ಬಸವತತ್ವ-ಇಸ್ಲಾಂ ಧರ್ಮದ ತತ್ವದಲ್ಲಿ ಸಾಮ್ಯತೆಯಿದೆ: ಕೆ.ಎಂ.ಅಬೂಬಕ್ಕರ್‌

KannadaprabhaNewsNetwork | Published : Dec 23, 2024 1:00 AM

ಸಾರಾಂಶ

ಬಸವಣ್ಣನವರ ವಚನಗಳಿಂದ ಅವರಿಗಿದ್ದ ಸಮಾಜಮುಖಿ ಕಾಳಜಿಗಳು ಅನಾವರಣಗೊಳ್ಳುತ್ತವೆ. ಸಕಲ ಜೀವಾತ್ಮಗಳಿಗೆ ಲೇಸನ್ನು ಬಯಸು, ಕಳಬೇಡ-ಕೊಲಬೇಡ ಎಂಬಿತ್ಯಾದಿ ಬಸವಣ್ಣನವರ ವಚನಗಳು ಇಡೀ ಮನುಕುಲದ ಒಳಿತಿನ ಬಗ್ಗೆ ಹೇಳುತ್ತವೆ. ಬಸವಾದಿ ಶರಣರ ವಚನಗಳು ಸಮಾಜದ ಸ್ವಾರ್ಥವನ್ನು ಕಾಪಾಡುವ ದಿಸೆಯಲ್ಲಿ ಮಹತ್ವ ಕೆಲಸ ಮಾಡಿವೆ.

ಕನ್ನಡಪ್ರಭವಾರ್ತೆ ಮಂಡ್ಯ

ಬಸವತತ್ವ ಹಾಗೂ ಇಸ್ಲಾಂ ಧರ್ಮದ ತತ್ವದಲ್ಲಿ ಸಾಮ್ಯತೆಯಿದೆ. ಬಸವಾದಿ ಶರಣರು ಸಾರಿದ ಸಮಾನತೆ, ಪರೋಪಕಾರ ಹಾಗೂ ಕಾಯಕತತ್ವದ ಆಶಯಗಳನ್ನೇ ಇಸ್ಲಾಂ ಧರ್ಮ ಸಾರಿದೆ ಎಂದು ಸಾಂಸ್ಕೃತಿಕ ಚಿಂತಕ ಕೆ.ಎಂ.ಅಬೂಬಕ್ಕರ್‌ ಸಿದ್ಧಿಕಿ ತಿಳಿಸಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆ ೧ರಲ್ಲಿ ಜರುಗಿದ ಸಮಾನತೆ ಸಾರಿದ ದಾರ್ಶನಿಕರು ಕುರಿತ ಗೋಷ್ಠಿಯಲ್ಲಿ ಭಾನುವಾರ ಆಶಯ ನುಡಿಗಳನ್ನಾಡಿದರು.

ಬಸವಣ್ಣನವರ ವಚನಗಳಿಂದ ಅವರಿಗಿದ್ದ ಸಮಾಜಮುಖಿ ಕಾಳಜಿಗಳು ಅನಾವರಣಗೊಳ್ಳುತ್ತವೆ. ಸಕಲ ಜೀವಾತ್ಮಗಳಿಗೆ ಲೇಸನ್ನು ಬಯಸು, ಕಳಬೇಡ-ಕೊಲಬೇಡ ಎಂಬಿತ್ಯಾದಿ ಬಸವಣ್ಣನವರ ವಚನಗಳು ಇಡೀ ಮನುಕುಲದ ಒಳಿತಿನ ಬಗ್ಗೆ ಹೇಳುತ್ತವೆ. ಬಸವಾದಿ ಶರಣರ ವಚನಗಳು ಸಮಾಜದ ಸ್ವಾರ್ಥವನ್ನು ಕಾಪಾಡುವ ದಿಸೆಯಲ್ಲಿ ಮಹತ್ವ ಕೆಲಸ ಮಾಡಿವೆ. ಸಮಾನತೆಯ ಬಗೆಗಿನ ಪ್ರಸ್ತಾಪ ಬಂದಾಗ ಬಸವಣ್ಣ ಸೇರಿ ಅಂದಿನ ಅನೇಕ ವಚನಕಾರರು ಹಾಗೂ ವಚನಗಾರ್ತಿಯರ ಕೊಡುಗೆಗಳನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಸಾಂಸ್ಕೃತಿಕ ನಾಯಕ ಬಸವಣ್ಣ ವಿಷಯ ಕುರಿತು ಮಾತನಾಡಿದ ಶ್ರೀ.ನಿ.ಪ.ಶಿವಾನುಭವ ಚರಮೂರ್ತಿ ಶಿವರುದ್ರಸ್ವಾಮಿ, ಬಸವಣ್ಣನವರನ್ನು ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಆದರೆ, ಇದು ಅತಿಶೋಕ್ತಿಯಲ್ಲ ಅಥವಾ ಹೊಗಳಿಕೆಯ ಮಾತೂ ಅಲ್ಲ. ಬಸವಣ್ಣನವರು ನೀಡಿರುವ ಕೊಡುಗೆಯನ್ನು ಸ್ಮರಿಸುವ ಕೆಲಸವಾಗಿದೆ. ಸಮಾನತೆ ಹಾಗೂ ಸಮನ್ವತೆಯ ಚಿಂತನೆಗೆ ಅಡಿಗಲ್ಲು ಹಾಕಿಕೊಟ್ಟಿರುವ ಬಸವಣ್ಣವರು ಅಂತರಂಗದ ದರ್ಶನ ಮಾಡಿಸಿದ್ದಾರೆ. ಬಸವಣ್ಣನವರ ಕಾಯಕತತ್ವದ ಆಶಯ ಇಡೀ ಪ್ರಪಂಚಕ್ಕೆ ಮಾದರಿ. ಬಸವಣ್ಣನವರ ದಾರ್ಶನಿಕ ಗುಣಗಳನ್ನು ಎಲ್ಲರೂ ಅನುಸರಿಸುವಂತಾದರೆ ಪ್ರಪಂಚದಲ್ಲಿ ಯುದ್ಧಗಳು ಸಂಭವಿಸುವುದಿಲ್ಲ ಎಂದು ಹೇಳಿದರು.

