ಕನ್ನಡಪ್ರಭ ವಾರ್ತೆ ಕಲಬುರಗಿ
12ನೇ ಶತಮಾನದಲ್ಲಿ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿ ಸಮಾನತೆ ಸಂದೇಶ ಸಾರಿ ಜನರಲ್ಲಿ ನಾವೆಲ್ಲ ಒಂದು ಎನ್ನುವ ಅರಿವು ಮೂಡಿಸಿದವರು ವಿಶ್ವಗುರು ಬಸವಣ್ಣನವರು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಹೇಳಿದರು.ಜಗತ್ ವೃತ್ತದಲ್ಲಿರುವ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 891 ಜಯಂತ್ಯುತ್ಸವ ಅಂಗವಾಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಸವಣ್ಣ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಗುರು ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಅವರು ಮಾತನಾಡಿದರು.
ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ, ಮೌಢ್ಯತೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿದ್ದಾರೆ. ಅವರ ಆದರ್ಶ, ತತ್ವ, ಸಿದ್ಧಾಂತಗಳು ನಾವು ಜೀವನದಲ್ಲಿ ಆಳವಡಿಸಿಕೊಳ್ಳಬೇಕು. ಚುನಾವಣೆ ನೀತಿ ಸಂಹಿತೆ ಇದ್ದರೂ ಕೂಡ ಪ್ರತಿವರ್ಷದಂತೆ ಈ ವರ್ಷವೂ ಬಸವೇಶ್ವರ ಜಯಂತಿ ಆಚರಿಸುವುದು ತುಂಬಾ ಸಂತೋಷ ತಂದಿದೆ ಎಂದರು.ಸುಲಫಲಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಷಟಸ್ಥಲ ಧ್ವಜಾರೋಹಣ ನೇರವೇರಿಸಿದರು.
ಈ ಸಂದರ್ಭದಲ್ಲಿ ನಗರ ಪೋಲಿಸ್ ಆಯುಕ್ತ ಚೇತನ್ ಆರ್. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೈ, ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಮಹಾನಗರ ಪಾಲಿಕೆಯ ಉಪ ಆಯುಕ್ತ ಮಾಧವ ಗಿತ್ತೆ, ಸಹಾಯಕ ಆಯುಕ್ತೆ ರೂಪಿಂದ್ರ ಕೌರ ಬಸವ ಸಮಿತಿ ಅಧ್ಯಕ್ಷ ವಿನೋದ ಪಾಟೀಲ ಸರಡಗಿ ಅಖಿಲ ಭಾರತ ವೀರ ಶೈವ ಲಿಂಗಾಯಿತ ಸಮಾಜದ ಶರಣಕುಮಾರ ಮೋದಿ, ಜಿಲ್ಲಾ ವೀರಶೈವ ಸಮಾಜ ಅರುಣಕುಮಾರ ಎಸ್. ಪಾಟೀಲ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಎಸ್ ರಡ್ಡಿ, ಉಪಾಧ್ಯಕ್ಷ ಉದಯಕುಮಾರ ಪಾಟೀಲ, ಕಾರ್ಯದರ್ಶಿ ರಮೇಶ ತೆಗ್ಗಿನಮನೆ, ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಮಾಜ ಮುಖಂಡರು ಹಾಗೂ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.