ಕನ್ನಡಪ್ರಭ ವಾರ್ತೆ, ಬೆಂಗಳೂರು
ಬಿಬಿಎಂಪಿ ವ್ಯಾಪ್ತಿಯಲ್ಲಿ ವೈಟ್‌ಟಾಪಿಂಗ್ ರಸ್ತೆ ಸೇರಿದಂತೆ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ₹1,200 ಕೋಟಿ ವೆಚ್ಚಕ್ಕೆ ಘಟನೋತ್ತರ ಅನುಮೋದನೆ ಹಾಗೂ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿ ₹263 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಸೇರಿದಂತೆ ₹1,700 ಕೋಟಿ ಮೊತ್ತದ ಕಾಮಗಾರಿಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಜೂರಾತಿ ನೀಡಲಾಗಿದೆ.ಬೆಂಗಳೂರು ಪ್ರಮುಖ ರಸ್ತೆಗಳನ್ನು ವೈಟ್ ಟಾಪಿಂಗ್ ರಸ್ತೆಗಳಾಗಿ ಅಭಿವೃದ್ಧಿಪಡಿಸಲು ₹800 ಕೋಟಿ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿಗೆ ₹1,200 ಕೋಟಿಗಳ ಕ್ರಿಯಾಯೋಜನೆಗೆ 2024ರ ಜ.12ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಲಾಗಿದೆ.
ಬೈಯಪ್ಪನಹಳ್ಳಿ ಬಳಿ ಮೇಲ್ಸೇತುವೆ:ಬೈಯಪ್ಪನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಸಂಪರ್ಕಿಸಲು ಸೂಕ್ತ ರಸ್ತೆ, ಬಸ್ಸು, ಮೆಟ್ರೋ ವ್ಯವಸ್ಥೆ ಇಲ್ಲದೆ ಸಾವಿರಾರು ಮಂದಿ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಹೀಗಾಗಿ ಟರ್ಮಿನಲ್ ಸಂಪರ್ಕಿಸಲು ಐಒಸಿ ಜಂಕ್ಷನ್ ಬಳಿ ₹263 ಕೋಟಿ ವೆಚ್ಚದಲ್ಲಿ 1.5 ಕಿ.ಮೀ. ಉದ್ದದ ರೋಟರಿ ಮೇಲ್ಸೇತುವೆ ನಿರ್ಮಾಣ ಹಾಗೂ ಬೈಯಪ್ಪನಹಳ್ಳಿ ಲೆವೆಲ್ ಕ್ರಾಸಿಂಗ್ ಬಳಿ ಎರಡು ಹೆಚ್ಚುವರಿ ಪಥಗಳ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.₹210 ಕೋಟಿಯಲ್ಲಿ ಕುಡಿಯುವ ನೀರು:ಬಿಬಿಎಂಪಿ ವ್ಯಾಪ್ತಿಗೆ ನೂತನವಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳ ಪೈಕಿ ಮೊದಲ ಹಂತದಲ್ಲಿ ಕೈಬಿಟ್ಟಿರುವ ಹಳ್ಳಿಗಳಿಗೆ ಎರಡನೇ ಹಂತದಲ್ಲಿ ₹210 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.ಜತೆಗೆ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬೃಹತ್ ಮಳೆ ನೀರುಗಾಲುವೆಗಳ ಪುನರ್ ನಿರ್ಮಾಣ ಹಾಗೂ ಇತರೆ ಅಭಿವೃದ್ಧಿಗೆ ₹30 ಕೋಟಿ ಒದಗಿಸಲಾಗಿದೆ.