ಪಳ ತಾಲೂಕು ಅಧಿಕೃತ ಖಾಸಗಿ ಶಾಲೆಗಳ ಒಕ್ಕೂಟಕ್ಕೆ ಬಸವರಾಜ ತಳಕಲ್ ಅಧಿಕೃತ ಅಧ್ಯಕ್ಷರಾಗಿದ್ದು, ಈ ಸಂಘಟನೆಯಿಂದ ಸೆ. 14ರಂದು ಮಧುಶ್ರೀ ಗಾರ್ಡ್‌ನಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಒಕ್ಕೂಟದ ಮಾಜಿ ಅಧ್ಯಕ್ಷ ಶಿವಕುಮಾರ ಕುಕನೂರ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಹೀದ್ ತಹಸೀಲ್ದಾರ್ ಅಧ್ಯಕ್ಷರೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಅವರು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮೊದಲಿಗೆ ಕುಸುಮಾ ಮತ್ತು ಕ್ಯಾಮ್ಸ್ ಎಂಬ ಎರಡು ಸಂಘಟನೆಗಳು ಬೇರೆ-ಬೇರೆಯಾಗಿ ಶಿಕ್ಷಕರ ದಿನಾಚರಣೆ ಮಾಡುತ್ತಿದ್ದವು. 2023 ಸೆ. 17ರಂದು ಆಮಂತ್ರಣ ಪತ್ರಿಕೆ ಮುದ್ರಣವಾಗಿತ್ತು. ನಂತರ ಸಭೆ ಕರೆದು 2024ರಿಂದ ಎಲ್ಲರೂ ಸೇರಿ ಶಿಕ್ಷಕರ ದಿನಾಚರಣೆ ಮಾಡೋಣ, ಎರಡು ಸಂಘಟನೆಗಳು ಬೇಡ. ಒಂದೇ ಸಂಘಟನೆಯೊಂದಿಗೆ ಕಾರ್ಯಕ್ರಮ ಮಾಡೋಣ ಎಂದು ಎಲ್ಲರ ಸಮ್ಮತದೊಂದಿಗೆ ನಿರ್ಧರಿಸಲಾಗಿದೆ. ಅದರಂತೆ ಅ.7, 2023ರಂದು ತಾಲೂಕಿನ ಎಲ್ಲ ಶಾಲೆಗಳ ಮುಖ್ಯಸ್ಥರು ಸಭೆ ನಡೆಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಎಲ್ಲರ ಒಮ್ಮತದೊಂದಿಗೆ ಬಸವರಾಜ ತಳಕಲ್ ತಾಲೂಕು ಅಧ್ಯಕ್ಷರನ್ನಾಗಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಿತೀಶ ಪುಲಸ್ಕರ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು.ಬಸವರಾಜ ತಳಕಲ್ ಅಧ್ಯಕ್ಷತೆಯಲ್ಲಿ ಸೆ. 1ರಂದು ಸಭೆ ನಡೆಸಿ ಎರಡೂ ಸಂಘಟನೆಗಳು ಸೇರಿ ಒಂದು ಸಂಘಟನೆಯೊಂದಿಗೆ ಕಾರ್ಯಕ್ರಮ ಮಾಡೋಣ ಎಂದು ಮಹಾಂತಯ್ಯನಮಠ ಶಾಲೆಯ ಮುಖ್ಯಸ್ಥರಾದ ವೀರೇಶ ಮಹಾಂತಯ್ಯನಮಠರು ಹೇಳಿದರು. ಆನಂತರ 3 ದಿನಗಳಾದರು ಮಹಾಂತಯ್ಯನಮಠರ ದೂರವಾಣಿ ಕರೆಯನ್ನು ಶಾಹೀದ್ ತಹಶೀಲ್ದಾರ್ ಸ್ವೀಕರಿಸದ ಕಾರಣ ನಾವು ಈ ವರ್ಷದ ಶಿಕ್ಷಕರ ದಿನಾಚರಣೆ ಸಿದ್ಧತೆ ನಡೆಸಿದ್ದೇವೆ ಎಂದು ಮಾಹಿತಿ ನೀಡಿದರು.
ಕುಸುಮಾ ಸಂಘಟನೆ ಹೆಸರು ಹೇಳಿಕೊಂಡು, ಅಧ್ಯಕ್ಷನೆಂದು ಓಡಾಡುತ್ತಿರುವ ಶಾಹೀದ್ ತಹಶೀಲ್ದಾರ್, ಎಲ್ಲಾ ಶಾಲೆಗಳಿಗೆ ತೆರಳಿ ಹಣ ವಸೂಲಿ ಮಾಡಿ ಶಿಕ್ಷಕರ ದಿನಾಚರಣೆ ಮಾಡುತ್ತಿದ್ದಾರೆ. ಮಂಡಳಿ ಸದಸ್ಯರು ಇವರಿಗೆ ಹಣ ಕೇಳಿದರೆ ನೀಡಬಾರದೆಂದು ಮನವಿ ಮಾಡಿದ ಅವರು, ನಮ್ಮ ಸಂಘಟನೆಯಿಂದ ನಡೆಯುವ ಶಿಕ್ಷಕರ ದಿನಾಚರಣೆಯನ್ನು ದೇಣಿಗೆ, ವಂತಿಗೆ ಪಡೆಯದೇ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಅಧ್ಯಕ್ಷ ಬಸವರಾಜ ತಳಕಲ್, ಪ್ರಧಾನ ಕಾರ್ಯದರ್ಶಿ ನಿತೀಶ ಪುಲಸ್ಕರ್, ಮಾಜಿ ಕಾರ್ಯದರ್ಶಿ ಆರ್.ಎಚ್. ಅತ್ತನೂರ, ಮಾಜಿ ಕಾರ್ಯದರ್ಶಿ ಹುಲಗಪ್ಪ ಕಟ್ಟಿಮನಿ, ಮಾಜಿ ಖಜಾಂಚಿ ಬಸವರಾಜ ಶಿರಗುಂಪಿಶೆಟ್ಟರ್ ಇದ್ದರು.