10 ತಿಂಗಳಿಂದ ಬೆಂಗಳೂರಿನ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ವಿವಿಗಿಲ್ಲ ಪೂರ್ಣಾವಧಿ ಕುಲಪತಿ!

KannadaprabhaNewsNetwork |  
Published : Apr 12, 2025, 12:47 AM ISTUpdated : Apr 12, 2025, 07:27 AM IST
ಬೇಸ್‌ ವಿಶ್ವವಿದ್ಯಾಲಯ | Kannada Prabha

ಸಾರಾಂಶ

  ಉತ್ಕೃಷ್ಠ ಅರ್ಥಶಾಸ್ತ್ರ ವಿಶ್ವವಿದ್ಯಾಲಯ ಬೆಳೆಸಬೇಕೆಂಬ ಉದ್ದೇಶದಿಂದ ಸ್ಥಾಪಿಸಲಾದ ಬೆಂಗಳೂರಿನ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌(ಬೇಸ್‌) ವಿಶ್ವವಿದ್ಯಾಲಯದ ಹಿಂದಿನ ಕುಲಪತಿ ಅಧಿಕಾರಾವಧಿ ಪೂರ್ಣಗೊಂಡು ವರ್ಷ ಕಳೆಯುತ್ತಿದ್ದರೂ ಹೊಸ ಕುಲಪತಿ ನೇಮಕ ಮಾಡಿಲ್ಲ.

ಲಿಂಗರಾಜು ಕೋರ

 ಬೆಂಗಳೂರು :  ದಕ್ಷಿಣ ಭಾರತದಲ್ಲಿ ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌(ಎಲ್‌ಎಸ್‌ಇ) ಮಾದರಿಯ ಉತ್ಕೃಷ್ಠ ಅರ್ಥಶಾಸ್ತ್ರ ವಿಶ್ವವಿದ್ಯಾಲಯ ಬೆಳೆಸಬೇಕೆಂಬ ಉದ್ದೇಶದಿಂದ ಸ್ಥಾಪಿಸಲಾದ ಬೆಂಗಳೂರಿನ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌(ಬೇಸ್‌) ವಿಶ್ವವಿದ್ಯಾಲಯದ ಹಿಂದಿನ ಕುಲಪತಿ ಅಧಿಕಾರಾವಧಿ ಪೂರ್ಣಗೊಂಡು ವರ್ಷ ಕಳೆಯುತ್ತಿದ್ದರೂ ಹೊಸ ಕುಲಪತಿ ನೇಮಕ ಮಾಡಿಲ್ಲ.

ಬೇಸ್‌ನ ಮೊದಲ ಕುಲಪತಿಯಾಗಿ ನೇಮಕಗೊಂಡಿದ್ದ ಅರ್ಥಶಾಸ್ತ್ರಜ್ಞ ಡಾ.ಎನ್‌.ಆರ್‌.ಭಾನುಮೂರ್ತಿ ಅವರ ನಾಲ್ಕು ವರ್ಷಗಳ ಅಧಿಕಾರಾವಧಿ 2024ರ ಜೂನ್‌ 21ಕ್ಕೆ ಮುಕ್ತಾಯಗೊಂಡಿದೆ. ನಂತರ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳ ಅಧ್ಯಯನ ಸಂಸ್ಥೆ(ಐಸೆಕ್‌) ನಿರ್ದೇಶಕ ಪ್ರೊ.ಡಿ.ರಾಜಶೇಖರ್‌ ಅವರನ್ನು ಪ್ರಭಾರ ಕುಲಪತಿಯಾಗಿ ಸರ್ಕಾರ ನೇಮಕ ಮಾಡಿದೆ. ವರ್ಷ ಕಳೆಯುತ್ತಿದ್ದರೂ ಸರ್ಕಾರ ಒಂದು ಕುಲಪತಿ ಹುದ್ದೆ ಭರ್ತಿ ಮಾಡಲಾಗುವುದಿಲ್ಲ ಎಂದರೆ ಈ ವಿವಿ ಸ್ಥಾಪನೆ ಉದ್ದೇಶವಾದರೂ ಹೇಗೆ ಈಡೇರುತ್ತದೆ ಎನ್ನುವುದು ಶಿಕ್ಷಣ ತಜ್ಞರ ಪ್ರಶ್ನೆ.

