ಕನ್ನಡಪ್ರಭ ವಾರ್ತೆ ಮಣಿಪಾಲಬೆಂಗಳೂರಿನಲ್ಲಿ ಶನಿವಾರ ನಡೆದ ‘ಆದಿವಾಸಿಗಳ ಜಗತ್ತು ಮತ್ತು ಅಭಿವೃದ್ಧಿಯ ಸವಾಲುಗಳು’ ಎಂಬ ವಿಚಾರ ಸಂಕಿರಣದಲ್ಲಿ ಡಾ. ಉಮಾ ರಾಮ್ ಮತ್ತು ಕೆ.ಎಸ್. ರಾಮ್ ಸಂಪಾದಕತ್ವದ ‘ಬಸ್ತರ್ 1862: ಎ ಕೊಲೋನಿಯಲ್ ರಿಪೋರ್ಟ್ ಆ್ಯಂಡ್ ಆನ್ ಆದಿವಾಸಿ ರೆಸಿಸ್ಟನ್ಸ್’ ಎಂಬ ಪುಸ್ತಕವನ್ನು ಯುನೆಸ್ಕೋದ ಮಾಜಿ ರಾಯಭಾರಿ ಡಾ. ಚಿರಂಜೀವ್ ಸಿಂಗ್ ಬಿಡುಗಡೆ ಮಾಡಿದರು.ನಂತರ ಮಾತನಾಡಿದ ಅವರು, ‘ಬಸ್ತರ್ 1862’ ಕೃತಿಯು ವಸಾಹತುಶಾಹಿ ಮತ್ತು ಪ್ರಾದೇಶಿಕ ಕಣ್ಣುಗಳ ಮೂಲಕ ಇತಿಹಾಸವನ್ನು ನೋಡುವ ಮಹತ್ವದ ಕೃತಿಯಾಗಿದೆ. ಈ ಕೃತಿಯು ಕ್ಯಾಪ್ಟನ್ ಗ್ಲಾಸ್‌ಫರ್ಡ್‌ರ ವರದಿ ಮತ್ತು ಮಹಾರಾಜ ಪ್ರವೀರ್ ಚಂದ್ರ ಭಂಜದೇವ್‌ರ ಕಥನದ ಕುರಿತು ಚರ್ಚೆ ಉಂಟುಮಾಡಬಲ್ಲ ಕೃತಿಯಾಗಿದೆ. ಲೇಖಕರು ಈ ಕೃತಿಯ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.ವಿಚಾರ ಸಂಕಿರಣದಲ್ಲಿ ಹಾಜರಿದ್ದ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ಪ್ರಾದೇಶಿಕ ನಿರ್ದೇಶಕಿ ಡಾ. ಎಸ್. ಕೆ. ಅರುಣಿ, ಈ ಪುಸ್ತಕವು ಒಂದು ಮಹತ್ವದ ಪ್ರಮುಖ ಐತಿಹಾಸಿಕ ಮೂಲ ದಾಖಲೆಯಾಗಿ ರೂಪುಗೊಂಡಿದೆ ಎಂದು ಹೇಳಿದರು.ಹಿಂದೆ ಬಸ್ತರ್‌ನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಪ್ರವೀರ್ ಕೃಷ್ಣ ಮಾತನಾಡಿ, ಸೂಕ್ಷ್ಮ-ಮಾರುಕಟ್ಟೆಗಳನ್ನು ಕಲ್ಪಿಸಿದ ಕಾರಣ ಬಸ್ತರ್‌ನ ಆದಿವಾಸಿಗಳು ಹುಣಸೆ ಮತ್ತು ಇತರ ಅರಣ್ಯಮೂಲದ ಉತ್ಪನ್ನಗಳಿಂದ ತಮ್ಮ ಆದಾಯ ಹೆಚ್ಚಿಸಲು ಸಹಾಯವಾಗಿದೆ ಎಂದು ಹೇಳಿದರು.