ಯತ್ನಾಳ ವಿರುದ್ಧ ಬಸವತತ್ವ ಸಂಘಟನೆಗಳ ಪ್ರತಿಭಟನೆ

KannadaprabhaNewsNetwork | Published : Dec 7, 2024 12:32 AM

ಸಾರಾಂಶ

ಬಸವಣ್ಣ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಬಸವತತ್ವ ಸಂಘಟನೆಗಳು ಶುಕ್ರವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು.

ಕೂಡಲೇ ಬಹಿರಂಗವಾಗಿ ಕ್ಷಮೆ ಕೇಳಲು ಆಗ್ರಹಕನ್ನಡಪ್ರಭ ವಾರ್ತೆ ಕೊಪ್ಪಳ

ಬಸವಣ್ಣ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಬಸವತತ್ವ ಸಂಘಟನೆಗಳು ಶುಕ್ರವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು.

ಲಿಂಗಾಯತ ಮಹಾಸಭಾ ಹಾಗೂ ಬಸವತತ್ವದ ಸಂಘಟನೆಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶಾಸಕ ಯತ್ನಾಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.

ಇದು, ಕೇವಲ ಸಾಂಕೇತಿಕ ಪ್ರತಿಭಟನೆ, ತಪ್ಪಿನ ಅರಿವಿನಿಂದ ಕೂಡಲೇ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದರು.

ಮಾನವ ಕುಲವನ್ನು ಸಮಾನತೆಯಡಿ, ಸಾಮಾಜಿಕ ನ್ಯಾಯದ ಅಡಿಯಲ್ಲಿ ಬದುಕುವುದಕ್ಕೆ ದಾರಿ ಮಾಡಿಕೊಟ್ಟ ಮಹಾನ್‌ ನಾಯಕ ಬಸವಣ್ಣ. ಸಮಾಜದ ಪ್ರತಿಯೊಂದು ಜೀವಿಯನ್ನು ಪ್ರೀತಿಸುವಂತೆ ಬದುಕು ಕಲಿಸಿಕೊಟ್ಟ ಹಿರಿಮೆ ಅವರದ್ದು. ಅನುಭವ ಮಂಟಪದ ಮೂಲಕ ಸಮಾಜದ ಸಮಗ್ರ ಏಳ್ಗೆಗಾಗಿ ಶ್ರಮಿಸಿದ ಬಸವಣ್ಣ ಅವರ ಕುರಿತು ಕೀಳಾಗಿ ಮಾತಾಡಿದ್ದು ಮನುಕುಲಕ್ಕೆ ಮಾಡಿರುವ ಅಪಮಾನವಾಗಿದೆ. ಆದ್ದರಿಂದ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇನ್ನಿಲ್ಲದ ರೀತಿಯಲ್ಲಿ ಆರೋಪ ಮಾಡುವುದು ಸರಿಯಲ್ಲ. ಇತಿಹಾಸವನ್ನು ಸರಿಯಾಗಿ ತಿಳಿದುಕೊಂಡು ಮಾತನಾಡಬೇಕು. ಅಲ್ಲದೆ ಮಹಾನ್‌ ವ್ಯಕ್ತಿಗಳ ಕುರಿತು ಮಾತನಾಡುವ ವೇಳೆಯಲ್ಲಿ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಕಿಡಿಕಾರಲಾಯಿತು.

ಬಸವೇಶ್ವರ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿ, ಬಹಿರಂಗ ಕ್ಷಮೆಗೆ ಆಗ್ರಹಿಸಲಾಯಿತು.

ಇನ್ಮುಂದೆ ಈ ರೀತಿಯ ಹೇಳಿಕೆ ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಬಸವಣ್ಣ ಅವರು ಈ ನಾಡಿನ ಅಷ್ಟೇ ಅಲ್ಲ, ವಿಶ್ವದ ಸಾಕ್ಷಿಪ್ರಜ್ಞೆಯಾಗಿದ್ದಾರೆ. ಅಂಥ ಮಹಾನ್‌ ನಾಯಕನ ಅನುಕರಣೆ ಜಗತ್ತು ಮಾಡುತ್ತಿರುವಾಗ ಕೀಳಾಗಿ ಮಾತನಾಡುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಈಶಣ್ಣ ಕೋರ್ಲಳ್ಳಿ, ವಿಶ್ವಗುರು ಬಸವವೇಶ್ವರ ಟ್ರಸ್ಟ್ ಅಧ್ಯಕ್ಷ ಗುಡದಪ್ಪ ಹಡಪದ, ಜಿಲ್ಲಾಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ, ಶೇಖರಪ್ಪ ಇಂಗಳದಾಳ, ರಾಜೇಶ ಸಸಿಮಠ, ಸಾವಿತ್ರಿ ಮುಜುಂದಾರ, ಸೌಮ್ಯ ನಾಲ್ವಡ, ಸಂಗಮೇಶ ವಾರದ, ದಾನಪ್ಪ ಶೆಟ್ಟರ, ಶರಣಬಸನಗೌಡ ಪಾಟೀಲ್, ಶಿವಬಸಯ್ಯ ವೀರಾಪುರ, ಸೋಮನಗೌಡ ವಗರನಾಳ ಇದ್ದರು.

Share this article