ಹಿಂದಿನ ಯುಪಿಎ ಸರ್ಕಾರ ಡಾ.ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ವಿಶೇಷ ಅರ್ಥಶಾಸ್ತ್ರ ವಿಶ್ವವಿದ್ಯಾಲಯದ ಅಗತ್ಯದ ಕುರಿತು ನಡೆದ ಚರ್ಚೆ ವೇಳೆ ಹುಟ್ಟುಕೊಂಡಿದ್ದೇ ಬೇಸ್‌ ವಿಶ್ವವಿದ್ಯಾಲಯ. ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಸರ್ಕಾರದ ಕೂಸು ಇದು. ಹೆಚ್ಚಿನ ಎಕನಾಮಿಕ್ಸ್‌ ವಿಶ್ವವಿದ್ಯಾಲಯಗಳು ದೆಹಲಿ, ಮುಂಬೈ ಕೇಂದ್ರಿತವಾಗಿವೆ. ಹೀಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನಲ್ಲಿ ಅರ್ಥಶಾಸ್ತ್ರ ವಿಚಾರದ ಶಿಕ್ಷಣ ಸಂಸ್ಥೆ ಸ್ಥಾಪಿಸುವುದು ಸರಿಯಾದ ಕ್ರಮ ಎಂಬ ನಿರ್ಧಾರಕ್ಕೆ ಬರಲಾಯಿತು. 2018ರಲ್ಲಿ ಬೇಸ್‌ ಅನ್ನು ಆರಂಭಿಸಲಾಯಿತಾದರೂ ಅಧಿಕೃತವಾಗಿ 2019ರಲ್ಲಿ ವಿಶ್ವವಿದ್ಯಾಲಯದ ಸ್ಥಾನಮಾನ ಸಿಕ್ಕಿತು. 2020ರಲ್ಲಿ ಮೊದಲ ಕುಲಪತಿ ನೇಮಕ ಮಾಡಲಾಯಿತು. ಅವರ ಅಧಿಕಾರಾವಧಿ ಪೂರ್ಣಗೊಂಡು 10 ತಿಂಗಳು ಕಳೆಯುತ್ತಿದೆ. ಆದರೆ, ಹೊಸ ಪೂರ್ಣಾವಧಿ ಕುಲಪತಿ ನೇಮಕ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

ಹೊಸ ಕುಲಪತಿ ಹುದ್ದೆಗೆ ಕಳೆದ ಜೂ.14ರಂದೇ ಉನ್ನತ ಶಿಕ್ಷಣ ಇಲಾಖೆ ಅರ್ಹ ಪ್ರಾಧ್ಯಾಪಕರು, ಶಿಕ್ಷಣ ತಜ್ಞರಿಂದ ಅರ್ಜಿ ಆಹ್ವಾನಿಸಿತ್ತು. ಆದರೆ, ಕುಲಪತಿ ಆಯ್ಕೆಗೆ ರಚಿಸಿದ್ದ ಶೋಧನಾ ಸಮಿತಿಯು ಬೇಸ್‌ ರಾಜ್ಯ ಸರ್ಕಾರ ನಡೆಸುತ್ತಿರುವ ವಿಶ್ವವಿದ್ಯಾಲಯವೇ ಆದರೂ ರಾಷ್ಟ್ರೀಯ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಈ ವಿವಿಗೆ ಕುಲಪತಿ ಆಯ್ಕೆ ಮಾಡುವಾಗ ಜಾಗತಿಕ ಮಟ್ಟದ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದರೆ ಸಾಲದು, ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಅರ್ಜಿ ಆಹ್ವಾನಿಸಲು ಸಲಹೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ 2025ರ ಜನವರಿ 10ರಂದು ರಾಷ್ಟ್ರವ್ಯಾಪ್ತಿಯಲ್ಲಿ ಜಾಹೀರಾತು ನೀಡಿ ಮತ್ತೆ ಅರ್ಜಿ ಆಹ್ವಾನಿಸಿದೆ. ರಾಜ್ಯ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳ ಹಲವು ತಜ್ಞರು ಅರ್ಜಿ ಸಲ್ಲಿಸಿದ್ದಾರೆ. ಶೋಧನಾ ಸಮಿತಿ ಅವುಗಳಲ್ಲಿ ಅರ್ಹ ಮೂರು ಹೆಸರುಗಳನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಸರ್ಕಾರ ಅದರಲ್ಲಿ ಒಂದು ಹೆಸರು ಅಂತಿಮಗೊಳಿಸಿ ರಾಜ್ಯಪಾಲರಿಗೆ ಕಳುಹಿಸಬೇಕಿದೆ.

