ಕರ್ಮ ಸಿದ್ದಾಂತ ಒಡೆದು ಕಾಯಕ ಸಂಸ್ಕೃತಿ ತಂದ ಬಸವೇಶ್ವರ - ಡಾ.ಕೋಡಿರಂಗಪ್ಪ

KannadaprabhaNewsNetwork |  
Published : Apr 22, 2026, 01:15 AM IST
ಸಿಕೆಬಿ-3 ನಗರ ಹೊರವಲಯದ ಚಿತ್ರವತಿ ಬಳಿಯ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನಲ್ಲಿ ಕಸಾಪ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು | Kannada Prabha

ಸಾರಾಂಶ

ಕರ್ಮ ಸಿದ್ಧಾಂತದ ಹೆಸರಿನಲ್ಲಿ ನಡೆಯುತ್ತಿದ್ದ ಹಲವು ರೀತಿಯ ತಾರತಮ್ಯಗಳು, ಅಸಮಾನತೆಗೆ ಮನುಷ್ಯನ ಜನನ ಮತ್ತು ಹಣೆಬರಹ ಮುಂತಾದವುಗಳ ಫಲ ಎಂದು ನಂಬಿಸಿದ್ದ ಅವೈಜ್ಞಾನಿಕ ಮನಸ್ಥಿತಿಯನ್ನು ಒಡೆದು ವೈಜ್ಞಾನಿಕ ಹಾಗೂ ಮಾನವಿಯ ಜೀವನಕ್ಕೆ ಅಗತ್ಯ ವಿಷಯಗಳನ್ನು ಪ್ರಚುರ ಪಡಿಸಿದ ಬಸವಣ್ಣನವರು ಕರ್ಮ ಸಿದ್ಧಾಂತವನ್ನು ಒಡೆದು ಕಾಯಕ ಸಂಸ್ಕೃತಿಯ ಮೂಲಕ ಸಮಾಜ ಪರಿವರ್ತಕರಾಗಿ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿ ರಂಗಪ್ಪ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕರ್ಮ ಸಿದ್ಧಾಂತದ ಹೆಸರಿನಲ್ಲಿ ನಡೆಯುತ್ತಿದ್ದ ಹಲವು ರೀತಿಯ ತಾರತಮ್ಯಗಳು, ಅಸಮಾನತೆಗೆ ಮನುಷ್ಯನ ಜನನ ಮತ್ತು ಹಣೆಬರಹ ಮುಂತಾದವುಗಳ ಫಲ ಎಂದು ನಂಬಿಸಿದ್ದ ಅವೈಜ್ಞಾನಿಕ ಮನಸ್ಥಿತಿಯನ್ನು ಒಡೆದು ವೈಜ್ಞಾನಿಕ ಹಾಗೂ ಮಾನವಿಯ ಜೀವನಕ್ಕೆ ಅಗತ್ಯ ವಿಷಯಗಳನ್ನು ಪ್ರಚುರ ಪಡಿಸಿದ ಬಸವಣ್ಣನವರು ಕರ್ಮ ಸಿದ್ಧಾಂತವನ್ನು ಒಡೆದು ಕಾಯಕ ಸಂಸ್ಕೃತಿಯ ಮೂಲಕ ಸಮಾಜ ಪರಿವರ್ತಕರಾಗಿ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿ ರಂಗಪ್ಪ ಅಭಿಪ್ರಾಯಪಟ್ಟರು. ಜಿಲ್ಲಾ ಹಾಗೂ ತಾಲೂಕು ವತಿಯಿಂದ ನಗರ ಹೊರವಲಯದ ಚಿತ್ರವತಿ ಬಳಿಯ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, 12ನೇ ಶತಮಾನದಲ್ಲಿ ಸಮಾಜ ಪರಿವರ್ತನೆಗಾಗಿ ಬಸವಣ್ಣನವರ ನೇತೃತ್ವದಲ್ಲಿ ಹೊರಹೊಮ್ಮಿದ ವಚನ ಚಳವಳಿಯ ಮೂಲಕ ಆ ಕಾಲದಲ್ಲಿ ಆಚರಣೆಯಲ್ಲಿದ್ದ ಮೇಲು-ಕೀಳು ಜಾತಿ ಮತ್ತು ವೃತ್ತಿ ಆಧಾರಿತರ ತಾರತಮ್ಯಗಳು, ಶೋಷಣೆ, ಲಿಂಗ ಅಸಮಾನತೆ, ಅನಕ್ಷರತೆ ಅಜ್ಞಾನಗಳನ್ನು ಅಳಿಸಿ ಜನರಲ್ಲಿ ಕಾಯಕ ಮತ್ತು ಸೇವಾ ಸಂಸ್ಕೃತಿಯ ಮೂಲಕ ಸಮಾಜ ಪರಿವರ್ತನೆಗೆ ವಿಶಿಷ್ಟ ಕೊಡುಗೆ ನೀಡಿದರು ಎಂದು ತಿಳಿಸಿದರು. ಆ ಕಾಲದಲ್ಲಿ ದೀನದಲಿತರು, ಮಹಿಳೆಯರು ಮತ್ತು ಹಿಂದುಳಿದ ಕಾಯಕ ಯೋಗಿಗಳನ್ನು ವೈಚಾರಿಕವಾಗಿ ಬೆಳೆಸಲು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ಬಸವಣ್ಣನವರು ಸಮಾನತೆ ಹಾಗೂ ಮಾನವೀಯತೆಯ ಆಧಾರದಲ್ಲಿ ಜನಪರ ಆಡಳಿತ ಹಾಗೂ ಸಮಾಜ ವ್ಯವಸ್ಥೆಯನ್ನು ನಿರ್ಮಿಸಲು ಹೋರಾಟ ನಡೆಸಿದರು ಎಂದು ತಿಳಿಸಿದರು.ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಜಿ ಪಿ ಬಾಹುಬಲಿ ಮಾತನಾಡಿ, 12ನೇ ಶತಮಾನದಲ್ಲಿ ಬೆರಳೆಣಿಕೆಯಷ್ಟು ಅಕ್ಷರಸ್ಥರಿದ್ದ ಸಮಾಜದಲ್ಲಿ ಹಲವು ರೀತಿಯ ಅವೈಜ್ಞಾನಿಕ ಮತ್ತು ಅಮಾನವೀಯ ಆಚರಣೆಗಳು ಹಾಗೂ ತಾರತಮ್ಯಗಳಿದ್ದು ಅವುಗಳಿಂದ ಆಗಬಹುದಾದ ಅನಾಹುತಗಳ ಬಗ್ಗೆ ತಿಳಿದಿದ್ದ ಬಸವಣ್ಣನವರು ಪ್ರತಿ ವ್ಯಕ್ತಿಯಲ್ಲಿ ಕಾಯಕನಿಷ್ಠೆ, ಮಾನವ ಸಂಸ್ಕೃತಿ, ವೈಚಾರಿಕ ಭಾವ ,ನಿಜಭಕ್ತಿಯನ್ನು ಬೆಳೆಸಲು ಹಲವು ಜಾತಿ ಧರ್ಮಗಳ ನಡುವೆ ಸ್ತ್ರೀ ಪುರುಷರ ನಡುವೆ, ಬಡಬಲ್ಲಿದರ ನಡುವೆ, ವಿವಿಧ ಜಾತಿಗಳ ನಡುವೆ ಸಾಮರಸ್ಯ ಮತ್ತು ಒಗ್ಗೂಡುವಿಕೆಯನ್ನು ಸಾಧಿಸಲು ಅಹರ್ನಿಶಿ ಶ್ರಮಿಸಿದ್ದಾರೆ. ಒಂದು ದೇಶ ನಿರ್ಮಾಣಕ್ಕೆ ಮತ್ತು ಅಸ್ತಿತ್ವಕ್ಕೆ ವಚನ ಚಳವಳಿಯ ಆದರ್ಶಗಳು ಮತ್ತು ಸಾಹಿತ್ಯ ವಿಚಾರಗಳು ಅತ್ಯಂತ ಮುಖ್ಯವೆನಿಸಿದ್ದು ಇವುಗಳ ಬಗ್ಗೆ ತಿಳಿದು ಪಾಲಿಸುವ ಮನಸ್ಸು ಮೂಡಿದರೆ ಬಸವಣ್ಣನವರ ಹೋರಾಟಕ್ಕೆ ಸಾರ್ಥಕತೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಚಿಂತಕ ಸರ್ದಾರ್ ಚಾಂದ್ ಪಾಷಾ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಮರು ಹುಟ್ಟುಪಡೆಯಬೇಕು, ಆಗ ನಮ್ಮ ಸಮಾಜ ಇನ್ನೂ ಎತ್ತರಕ್ಕೆ ಬೆಳೆಯುತ್ತದೆ. ಗಟ್ಟಿಯಾಗಿ ನಿಲ್ಲುತ್ತದೆ. ದುರ್ಬಲರು, ಮಹಿಳೆಯರು, ಶೋಷಿತರೂ ಕೂಡ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಧ್ಯಾಪಕ ಡಾ. ಎಂ ಶಂಕರ್ ಬಸವಣ್ಣನವರ ಕೆಲವು ಮುಖ್ಯ ವಚನಗಳನ್ನು ಗಾಯನ ಮಾಡಿ ಬಸವಣ್ಣನವರನ್ನು ಓದುವುದರಿಂದ ತಿಳಿಯುವುದರಿಂದ ನಮ್ಮ ವ್ಯಕ್ತಿತ್ವ ಪರಿಪೂರ್ಣವಾಗುತ್ತದೆ. ಆದ್ದರಿಂದ ಇಂತಹ ಮಹನೀಯರನ್ನು ಓದಿ ತಿಳಿಯುವುದನ್ನು ನಮ್ಮ ಜೀವನ ಮಾರ್ಗವನ್ನಾಗಿ ಕೊಳ್ಳಬೇಕು ಎಂದು ಮನವಿ ಮಾಡಿದರು.

ಬಸವಣ್ಣನವರ ಜೀವನ ಮತ್ತು ಸುಧಾರಣೆಗಳ ಕೆಲವು ವಿಶಿಷ್ಟ ಹೇಳಿಕೆಗಳನ್ನ ಸಂಯೋಜಿಸಿ ವಿವರಿಸುತ್ತಾ ಎಸ್.ಎಂ. ಅಮೃತ್ ಕುಮಾರ್ ಕಾರ್ಯಕ್ರಮವನ್ನು ನಿರ್ವಹಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಸದಸ್ಯೆ ಅಣ್ಣಮ್ಮ, ಸೌಭಾಗ್ಯ , ಕಸಾಪ ಕಾರ್ಯದರ್ಶಿ ಕೆ.ಎಂ.ರೆಡ್ಡಪ್ಪ, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಪಟೇಲ್, ಜಿಲ್ಲಾ ಸದಸ್ಯರಾದ ನಾರಾಯಣಸ್ವಾಮಿ, ಮುನಿನಾರಾಯಣಪ್ಪ, ಸತೀಶ್ ಕುಮಾರ್, ವಿಶ್ವವಿದ್ಯಾಲಯ ಕಾಲೇಜಿನ ಎನ್. ಮಹೇಶ್ , ನಾಗರಾಜ್ , ಸಂತೋಷ್, ಮಂಜುಳಾ ಹಾಗೂ ಬಿಎಡ್ ಶಿಕ್ಷಣಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಲಿತ, ಶೋಷಿತರ ಆಶಾ ಕಿರಣ ಅಂಬೇಡ್ಕರ್
ಮಹಿಳಾ ಮೀಸಲು ವಿಧೇಯಕ ಸೋಲಿಗೆ ಇಂಡಿಯಾ ಕಾರಣ