ಬಸವೇಶ್ವರ ಪ್ರತಿಮೆ ಹೊತ್ತ ಅಲಂಕೃತ ವಾಹನದ ಜೊತೆಗೆ ಮಹಿಳೆಯರು ಪೂರ್ಣಕುಂಭ ಹೊತ್ತು ಹೆಜ್ಜೆ ಹಾಕಿದರು.
ಕನ್ನಡಪ್ರಭ ವಾರ್ತೆ ಮೈಸೂರು
ಬಸವ ಬಳಗಗಳ ಒಕ್ಕೂಟ, ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ, ವೀರಶೈವ- ಲಿಂಗಾಯತ ಸಂಘ ಸಂಸ್ಥೆಗಳು ಶನಿವಾರ ಆಯೋಜಿಸಿದ್ದ ನಮ್ಮ ಬಸವ ಜಯಂತಿ ಅಂಗವಾಗಿ ಶ್ರೀ ಬಸವೇಶ್ವರ ಪ್ರತಿಮೆ ಮೆರವಣಿಗೆಯು ಶನಿವಾರ ಅದ್ಧೂರಿಯಾಗಿ ಜರುಗಿತು.ಷಟ್ಸ್ಥಲ ಧ್ವಜಾರೋಹಣವನ್ನು ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ನೆರವೇರಿಸಿದರು. ನಂತರ ಜೆಎಸ್‌ಎಸ್ ಮಹಾವಿದ್ಯಾಪೀಠದ ಬಳಿಯ ಶ್ರೀ ಬಸವೇಶ್ವರ ಪ್ರತಿಮೆಗೆ ಶಾಸಕ ಜಿ.ಟಿ. ದೇವೇಗೌಡ ಪುಷ್ಪನಮನ ಸಲ್ಲಿಸುವ ಮೂಲಕ ಮರವಣಿಗೆಗೆ ಚಾಲನೆ ನೀಡಿದರು.ಬಸವೇಶ್ವರ ಪ್ರತಿಮೆ ಹೊತ್ತ ಅಲಂಕೃತ ವಾಹನದ ಜೊತೆಗೆ ಮಹಿಳೆಯರು ಪೂರ್ಣಕುಂಭ ಹೊತ್ತು ಹೆಜ್ಜೆ ಹಾಕಿದರು. ರೋಬೋಟ್ ಆನೆಯ ಮೇಲೆ ಬಸವಣ್ಣನ ಭಾವಚಿತ್ರವನ್ನು ಇಟ್ಟು ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು. ಮಂಗಳವಾದ್ಯ, ವೀರಗಾಸೆ, ವಿವಿಧ ಜಾನಪದ ಕಲಾತಂಡಗಳು, ಸ್ತಬ್ಧಚಿತ್ರಗಳು, ಭಜನಾ ಮೇಳಗಳು ಪಾಲ್ಗೊಂಡಿದ್ದವು. ಕಂಸಾಳೆ, ಡೊಳ್ಳು, ನಗಾರಿ, ವೀರಭದ್ರನ ಕುಣಿತದ ಕಲಾವಿದರು ದಾರಿಯುದ್ದಕ್ಕೂ ನೃತ್ಯ ಪ್ರದರ್ಶಿಸಿದರು. ಮಧ್ಯೆ ಮಧ್ಯೆ ತುಂತುರು ಮಳೆಯು ಮೆರವಣಿಗೆಗೆ ಮೆರುಗು ಹೆಚ್ಚಿಸಿತು.ಗನ್ ಹೌಸ್ ವೃತ್ತದಿಂದ ಆರಂಭವಾದ ಮೆರವಣಿಗೆಯು ನ್ಯೂ ಸಯ್ಯಾಜಿರಾವ್ ರಸ್ತೆ, ಕೆ.ಆರ್. ವೃತ್ತ, ಡಿ. ದೇವರಾಜ ಅರಸು ರಸ್ತೆ, ಜೆಎಲ್ ಬಿ ರಸ್ತೆ, ಮೆಟ್ರೋಪೋಲ್ ವೃತ್ತ, ಹುಣಸೂರು ರಸ್ತೆಯ ಮೂಲಕ ಕಲಾಮಂದಿರಕ್ಕೆ ತಲುಪಿತು.ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕುಂದೂರು ಮಠದ ಶ್ರೀ ಡಾ. ಶರತ್ಚಂದ್ರ ಸ್ವಾಮೀಜಿ, ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ, ಶಾಸಕರಾದ ಎಚ್.ಎಂ. ಗಣೇಶ್ ಪ್ರಸಾದ್, ಟಿ.ಎಸ್. ಶ್ರೀವತ್ಸ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.