ಹರಪನಹಳ್ಳಿ: ವಿಶ್ವಗುರು, ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರರ ತತ್ವಾದರ್ಶಗಳು ಸಮಾಜಕ್ಕೆ ಯಾವಾಗಲೂ ದಾರಿ ದೀಪ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಮಾತು ಯಾವಾಗಲೂ ಪ್ರಸ್ತುತ ಎಂದ ಅವರು, ಬಸವಣ್ಣನವರು ಸಮಾನತೆಯ ಸಂದೇಶ ಸಾರಿದರು ಎಂದು ಹೇಳಿದರು.
ಜಾತಿ, ಜಾತಿ ಎಂದು ಹೊಡೆದಾಡದೆ ಜಾತ್ಯೀತೀತವಾಗಿ ಬದುಕಬೇಕು ಎಂದ ಅವರು, ವಚನ ಸಾಹಿತ್ಯ ಎಲ್ಲರೂ ಅಭ್ಯಾಸ ಮಾಡಿ ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಚಿದಾನಂದಗುರುಸ್ವಾಮಿ, ಬಸವಣ್ಣನವರು ಸಾಮಾಜಿಕ, ಆರ್ಥಿಕ ಕ್ರಾಂತಿ ಮಾಡಿ ಬದುಕಿನ ಪಾಠ ಹೇಳಿಕೊಟ್ಟರು, ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ವಚನ ಬರೆದರು ಎಂದು ಹೇಳಿದರು.
ಸಮಾನತೆಯ ಹರಿಕಾರ ಬಸವಣ್ಣ, ಅವರ ವಚನಗಳನ್ನು ಓದಿ ಅರ್ಥ ಮಾಡಿಕೊಂಡು ಮಾನವನಾಗಿ ಬದುಕಿದರೆ ಜೀವನ ಸಾರ್ಥಕ ಎಂದು ನುಡಿದರು.
ಸಾಹಿತಿ ಇಸ್ಮಾಯಿಲ್ ಯಲಿಗಾರ ಮಾತನಾಡಿ, ಮೌಢ್ಯದ ವಿರುದ್ಧ ಹೋರಾಟ ಮಾಡಿ ಸಮ ಸಮಾಜ ನಿರ್ಮಾಣದಲ್ಲಿ ಬಸವಣ್ಣನವರ ಪಾತ್ರ ದೊಡ್ಡದು ಎಂದರು.ಬಸವಣ್ಣ ಕೆಳವರ್ಗದ ಶರಣರಿಗೆ ಸಮಾನತೆಯ ಅವಕಾಶ ಮಾಡಿಕೊಟ್ಟರು ಎಂದ ಅವರು, ಬಸವಣ್ಣ ಸೇರಿದಂತೆ ಯಾವುದೇ ದಾರ್ಶನಿಕರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ ಎಂದು ತಿಳಿಸಿದರು.
ತಹಸೀಲ್ದಾರ ಬಿ.ವಿ. ಗಿರೀಶಬಾಬು, ತಾಪಂ ಕಾರ್ಯನಿರ್ವಣಾಧಿಕಾರಿ ವೈ.ಎಚ್. ಚಂದ್ರಶೇಖರ, ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ನಾಮನಿರ್ದೇಶಿತ ಸದಸ್ಯೆ ಸುಮಾ ಜಗದೀಶ, ವೀರಶೈವ ಮಹಾಸಭಾದ ಪ್ರದಾನ ಕಾರ್ಯದರ್ಶಿ ಸಿ.ಎಂ. ಕೊಟ್ರಯ್ಯ, ಮಲ್ಲಿಕಾರ್ಜುನ ಕಲ್ಮಟ, ಟಿ.ಎಂ. ಶಿವಶಂಕರ, ಪ್ರಭಾಕರ ಕನ್ನಿಹಳ್ಳಿ, ಟಿ.ಎಚ್.ಎಂ. ಮಲ್ಲಿಕಾರ್ಜುನ, ಪಿ.ಬಿ. ಗೌಡ, ಎಚ್.ಎಂ. ಜಗದೀಶ, ಸಂಗಮೇಶ ಕಡೇಮನಿ, ಸಾವಳಗಿ ನಾಗರಾಜ, ದೊಡ್ಡಬಸವರಾಜ ಮುಲಾಲಿ, ಬಿಆರ್ ಸಿ ಹೊನ್ನತ್ತೆಪ್ಪ, ಬಿಸಿಎಂ ವಿಸ್ತರಣಾಧಿಕಾರಿ ಭೀಮಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.