ಸದ್ಯ ಪ್ರಭಾರ ಕುಲಪತಿ ಕಾರ್ಯನಿರ್ವಹಿಸುತ್ತಿದ್ದರೂ ಶೈಕ್ಷಣಿಕ, ಆಡಳಿತಾತ್ಮಕ, ನೇಮಕಾತಿ ಸೇರಿ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಪೂರ್ಣಾವಧಿ ಕುಲಪತಿ ನೇಮಕಾತಿ ಪ್ರಕ್ರಿಯೆಯನ್ನು ಹೆಚ್ಚು ಕಾಲ ವಿಳಂಬ ಮಾಡಿದಷ್ಟೂ ವಿವಿಯ ಎಲ್ಲ ರೀತಿಯ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವಿಶ್ರಾಂತ ಕುಲಪತಿ ಡಾ.ರಾಜಾಸಾಬ್‌.

ವಿದ್ಯಾರ್ಥಿಗಳ ಸಂಖ್ಯೆ 1000ಕ್ಕೆ ಹೆಚ್ಚಿಸುವ ಗುರಿ 

ಬೇಸ್‌ ಆರಂಭವಾಗಿ ಆರು ವರ್ಷಗಳು ಕಳೆದಿವೆ. ಆರಂಭದಲ್ಲಿ 48 ವಿದ್ಯಾರ್ಥಿಗಳಿಂದ ಆರಂಭವಾದ ವಿವಿ ಪ್ರಸ್ತುತ ಸುಮಾರು 300 ವಿದ್ಯಾರ್ಥಿಗಳು ವಿವಿಧ ಅರ್ಥಶಾಸ್ತ್ರ ಹಾಗೂ ಸಮಾಜ ವಿಜ್ಞಾನ ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಐದು ವರ್ಷದ ಇಂಟಿಗ್ರೇಟೆಡ್‌ ಎಕನಾಮಿಕ್ಸ್‌ ಕೋರ್ಸನ್ನು ವಿವಿ ಹೊಂದಿದೆ. ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಕನಿಷ್ಠ 1000ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎನ್ನುತ್ತಾರೆ ವಿವಿಯ ಅಧಿಕಾರಿಗಳು. ಕಾಮನ್ ಯೂನಿವರ್ಸಿಟಿ ಎಂಟ್ರೆನ್ಸ್‌ ಟೆಸ್ಟ್‌(ಸಿಯುಇಟಿ) ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ವಿವಿಗೆ ವಿದ್ಯಾರ್ಥಿಗಳ ಆಂತರಿಕ ಆದಾಯ ಬಹಳ ಕಡಿಮೆ ಇದೆ. ಸರ್ಕಾರದ ಅನುದಾನವೇ ವಿವಿ ನಡೆಸಲು ಆಧಾರವಾಗಿದೆ.

2018ರಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ 2022ರಲ್ಲಿ ಮೊದಲ ಘಟಿಕೋತ್ಸವ ನಡೆಸಿ ಪದವಿ ಪ್ರದಾನ ಮಾಡಲಾಯಿತು. ನಂತರ ಪ್ರತೀ ವರ್ಷ ಪದವಿ ಪ್ರದಾನ ನಡೆಸಲಾಗುತ್ತಿದೆ. ಪ್ರಸ್ತುತ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೇ.90ಕ್ಕೂ ಹೆಚ್ಚು ಮಂದಿಗೆ ಪ್ರತೀ ವರ್ಷ ಅತ್ಯುತ್ತಮ ಉದ್ಯೋಗಾವಕಾಶಗಳು ದೊರೆಯುತ್ತಿವೆ.

