ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಾಲರಾ ರೋಗ ಪತ್ತೆಯಾದ ಹಿನ್ನೆಲೆಯಲ್ಲಿ ರಸ್ತೆ ಬದಿ ಕತ್ತರಿಸಿದ ಹಣ್ಣು ಮಾರಾಟ ಹಾಗೂ ತೆರೆದಿಟ್ಟ ಆಹಾರ ಮಾರಾಟವನ್ನು ನಿರ್ಬಂಧಿಸಿ ಬಿಬಿಎಂಪಿ ಸೋಮವಾರ ಆದೇಶಿಸಿದೆ.
ನಗರದ ಎಂಟು ವಲಯದಲ್ಲಿ ರಸ್ತೆ ಬದಿಗಳಲ್ಲಿ ಕತ್ತರಿಸಿದ ಹಣ್ಣು ಮತ್ತು ತೆರೆದಿಟ್ಟ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ಗಮನಿಸಬೇಕೆಂದು ಆರೋಗ್ಯ ಅಧಿಕಾರಿಗಳಿಗೆ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ನಗರದಲ್ಲಿ ಕಾಲರಾ ಕಾಣಿಸಿಕೊಳ್ಳುತ್ತಿರುವುದರಿಂದ ಆಯಾ ವಲಯದ ಆರೋಗ್ಯ ಪರಿವೀಕ್ಷಕರು ಹೋಟೆಲ್, ಅಂಗಡಿಗಳನ್ನು ತಪಾಸಣೆ ಮಾಡಬೇಕು. ನೀರಿನ ಗುಣಮಟ್ಟದ ಬಗ್ಗೆ ಪರಿಶೀಲನೆ ಮಾಡಬೇಕು. ಹೋಟೆಲ್‌ಗಳಲ್ಲಿ ಬಿಸಿ ನೀರಿನ ವ್ಯವಸ್ಥೆ ಜತೆಗೆ ಸ್ವಚ್ಚವಾಗಿಟ್ಟುಕೊಳ್ಳುವಂತೆ ಹೋಟೆಲ್ ಮಾಲೀಕರಿಗೆ ಸೂಚಿಸಬೇಕು.
ಸಾಂಕ್ರಾಮಿಕ ರೋಗಗಳು ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆಗಾಗಿ ಅಗತ್ಯವಾದ ಔಷಧಿಗಳನ್ನು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ನಮ್ಮ ಕ್ಲಿನಿಕ್, ಹೆರಿಗೆ ಆಸ್ಪತ್ರೆ, ರೆಫರಲ್ ಆಸ್ಪತ್ರೆಗಳಲ್ಲಿ ಲಭ್ಯವಿರುವಂತೆ ಕ್ರಮವಹಿಸಬೇಕು. ಅಗತ್ಯ ಇದ್ದಲ್ಲಿ ಪಾಲಿಕೆ ಅನುದಾನದಿಂದ ಔಷಧಿಗಳನ್ನು ಖರೀದಿಸುವಂತೆ ತಿಳಿಸಲಾಗಿದೆ.
ಸಾಂಕ್ರಾಮಿಕ ರೋಗಗಳನ್ನು ತಡೆಯಲು ಓಆರ್‌ಎಸ್ ಮತ್ತು ಹಾಲೋಜೆನ್ ಮಾತ್ರೆಗಳನ್ನು ಆರೋಗ್ಯ ಸಹಾಯಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ತಲುಪಿಸಬೇಕು. ಯಾವುದಾದರೂ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಲ್ಲಿ ತಕ್ಷಣ ಆರೋಗ್ಯ ವಿಭಾಗದ ಕ್ಷಿಪ್ರ ಪ್ರಕ್ರಿಯಾ ತಂಡವನ್ನು ಆ ಪ್ರದೇಶಕ್ಕೆ ಕಳುಹಿಸಬೇಕು. ಅಗತ್ಯ ಔಷಧಿಗಳನ್ನು ತೆಗೆದುಕೊಂಡು ಹೋಗಿ ಆ ಪ್ರದೇಶದಲ್ಲಿ ಚಿಕಿತ್ಸಾ ಶಿಬಿರವನ್ನು ತೆರೆದು ರೋಗ ಸಂಪೂರ್ಣವಾಗಿ ಗುಣಮುಖವಾಗುವವರೆಗೆ ಶಿಬಿರ ಇರುವಂತೆ ನೋಡಿಕೊಳ್ಳಬೇಕು. ಗಂಭೀರ ಸ್ವರೂಪದ ರೋಗಿಯನ್ನು ತ್ವರಿತವಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಲಾಗಿದೆ.