ಬಾಗಲಕೋಟೆ : ಕರ್ನಾಟಕ ಬಯಲಾಟ ಅಕಾಡೆಮಿಯ 2023-24 ಹಾಗೂ 2024-25ನೇ ಸಾಲಿನ ಬಯಲಾಟ ಗೌರವ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಬಯಲಾಟ ಕಲಾ ಪ್ರಕಾರಗಳಿಗೆ ನೀಡಿರುವ ಅಮೂಲ್ಯ ಹಾಗೂ ಅನನ್ಯ ಸೇವೆಯನ್ನು ಪರಿಗಣಿಸಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್.ದುರ್ಗಾದಾಸ ಹೇಳಿದರು.
ಪ್ರತಿ ಸಾಲಿಗೆ 5 ಜನರಿಗೆ ಗೌರವ ಪ್ರಶಸ್ತಿ ಹಾಗೂ 10 ಜನರಿಗೆ ವಾರ್ಷಿಕ ಪ್ರಶಸ್ತಿ ನೀಡಲಾಗುತ್ತಿದೆ. ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ ₹50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ, ವಾರ್ಷಿಕ ಪ್ರಶಸ್ತಿ ವಿಜೇತರಿಗೆ ತಲಾ ₹25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ. 2023 ಮತ್ತು 2024 ನೇ ಸಾಲಿನ ಪ್ರಶಸ್ತಿಗಳ ಜೊತೆಗೆ ಕಳೆದ 2 ವರ್ಷಗಳ ಪ್ರಶಸ್ತಿಗಳಿಗೆ ಆಯ್ಕೆಯಾದವರು ಸೇರಿದಂತೆ ಒಟ್ಟು 4 ವರ್ಷದ ಪ್ರಶಸ್ತಿಗಳನ್ನು ಡಿಸೆಂಬರ್ ಕೊನೆಯ ವಾರದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಹಸ್ತಪ್ರತಿ ಸಂಗ್ರಹಕ್ಕೆ ಸಂಶೋಧಕರ ನೇಮಕ:
ಪ್ರಸಕ್ತ ಸಾಲಿನ ಕಾರ್ಯಕ್ರಮಗಳ ಆಯೋಜನೆಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ಬಯಲಾಟ ಕಲಾವಿದರ ಮಾಹಿತಿ ಹಾಗೂ ಹಸ್ತಪ್ರತಿ ಸಂಗ್ರಹ, ಪ್ರಕಟಣೆಗಾಗಿ 11 ಜನ ಸಂಶೋಧನಾ ಸಹಾಯಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಬೆಳಗಾವಿ ಮತ್ತು ಕಲ್ಬುರ್ಗಿ ವಿಭಾಗದ ಜಿಲ್ಲೆಗಳನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯಾರಂಭ ಮಾಡಲಾಗಿದೆ. ವಿವಿಧ ಜಿಲ್ಲೆ ತಾಲೂಕು, ಹೋಬಳಿ ಮಟ್ಟದಲ್ಲಿ ಬಯಲಾಟ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ, ತೊಗಲು ಗೊಂಬೆ ಕುರಿತಂತೆ ವಿಚಾರ ಸಂಕಿರಣ, ಹಾಡುಗಾರಿಕೆ ಮತ್ತು ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈಗಾಗಲೇ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಸೆಪ್ಟೆಂಬರ್‌ನಲ್ಲಿ ಬೆಳಗಾವಿ ಜಿಲ್ಲೆಯ ಸಣ್ಣಾಟ ಸಮ್ಮೇಳನ, ಅಕ್ಟೋಬರ್‌ನಲ್ಲಿ ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಪಾರಿಜಾತ ಸಮ್ಮೇಳನ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಗೊಂಬೆಯಾಟ, ಅಕ್ಟೋಬರ 29 ಮತ್ತು 30 ರಂದು ಕಲಬುರಗಿ ಜಿಲ್ಲೆಯ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಬಯಲಾಟ ಪರಂಪರೆ ಕುರಿತು ಕಾರ್ಯಕ್ರಮ ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ 8 ರಿಂದ 10 ಕಲಾತಂಡಗಳು ಭಾಗವಹಿಸಿ ಪ್ರದರ್ಶನ ನೀಡಿವೆ ಎಂದರು.
ಡಿಸೆಂಬರ ಮತ್ತು ಜನವರಿಯಲ್ಲಿ ಬಳ್ಳಾರಿ, ಚಿತ್ರದುರ್ಗ, ತುಮಕೂರು ಮತ್ತು ಮೈಸೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಗಡಿಭಾಗಗಳಲ್ಲಿ ಭಾಷಾ ಸೌಹಾರ್ದತೆ ಮತ್ತು ಸಾಂಸ್ಕೃತಿಕ ಸಾಮರಸ್ಯ ಪ್ರತಿನಿಧಿಸುವ ವಿಚಾರ ಸಂಕಿರಣ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ. ಜನವರಿಯಲ್ಲಿ ಬಾಗಲಕೋಟೆಯಲ್ಲಿ ಚಿಂತನ ಮಂಥನ ಶಿಬಿರವನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಯಲಾಟ ಅಕಾಡೆಮಿಯ ಸದಸ್ಯರಾದ ಭೀಮಪ್ಪ ಹುದ್ದಾರ, ಲಕ್ಷ್ಮಣ ದೇಸಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಉಪಸ್ಥಿತರಿದ್ದರು.
