ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಬಜೆಟ್ ನಂತರ ಇದೀಗ ಬಿಬಿಎಂಪಿ ಬಜೆಟ್ ಮಂಡನೆಗೆ ಪಾಲಿಕೆ ಹಣಕಾಸು ವಿಭಾಗ ಸಿದ್ಧತೆ ನಡೆಸಿದೆ. ಈ ಮಾಸಾಂತ್ಯದೊಳಗೆ ಬಜೆಟ್ ಮಂಡಿಸಲು ನಿರ್ಧರಿಸಲಾಗಿದ್ದು, ಈ ಬಾರಿಯೂ ಬಜೆಟ್ ಗಾತ್ರ ₹10 ಸಾವಿರ ಕೋಟಿ ದಾಟುವ ನಿರೀಕ್ಷೆ ಹೊಂದಲಾಗಿದೆ.
ಪ್ರತಿ ಬಾರಿ ರಾಜ್ಯ ಸರ್ಕಾರದ ಅನುದಾನ ಆಧರಿಸಿ ಬಿಬಿಎಂಪಿ ಬಜೆಟ್ ಸಿದ್ಧಪಡಿಸಲಾಗಿದೆ. ರಾಜ್ಯ ಬಜೆಟ್‌ನಲ್ಲಿ ಈ ಬಾರಿ ವಿಶೇಷ ಮೂಲಸೌಕರ್ಯ ಅನುದಾನ ₹3 ಸಾವಿರ ಕೋಟಿ ಹಾಗೂ ರಾಜ್ಯ ಹಣಕಾಸು ಆಯೋಗದ ₹589.57 ಕೋಟಿ ಸೇರಿದಂತೆ ಒಟ್ಟು ₹3,589.57 ಕೋಟಿ ಅನುದಾನ ಮೀಸಲಿಡಲಾಗಿದೆ.
ಆನುದಾನದ ಜತೆಗೆ ಆಸ್ತಿ ತೆರಿಗೆಯಿಂದ ₹4,600ರಿಂದ ₹4,800 ಕೋಟಿ, ಪ್ರೀಮಿಯಂ ಎಫ್‌ಎಆರ್, ನೂತನ ಜಾಹೀರಾತು ನೀತಿಯಿಂದ ₹2 ಸಾವಿರ ಕೋಟಿ ಸೇರಿದಂತೆ ವಿವಿಧ ಮೂಲಗಳಿಂದ ಹೆಚ್ಚುವರಿಯಾಗಿ 500ರಿಂದ 600 ಕೋಟಿ ರು. ಸೇರಿ ₹7 ಸಾವಿರ ಕೋಟಿಗೂ ಹೆಚ್ಚಿನ ಪ್ರಮಾಣದ ಬಿಬಿಎಂಪಿಯ ಆದಾಯ ಸಂಗ್ರಹದ ಗುರಿ ಹೊಂದಲಾಗುತ್ತಿದೆ.
ಹೀಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನ, ಬಿಬಿಎಂಪಿ ಆದಾಯ ಸೇರಿ ₹11 ಸಾವಿರ ಕೋಟಿಗೂ ಹೆಚ್ಚಿನ ಆದಾಯದ ನಿರೀಕ್ಷೆ ಹೊಂದಿದ ಬಜೆಟ್ ಸಿದ್ಧಪಡಿಸಲಾಗುತ್ತಿದೆ. ಅದರ ಪ್ರಕಾರ ಬಿಬಿಎಂಪಿ ಬಜೆಟ್ ಗಾತ್ರ ₹10 ಸಾವಿರ ಕೋಟಿ ದಾಟುವ ನಿರೀಕ್ಷೆಯಿದೆ.ಬಾಕ್ಸ್...
28-29ಕ್ಕೆ ಬಜೆಟ್ ಮಂಡನೆ?
ಬಿಬಿಎಂಪಿ ಹಣಕಾಸು ವಿಭಾಗ ಈಗಾಗಲೇ ಬಜೆಟ್ ಸಿದ್ಧತಾ ಕಾರ್ಯ ಬಹತೇಕ ಪೂರ್ಣಗೊಳಿಸಿದೆ. ರಾಜ್ಯ ಸರ್ಕಾರ ಘೋಷಿಸಿರುವ ಯೋಜನೆಗಳನ್ನು ಬಜೆಟ್‌ನಲ್ಲಿ ಸೇರಿಸುವ ಕಾರ್ಯ ಚಾಲ್ತಿಯಲ್ಲಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ಅದು ಪೂರ್ಣಗೊಳ್ಳಲಿದೆ. ಅದಾದ ನಂತರ ಬಜೆಟನ್ನು ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸಲಾಗುತ್ತದೆ.
ಇವೆಲ್ಲ ಕಾರ್ಯಕ್ಕೆ ಐದರಿಂದ ಆರು ದಿನಗಳು ಬೇಕಾಗಲಿದೆ. ಸದ್ಯ ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿರುವಂತೆ ಈ ಮಾಸಾಂತ್ಯದಲ್ಲಿ ಅಂದರೆ ಫೆ.28 ಅಥವಾ 29ಕ್ಕೆ ಬಿಬಿಎಂಪಿ ಬಜೆಟ್ ಮಂಡನೆ ಮಾಡಲಾಗುತ್ತದೆ.
ಈ ತಿಂಗಳ ಅಂತ್ಯದೊಳಗೆ ಬಿಬಿಎಂಪಿ ಬಜೆಟ್ ಮಂಡಿಸಲಾಗುವುದು. ರಾಜ್ಯ, ಕೇಂದ್ರ ಸರ್ಕಾರಗಳ ಅನುದಾನ, ಬಿಬಿಎಂಪಿ ಆದಾಯಕ್ಕನುಗುಣವಾಗಿ ಬಜೆಟ್ ಗಾತ್ರ ಇರಲಿದೆ. ಫೆ. 28-29ಕ್ಕೆ ಬಜೆಟ್ ಮಂಡಿಸುವ ಸಾಧ್ಯತೆಯಿದೆ -ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ, ಬಿಬಿಎಂಪಿ.