ಬಿಡಿಎ ವೆಬ್‌ಸೈಟ್‌ನಲ್ಲಿ ತಾಂತ್ರಿಕ ಸಮಸ್ಯೆ: ತೆರಿಗೆದಾರರ ಪರದಾಟ

KannadaprabhaNewsNetwork | Published : May 8, 2024 1:33 AM

ಸಾರಾಂಶ

ತೆರಿಗೆ ಕಟ್ಟಲು ಅವಕಾಶವೇ ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದು ಮಾಹಿತಿಯೂ ಅಲಭ್ಯವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆಸ್ತಿ ತೆರಿಗೆ ಪಾವತಿಸುವ ಗ್ರಾಹಕರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನ ವೆಬ್‍ಸೈಟನ್ನು ಸ್ಥಗಿತಗೊಳಿಸಿದ್ದು, ಗ್ರಾಹಕರು ಪರದಾಡುವಂತಾಗಿದೆ.

ಮಾರ್ಚ್-ಏಪ್ರಿಲ್‍ನಲ್ಲೇ ವಾರ್ಷಿಕ ತೆರಿಗೆ ಪಾವತಿಸಲು ದರ ನಿಗದಿ ಮಾಡಲಾಗುತ್ತದೆ. ಆದರೆ ನವೀಕೃತ ಬಿಡಿಎ ವೆಬ್‍ಸೈಟ್‍ನಲ್ಲಿ ಇದರ ಬಗ್ಗೆ ಮಾಹಿತಿಯಿಲ್ಲ. ನಿಮ್ಮ ಆಸ್ತಿ ತೆರಿಗೆಯನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ಆನ್‍ಲೈನ್‍ನಲ್ಲಿ ಪಾವತಿಸಿ ಎಂಬ ಅಕ್ಷರದ ಸಾಲುಗಳ ಕೆಳಗಡೆ `ಈಗ ಆಸ್ತಿ ತೆರಿಗೆ ಪಾವತಿ’ ಎಂದು ವೆಬ್‍ಸೈಟ್‍ನ ಮುಖಪುಟದಲ್ಲಿ ತೋರಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ, ಯಾವುದೇ ಮಾಹಿತಿ ಬರುವುದಿಲ್ಲ. ಬದಲಿಗೆ ಮರಳಿ ಮುಖಪುಟದತ್ತ ಹೋಗುತ್ತದೆ.

ವೆಬ್‌ಸೈಟ್‌ನಲ್ಲಿ ಇಂತಹ ತಾಂತ್ರಿಕ ಸಮಸ್ಯೆ ಇದ್ದರೂ ಈವರೆಗೂ ಬಿಡಿಎ ಗ್ರಾಹಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಇದರಿಂದಾಗಿ ಗ್ರಾಹಕರು ಆಸ್ತಿ ತೆರಿಗೆ ಪಾವತಿಗಾಗಿ ಬಿಡಿಎ ಕಚೇರಿ, ಬೆಂಗಳೂರು ಒನ್‌ ಕಚೇರಿಗಳಿಗೆ ನಿತ್ಯವೂ ಅಲೆದಾಡುವಂತಾಗಿದೆ. ಈ ಕುರಿತು ಬಿಡಿಎ ಅಧಿಕಾರಿಗಳನ್ನು ವಿಚಾರಿಸಿದರೆ ಯಾರೂ ಸರಿಯಾದ ಮಾಹಿತಿ ಕೊಡುವುದಿಲ್ಲ. ವೆಬ್‌ಸೈಟ್‌ ಸರಿಯಾಗಿದ್ದು, ಆನ್‌ಲೈನ್‌ನಲ್ಲೇ ತೆರಿಗೆ ಪಾವತಿಸಿ ಎಂದು ಪುಕ್ಕಟೆ ಸಲಹೆ ಕೊಡುತ್ತಾರೆ ವಿನಃ ಇರುವಂತ ತಾಂತ್ರಿಕ ಸಮಸ್ಯೆ ನಿವಾರಿಸುವ ಕಡೆಗೆ ಗಮನ ಹರಿಸುತ್ತಿಲ್ಲ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಆಕ್ತಿ ತೆರಿಗೆ ಪಾವತಿಗೆ ಈಗಾಗಲೇ ತಡವಾಗಿದೆ. ದರ ಎಷ್ಟು ಎಂಬುದು ಗೊತ್ತಿಲ್ಲ. ಯಾವಾಗ ಕಟ್ಟಬೇಕು ಎಂಬ ಬಗ್ಗೆ ಮಾಹಿತಿಯಿಲ್ಲ. ಒಟ್ಟೊಟ್ಟಿಗೆ ಪಾವತಿಸಬೇಕೆಂದರೆ ನಮಗೆ ಹೊರೆಯಾಗುತ್ತದೆ. ಜೊತೆಗೆ ಬಿಡಿಎ ವೆಬ್‌ಸೈಟ್‌ ತಾಂತ್ರಿಕ ಸಮಸ್ಯೆಯಿಂದ ತಡವಾದರೆ ಅದಕ್ಕೆ ಹೆಚ್ಚುವರಿ ಶುಲ್ಕವನ್ನು ಕೂಡ ಗ್ರಾಹಕರೇ ಭರಿಸಬೇಕಾಗುತ್ತದೆ ಎಂದು ಹಲವರು ಅಳಲು ತೋಡಿಕೊಂಡಿದ್ದಾರೆ.--ಸಮಸ್ಯೆಗೆ ಶೀಘ್ರ ಪರಿಹಾರ: ಬಿಡಿಎ

ಈ ಹಿಂದೆ ಕಿಯೋನಿಕ್ಸ್ ಕಡೆಯಿಂದ ವೆಬ್‍ಸೈಟ್ ಮತ್ತು ಅದರ ಲಿಂಕ್ ಅನ್ನು ಸಿದ್ಧಪಡಿಸಲಾಗಿತ್ತು. ಆದರೆ ಕಿಯೋನಿಕ್ಸ್‌ಗೆ 4ಜಿಯಲ್ಲಿ ವಿನಾಯಿತಿ ಇಲ್ಲದ ಹಿನ್ನೆಲೆಯಲ್ಲಿ ಈ ಬಾರಿ ಇ-ಗೌವರ್‍ನೆನ್ಸ್ ಕಡೆಯಿಂದ ಮಾಡಿಸಲಾಗುತ್ತಿದೆ. ಹೀಗಾಗಿ ವೆಬ್‍ಸೈಟ್ ನಿರ್ಮಾಣದ ಕುರಿತು ತಾಂತ್ರಿಕ ಸಮಸ್ಯೆಯಾಗಿದ್ದರಿಂದ ತೆರಿಗೆ ಪಾವತಿಗೆ ವೆಬ್ ಲಿಂಕ್ ಬಿಟ್ಟಿಲ್ಲ. ಕೆಲವೇ ದಿನಗಳಲ್ಲಿ ತಯಾರಾಗುತ್ತದೆ. ಆನ್‍ಲೈನ್ ತೆರಿಗೆಗೆ ಅವಕಾಶ ನೀಡಲಾಗುವುದು. ತಾಂತ್ರಿಕ ಸಮಸ್ಯೆ ನಿವಾರಣೆಗೆ ಎಲ್ಲ ರೀತಿಯಲ್ಲೂ ಪ್ರಾಧಿಕಾರ ಕ್ರಮಕೈಗೊಂಡಿದೆ ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ.

Share this article