ಜ್ಞಾನಭಾರತಿಯಲ್ಲಿ 43 ಎಕರೆ ಕ್ಯಾಂಪಸ್‌ 

ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಬೇಸ್‌ಗಾಗಿ 43 ಎಕರೆ ಕ್ಯಾಂಪಸ್‌ ನೀಡಲಾಗಿದೆ. ಕ್ಯಾಂಪಸ್‌ ಕಟ್ಟಡ ನಿರ್ಮಾಣಕ್ಕಾಗಿ ಮೊದಲ ಹಂತದಲ್ಲಿ ಸರ್ಕಾರ 201 ಕೋಟಿ ರು. ಬಿಡುಗಡೆ ಮಾಡಿತ್ತು. ಕ್ಯಾಂಪಸ್‌ನಲ್ಲಿ 250 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ 13 ಬ್ಲಾಕ್‌ಗಳನ್ನು ಪ್ರಧಾನಿ ಮೋದಿ ಅವರು 2022ರಲ್ಲಿ ಉದ್ಘಾಟಿಸಿದ್ದರು.

ಕರ್ನಾಟಕ ಮಾತ್ರವಲ್ಲದೆ ದೇಶದ ಬೇರೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ಆದರೆ ಶೇ.60ರಷ್ಟು ಸೀಟುಗಳನ್ನು ಕರ್ನಾಟಕ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. ಉಳಿದ 40ರಷ್ಟು ಸೀಟುಗಳನ್ನು ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ಮತ್ತು ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಮೀಸಲಾತಿ ಒದಗಿಸಲಾಗುತ್ತಿದೆ. ವಿವಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವ ಉದ್ದೇಶದೊಂದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಬರುವ ಶೈಕ್ಷಣಿಕ ವರ್ಷಗಳಲ್ಲಿ ವಿದೇಶಿ ವಿದ್ಯಾರ್ಥಿಗಳಿಗೂ ಪ್ರವೇಶ ಕಲ್ಪಿಸಲು ಯೋಜಿಸಲಾಗಿದೆ ಎಂದು ವಿವಿಯ ಉನ್ನತ ಅಧಿಕಾರಿಗಳು ಹೇಳುತ್ತಿದ್ದಾರೆ.

ಶೀಘ್ರ ರಾಜ್ಯಪಾಲರಿಗೆ ಒಂದು ಹೆಸರು ಶಿಫಾರಸು

ಬೇಸ್‌ ವಿಶ್ವವಿದ್ಯಾಲಯದ ನೂತನ ಕುಲಪತಿ ಹುದ್ದೆಗೆ ಸರ್ಚ್‌ ಕಮಿಟಿ ಮೂರು ಹೆಸರುಗಳನ್ನು ಶಿಫಾರಸು ಮಾಡಿದೆ. ಶೀಘ್ರ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಒಂದು ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ಕಳುಹಿಸಲಾಗುವುದು. ರಾಜ್ಯಪಾಲರು ಆ ಹೆಸರನ್ನು ಕುಲಪತಿ ಸ್ಥಾನಕ್ಕೆ ನೇಮಕ ಮಾಡಬಹುದು. ಒಂದು ವೇಳೆ ತಿರಸ್ಕರಿಸಿದರೆ ಕಾರಣ ನೀಡಬೇಕು. ಆದರೆ, ಬೇಸ್‌ ಕಾಯ್ದೆಯ ಅನುಸಾರ 2ನೇ ಬಾರಿಗೆ ಸರ್ಕಾರ ಕಳುಹಿಸಿದ ಹೆಸರನ್ನು ರಾಜ್ಯಪಾಲರು ಒಪ್ಪಿ ನೇಮಕಾತಿ ಆದೇಶ ಮಾಡಬೇಕಾಗುತ್ತದೆ.

- ಡಾ.ಎಂ.ಸಿ.ಸುಧಾಕರ್‌, ಉನ್ನತ ಶಿಕ್ಷಣ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