ಸಾಮರಸ್ಯ ಸಾರಿದ ದಾಸವರೇಣ್ಯರು ಕುರಿತು ಡಾ.ಎನ್.ಆರ್.ಲಲಿತಾಂಬ ಮಾತನಾಡಿದರು.

ವ್ಯಕ್ತಿಯ ಒಳಗಿನಿಂದಲೇ ಸಾಮರಸ್ಯ ಸೃಷ್ಟಿಯಾಗಬೇಕು. ಕುಟುಂಬಗಳಲ್ಲಿಯೇ ಸಮಾನತೆಯ ಸಮಷ್ಟಿ ಭಾವ ಮೈಗೂಡಬೇಕು. ಪರಧರ್ಮ ಹಾಗೂ ಪರ ವಿಚಾರಗಳನ್ನು ಗೌರವಿಸುವಂತಾಗಬೇಕು. ಈ ದಿಸೆಯ ಬದಲಾವಣೆಗಳು ಪ್ರತಿಯೊಬ್ಬರಲ್ಲಾಗಬೇಕು ಎಂದು ಲಿಲಿತಾಂಬ ಅವರು ಹೇಳಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಂಸ್ಕೃತಿಕ ಚಿಂತಕ ಶಂಕರ ದೇವನೂರು ಅವರು, ಶರಣರು ಒಂದು ನೆಲೆಗೆ ಸೀಮತಗೊಂಡಿರಲಿಲ್ಲ. ಹಲವು ಆಯಾಮಗಳಲ್ಲಿ ಜೀವಿಸಿದರು ಎಂದರಲ್ಲದೆ, ಬಸವಣ್ಣನವರ ದೂರಗಾಮಿತನ ಹಾಗೂ ಸಮಾನತೆಯನ್ನು ಈ ಆಧುನಿಕ ಕಾಲದಲ್ಲೂ ಕಾಣಲು ಸಾಧ್ಯವಿಲ್ಲ. ದಾಸಿಯ ಪುತ್ರನಾಗಲಿ, ವೇಶ್ಯೆಯ ಪುತ್ರನಾಗಲಿ ಶಿವದೀಕ್ಷೆ ಪಡೆದ ಬಳಿಕ ಅವನೂ ಶರಣನಾಗುತ್ತಾನೆ ಎಂಬ ಬಸವಣ್ಣನವರ ಚಿಂತನೆ ನಮ್ಮೆಲ್ಲರ ಬದುಕಿಗೆ ಬೆಳಕಾಗಲಿ ಎಂದರು.

ಡಾ.ಮೀನಾ ಸದಾಶಿವ ಅವರು ಅರಿವು ಮೂಡಿಸಿದ ತತ್ವಪದಕಾರರು ವಿಷಯ ಕುರಿತು ಮಾತನಾಡಿದರು. ಡಾ.ಸಿ.ರಾಜಶೇಖರ್‌, ಎಲ್.ಚೇತನಕುಮಾರ್‌ ಮಳವಳ್ಳಿ, ರತ್ನತ್ರಯ ಹಾಗೂ ಎಂ.ಪಿ.ಶ್ರೀನಾಥ ಅವರು ಕಾರ್ಯಕ್ರಮ ನಿರ್ವಹಿಸಿದರು.

Share this article