2023-24ನೇ ಸಾಲಿನ ಗೌರವ, ವಾರ್ಷಿಕ ಪ್ರಶಸ್ತಿ ಪುರಸ್ಕೃತರು
ಗೌರವ ಪ್ರಶಸ್ತಿ ಪುರಸ್ಕೃತರು: ಮೈಸೂರು ಜಿಲ್ಲೆಯ ಡಾ.ಡಿ.ಕೆ.ರಾಜೇಂದ್ರ (ಬಯಲಾಟ), ಬೆಳಗಾವಿಯ ಸಿದ್ರಾಮ ಸಾತಪ್ಪ ನಾಯಕ (ಸಣ್ಣಾಟ), ಬಾಗಲಕೋಟೆಯ ನಾರಾಯಣ ಪತ್ತಾರ (ಶ್ರೀಕೃಷ್ಣ ಪಾರಿಜಾತ), ಓಂಕಾರಮ್ಮ, ಕೆ.ಇಮಾಮ್‌ಸಾಬ್ (ದೊಡ್ಡಾಟ).ವಾರ್ಷಿಕ ಪ್ರಶಸ್ತಿ ಪುರಸ್ಕೃತರು: ವಿಜಯಪುರದ ಕೆ.ರಾಮಚಂದ್ರಪ್ಪ (ದೊಡ್ಡಾಟ), ಬಾಗಲಕೋಟೆಯ ಕೃಷ್ಣಪ್ಪ ಪೂಜಾರ (ಶ್ರೀಕೃಷ್ಣ ಪಾರಿಜಾತ), ಚಿತ್ರದುರ್ಗದ ಕೆ.ಎಂ.ರಘುಪಾಲಯ್ಯ, ಹಾವೇರಿಯ ಮಲ್ಲೇಶಪ್ಪ ಭಜಂತ್ರಿ, ರಾಯಚೂರಿನ ಅಮರೇಶ ತಿಮ್ಮಯ್ಯ (ದೊಡ್ಡಾಟ), ಬೆಳಗಾವಿಯ ಚಂದ್ರವ್ವ ನೀಲಪ್ಪನವರ (ಸಣ್ಣಾಟ), ದಾವಣಗೆರೆಯ ಎಂ.ಬಡಪ್ಪ (ದೊಡ್ಡಾಟ), ವಿಜಯಪುರದ ರುದ್ರಪ್ಪ ಸಾಳುಂಕೆ (ಬಯಲಾಟ), ಚುಕ್ಕನಕಲ್ಲು ರಾಮಣ್ಣ (ದೊಡ್ಡಾಟ), ತುಮಕೂರಿನ ತಿಪ್ಪಣ್ಣ ದೊಡ್ಡೆಗೌಡ (ಮೂಡಲಯಪಾಯ ಬಯಲಾಟ).
2024-25ನೇ ಸಾಲಿನ ಗೌರವ, ವಾರ್ಷಿಕ ಪ್ರಶಸ್ತಿ ಪುರಸ್ಕೃತರು
ಗೌರವ ಪ್ರಶಸ್ತಿ ಪುರಸ್ಕೃತರು: ಬಳ್ಳಾರಿ ಜಿಲ್ಲೆಯ ಎಚ್.ಎಂ.ಪಂಪಯ್ಯಸ್ವಾಮಿ, ವಿಜಯನಗರದ ಗಂಗಮ್ಮ, ಕೊಪ್ಪಳದ ತಿಮ್ಮಣ್ಣ ಚನ್ನದಾಸರ (ದೊಡ್ಡಾಟ), ಬಾಗಲಕೋಟೆಯ ಈಶ್ವರಪ್ಪ ಹಲಗಣಿ (ಶ್ರೀಕೃಷ್ಣ ಪಾರಿಜಾತ), ವಿಜಯಪುರದ ಶಿವಣ್ಣ ಬಿರಾದಾರ (ದೊಡ್ಡಾಟ).
ವಾರ್ಷಿಕ ಪ್ರಶಸ್ತಿ ಪುರಸ್ಕೃತರು: ಚಿತ್ರದುರ್ಗದ ಗುಗ್ ಮಲ್ಲಯ್ಯ (ದೊಡ್ಡಾಟ), ಬೆಳಗಾವಿಯ ಭರಮಪ್ಪ ಸತ್ತೆನ್ನವರ (ಶ್ರೀಕೃಷ್ಣ ಪಾರಿಜಾತ), ದಾವಣಗೆರೆಯ ಬಾಲಮ್ಮ ಕಾಟಪ್ಪ, ವಿಜಯನಗರದ ಡಿ.ಎಂ.ಯರಿಸ್ವಾಮಿ (ದೊಡ್ಡಾಟ), ಬಾಗಲಕೋಟೆಯ ಗ್ಯಾನಪ್ಪ ಮಾದರ (ಶ್ರೀಕೃಷ್ಣ ಪಾರಿಜಾತ), ತುಮಕೂರಿನ ಶಂಕರಪ್ಪ ಎ.ಬಿ (ಮೂಡಲಪಾಯ ಬಯಲಾಟ), ವಿಜಯನಗರದ ಕೊಟ್ಗಿ ಹಾಲೇಶ್ವರ (ದೊಡ್ಡಾಟ, ನೇಪಥ್ಯ), ವಿಜಯಪುರದ ರುದ್ರಗೌಡ ಬಿರಾದಾರ, ಧಾರವಾಡದ ಚೆನ್ನವೀರಪ್ಪ ಮುದಲಿಂಗಣ್ಣವರ (ದೊಡ್ಡಾಟ) ಹಾಗೂ ಬಳ್ಳಾರಿ ಜಿಲ್ಲೆಯ ಕೆ.ಹೊನ್ನೂರಸ್ವಾಮಿ (ತೊಗಲು ಗೊಂಬೆಯಾಟ).