ಕಟ್ಟಡ ಕಾರ್ಮಿಕರಿಗೆ ದೊರಕದ ಮೂಲಭೂತ ಸೌಲಭ್ಯ: ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಪಿ. ಶ್ರೀನಿವಾಸ್

KannadaprabhaNewsNetwork | Published : Jun 29, 2024 12:33 AM

ಸಾರಾಂಶ

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾನೂನು ಬದ್ಧವಾಗಿ ಇದುವರೆಗೂ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ. ಈ ಬಗ್ಗೆ ಇಲಾಖೆಯ ಅಧಿಕಾರಿಗಳ ಜೊತೆಗೂ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಜಾರಿ ಮಾಡಿಲ್ಲ, ಶೈಕ್ಷಣಿಕ ಸಹಾಯಧನ, ಮದುವೆ ಸಹಾಯಧನ, ವೈದ್ಯಕೀಯ ಪರಿಹಾರಕ್ಕೆ ಸಲ್ಲಿಕೆಯಾದ ಸಾವಿರಾರು ಅರ್ಜಿಗಳು ಕಳೆದ ಒಂದು ವರ್ಷದಿಂದ ಕೊಳೆಯುತ್ತಿವೆ. ಪಿಂಚಣಿದಾರರ ಪಿಂಚಣಿ ನಿಂತುಹೋಗಿದೆ. ಕಾರ್ಮಿಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ.

ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹ । ಡೀಸಿ ಕಚೇರಿ ಮುಂದೆ ಜಿಲ್ಲಾ ಕಟ್ಟಡ ಕಾರ್ಮಿಕರ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಕೋಲಾರ

ರಾಜ್ಯಾದ್ಯಂತ ಕಟ್ಟಡ ನಿರ್ಮಾಣ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಜಿಲ್ಲಾ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿ ನೇತೃತ್ವದಲ್ಲಿ ಡೀಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಸಿಐಟಿಯು ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಪಿ. ಶ್ರೀನಿವಾಸ್ ಮಾತನಾಡಿ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾನೂನು ಬದ್ಧವಾಗಿ ಇದುವರೆಗೂ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ. ಈ ಬಗ್ಗೆ ಇಲಾಖೆಯ ಅಧಿಕಾರಿಗಳ ಜೊತೆಗೂ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಜಾರಿ ಮಾಡಿಲ್ಲ, ಶೈಕ್ಷಣಿಕ ಸಹಾಯಧನ, ಮದುವೆ ಸಹಾಯಧನ, ವೈದ್ಯಕೀಯ ಪರಿಹಾರಕ್ಕೆ ಸಲ್ಲಿಕೆಯಾದ ಸಾವಿರಾರು ಅರ್ಜಿಗಳು ಕಳೆದ ಒಂದು ವರ್ಷದಿಂದ ಕೊಳೆಯುತ್ತಿವೆ. ಪಿಂಚಣಿದಾರರ ಪಿಂಚಣಿ ನಿಂತುಹೋಗಿದೆ. ಕಾರ್ಮಿಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಶೈಕ್ಷಣಿಕ ಸಹಾಯಧನ ಬಿಡುಗಡೆಗಾಗಿ ನಾವು ಕೊನೆಗೆ ಹೈಕೋರ್ಟ್ ಮೆಟ್ಟಿಲು ಹತ್ತಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರಕಾರಕ್ಕೆ ಕಟ್ಟಡ ಕಾರ್ಮಿಕರು ಕೇಳದಿದ್ದರೂ ಲ್ಯಾಪ್‌ಟಾಪ್, ವೈದ್ಯಕೀಯ ತಪಾಸಣೆ, ಪೌಷ್ಟಿಕಾಂಶ (ಆಯುರ್ವೇದ) ಕಿಟ್ ಗಳನ್ನು ಖರೀದಿಸಿ ಇದಕ್ಕಾಗಿ ಮಂಡಳಿಯ ನೂರಾರು ಕೋಟಿ ರು. ಖರ್ಚು ಮಾಡಿದ್ದಾರೆ. ಇದರಲ್ಲಿ ಭಾರೀ ಭ್ರಷ್ಟಾಚಾರ ನಡೆಸಿದ್ದಾರೆ. ಖರೀದಿ ಮೇಲಿರುವ ಕಲ್ಯಾಣ ಮಂಡಳಿ ಉತ್ಸುಕತೆ, ಡಿಬಿಟಿ ಮೂಲಕ ಕಾರ್ಮಿಕರಿಗೆ ನೇರವಾಗಿ ಸಂದಾಯವಾಗುವ ಸೌಲಭ್ಯಗಳನ್ನು ಕೊಡಲು ಕಾಣುತ್ತಿಲ್ಲ. ನೋಂದಣಿ ಮತ್ತು ಮರುನೋಂದಣಿಗಾಗಿ ಸಲ್ಲಿಸಲಾದ ಅರ್ಜಿಗಳನ್ನು ಸಕಾರಣವಿಲ್ಲದೇ ರದ್ದುಗೊಳಿಸಲಾಗುತ್ತಿದೆ. ಇದು ಕಲ್ಯಾಣ ಮಂಡಳಿಗೆ ಕಾರ್ಮಿಕರ ಹಿತಾಸಕ್ತಿ ಮುಖ್ಯವಾಗಿಲ್ಲ, ಸಾಮಾಜಿಕ ಸುರಕ್ಷೆ ನೀಡುವ ಉದ್ದೇಶದಿಂದ ಸ್ಥಾಪಿಸಲಾದ ಕಲ್ಯಾಣ ಮಂಡಳಿಯ ಸದುದ್ದೇಶವು ಮಣ್ಣುಪಾಲಾಗಿದೆ. ಕಲ್ಯಾಣ ಮಂಡಳಿ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ, ಬಡಜನ ವಿರೋಧಿ ನಡೆಯನ್ನು ಕಟ್ಟಡ ಕಾರ್ಮಿಕರಾದ ನಾವು ಖಂಡಿಸುತ್ತೇವೆ. ಸರಕಾರದ ಈ ನಡೆಯನ್ನು ಸರಿಪಡಿಸಿಕೊಳ್ಳಬೇಕೆಂದು ಆಗ್ರಹಿಸಿದರು.

ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಹೊನ್ನೇನಹಳ್ಳಿ ಯಲ್ಲಪ್ಪ ಮಾತನಾಡಿ, ಶೈಕ್ಷಣಿಕ ಸಹಾಯಧನ ಸಂಬಂಧಿಸಿ ಹೊರಡಿಸಲಾಗಿದ್ದ ೨೦೨೩ರ ಅಧಿಸೂಚನೆಯನ್ನು ರದ್ದುಮಾಡಿ, ಕರ್ನಾಟಕ ಹೈಕೋರ್ಟ್ ಆದೇಶದಂತೆ ಕನಿಷ್ಠ ಕಾಲೇಜು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ ನೀಡಬೇಕು. ಅರ್ಜಿ ಸಲ್ಲಿಕೆ ಅವಧಿಯನ್ನು ಆಗಸ್ಟ್ ೩೧ ರವರೆಗೆ ವಿಸ್ತರಿಸಬೇಕು ನೋಂದಣಿ ಮತ್ತು ಮರು ನೋಂದಣಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸಲಾಗುತ್ತಿದೆ. ಇದು ನಿಲ್ಲಬೇಕು. ಅರ್ಜಿ ಸಲ್ಲಿಕೆಯಲ್ಲಿ ದೋಷವಿದ್ದರೂ ನೈಜ ಕಾರ್ಮಿಕರಾಗಿದ್ದಲ್ಲಿ ಅವರ ಅರ್ಜಿಯನ್ನು ಮಾನ್ಯ ಮಾಡಬೇಕು. ಹಾಗೂ ಕಾಲಮಿತಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಕೆಲವೆಡೆ ಬಿಲ್ಡಿಂಗ್ ಲೈಸನ್ಸ್ ಸಲ್ಲಿಸದಿರುವ ಕಾರಣ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಪಿಂಚಣಿಗಾಗಿ ಸಲ್ಲಿಸಲಾದ ಸಾವಿರಾರು ಅರ್ಜಿಗಳನ್ನು ವಿಲೇವಾರಿ ಮಾಡಬೇಕು, ಕಾರ್ಮಿಕ ಇಲಾಖೆಗಾಗಿ ಪ್ರತ್ಯೇಕವಾಗಿ ತರಲಾದ ಹೊಸ ಸಾಫ್ಟ್ ವೇರ್ ನಲ್ಲಿ ಅನೇಕ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಸಕಾಲದಲ್ಲಿ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ,ಇದನ್ನು ಸರಿಪಡಿಸಬೇಕು. ಕಳೆದ ವರ್ಷದಲ್ಲಿ ಕಲ್ಯಾಣ ಮಂಡಳಿಯಿಂದ ಲ್ಯಾಪ್ ಟಾಪ್ ಖರೀದಿ, ಮಹಿಳೆಯರಿಗಾಗಿ ಪ್ಯಾಡ್ ಖರೀದಿ, ಖಾಸಗಿ ಆಸ್ಪತ್ರೆಗಳ ಮೂಲಕ ವೈದ್ಯಕೀಯ ತಪಾಸಣೆ ಹೆಸರಲ್ಲಿ ಭಾರಿ ಅವ್ಯವಹಾರ ನಡೆದಿದೆ. ಈ ಎಲ್ಲ ಖರೀದಿಗಳ ತನಿಖೆಯಾಗಬೇಕು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಎಲ್ಲ ಖರೀದಿ ಅವ್ಯವಹಾರಗಳ ಬಗ್ಗೆಯೂ ತನಿಖೆಯಾಗಬೇಕು. ಭ್ರಷ್ಟಾಚಾರ, ಲಂಚಗುಳಿತನದಿಂದ ಕಲ್ಯಾಣ ಮಂಡಳಿಯನ್ನು ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಭೀಮರಾಜ್, ವಿಜಯಕೃಷ್ಣ, ಪ್ರಭಾಕರ್, ಆಶಾ, ಶಿವಣ್ಣ, ಕೃಷ್ಣಮೂರ್ತಿ, ಪ್ರವೀಜ್ ತಾಜ್, ನವೀನ್ ಕುಮಾರ್ ಇದ್ದರು.

----------

ರಾಜ್ಯಾದ್ಯಂತ ಕಟ್ಟಡ ನಿರ್ಮಾಣ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಜಿಲ್ಲಾ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿ ಪ್ರತಿಭಟನೆ ನಡೆಸಿತು.

Share this article